ಕಾರ್ತಿ ಚಿದಂಬರಂ ನಿವಾಸ, ಕಚೇರಿಯಲ್ಲಿ ಇ.ಡಿ ಶೋಧ

7

ಕಾರ್ತಿ ಚಿದಂಬರಂ ನಿವಾಸ, ಕಚೇರಿಯಲ್ಲಿ ಇ.ಡಿ ಶೋಧ

Published:
Updated:
ಕಾರ್ತಿ ಚಿದಂಬರಂ ನಿವಾಸ, ಕಚೇರಿಯಲ್ಲಿ ಇ.ಡಿ ಶೋಧ

ನವದೆಹಲಿ: ಏರ್‌ಸೆಲ್‌ –ಮ್ಯಾಕ್ಸಿಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಕಾರ್ತಿ ಚಿದಂಬರಂ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಶನಿವಾರ ಶೋಧ ನಡೆಸಿದೆ.

ಕಾರ್ತಿ ಅವರ ತಂದೆ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರ ದೆಹಲಿ ನಿವಾಸದಲ್ಲೂ ಶೋಧ ನಡೆದಿದೆ.

‘ಕಾರ್ತಿ ಚಿದಂಬರಂ ಅವರ ಚೆನ್ನೈಯಲ್ಲಿರುವ ಆಪ್ತ ಸಹಾಯಕ ಮತ್ತು ಲೆಕ್ಕ ಪರಿಶೋಧಕರ ಮನೆಗಳಲ್ಲೂ ಶೋಧ ನಡೆದಿದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ‘ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

‘ಅಧಿಕಾರಿಗಳಿಗೆ ಮನೆಯಲ್ಲಿ ಏನೂ ಸಿಗದ ಕಾರಣ ಮುಜುಗರಗೊಂಡು ಕ್ಷಮೆಯಾಚಿಸಿ ತೆರಳಿದ್ದಾರೆ’ ಎಂದು ಪಿ. ಚಿದಂಬರಂ ತಿಳಿಸಿದ್ದಾರೆ.

‘ಶೋಧ ಕಾರ್ಯಕ್ಕೆ ಬಂದ ಅಧಿಕಾರಿಗಳು ಸರ್ಚ್‌ ವಾರಂಟ್‌ ಹೊಂದಿದ್ದರು. ಆದ್ದರಿಂದ ನಾನು ಅವರಿಗೆ ಅಡ್ಡಿ ಪಡಿಸಿಲ್ಲ. ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆ ಎಫ್‌ಐಆರ್‌ ದಾಖಲಿಸದಿದ್ದರೂ ಶೋಧ ನಡೆಸಿರುವುದಕ್ಕೆ ನನ್ನ ಪ್ರತಿಭಟನೆ ದಾಖಲಿಸುತ್ತೇನೆ’ ಎಂದಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿ ಇಡಿ ಮತ್ತು ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಆಧಾರದ ಮೇಲೆ ಶೋಧ ನಡೆಸಲಾಗಿದೆ’ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಜನವರಿ 16ರಂದು ವಿಚಾರಣೆಗೆ ಹಾಜರಾಗಲು ಕಾರ್ತಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ.

ಜನರ ಗಮನ ಬೇರೆಡೆ ಸೆಳೆಯುವ ತಂತ್ರ:

ಈ ಶೋಧ ಕಾರ್ಯವು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

‘ಜನರ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಬಿಜೆಪಿಯವರು ನಿಸ್ಸೀಮರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry