‘ಭಯ ಬದಿಗಿಟ್ಟು ಮಾತನಾಡಿ’

7
ಕೇಂದ್ರ ಸಚಿವರು, ಬಿಜೆಪಿ ಮುಖಂಡರಿಗೆ ಯಶವಂತ ಸಿನ್ಹಾ ಸಲಹೆ

‘ಭಯ ಬದಿಗಿಟ್ಟು ಮಾತನಾಡಿ’

Published:
Updated:
‘ಭಯ ಬದಿಗಿಟ್ಟು ಮಾತನಾಡಿ’

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿರುದ್ಧ ನಾಲ್ವರು ನ್ಯಾಯಮೂರ್ತಿಗಳು ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಅದೇ ರೀತಿಯಲ್ಲಿ, ಕೇಂದ್ರ ಸಚಿವರು ಮತ್ತು ಪಕ್ಷದ ಸಹೋದ್ಯೋಗಿಗಳು ಭಯವನ್ನು ಬದಿಗಿಟ್ಟು ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ಧೈರ್ಯವಾಗಿ ಮಾತನಾಡುವಂತೆ ಬಿಜೆಪಿಯ ಹಿರಿಯ ಮುಖಂಡ ಯಶವಂತ ಸಿನ್ಹಾ ಶನಿವಾರ ಸಲಹೆ ನೀಡಿದ್ದಾರೆ.

ನಾಲ್ವರು ನ್ಯಾಯಮೂರ್ತಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ ಸಿನ್ಹಾ, ಪ್ರಸ್ತುತ ದೇಶದಲ್ಲಿ 1975–77ರಲ್ಲಿ ಇದ್ದ ತುರ್ತು ಪರಿಸ್ಥಿತಿಯಂತಹ ವಾತಾವರಣ ಇದೆ ಎಂದು ಹೇಳಿದ್ದಾರೆ. ಜೊತೆಗೆ, ಸಂಸತ್‌ ಅಧಿವೇಶನದ ಅವಧಿಯನ್ನು ಕಡಿತಗೊಳಿಸಿರುವುದಕ್ಕೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಂಸತ್ತು ರಾಜಿ ಮಾಡಿಕೊಂಡರೆ, ಸುಪ್ರೀಂ ಕೋರ್ಟ್‌ ವ್ಯವಸ್ಥಿತವಾಗಿರುವುದಿಲ್ಲ. ಇದರಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.

‘ಪ್ರಜಾತಂತ್ರ ಅಪಾಯದಲ್ಲಿದೆ ಎಂದು ನಾಲ್ವರು ನ್ಯಾಯಮೂರ್ತಿಗಳು ಹೇಳುತ್ತಾರೆಂದರೆ ಅವರ ಮಾತನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳ ರೀತಿಯಲ್ಲೇ, ಸಂಪುಟದಲ್ಲಿ ಎಲ್ಲ ಸಚಿವರು ಸಮಾನರಾಗಿದ್ದು ಅವರಲ್ಲಿ ಪ್ರಧಾನಿ ಮೊದಲಿಗರು ಮಾತ್ರ ಎಂದು ಅವರು ಹೇಳಿದ್ದಾರೆ.

‘ಈ ಸರ್ಕಾರದ ಸಂಪುಟ ಸದಸ್ಯರಲ್ಲಿ ಭಯ ಇದೆ ಎಂಬುದು ನನಗೆ ಗೊತ್ತಿದೆ. ಇದು ಕೂಡ ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಎಂದು ಸಿನ್ಹಾ ಪ್ರತಿಪಾದಿಸಿದ್ದಾರೆ.

‘ಬಿಕ್ಕಟ್ಟು ಬಗೆಹರಿಯದಿದ್ದರೆ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕು’

ಚೆನ್ನೈ (ಪಿಟಿಐ): ಉಂಟಾಗಿರುವ ಬಿಕ್ಕಟ್ಟನ್ನು ಸ್ವತಃ ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಸಾಧ್ಯವಾಗದೇ ಇದ್ದರೆ ಈ ವಿಚಾರದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಧ್ಯಪ್ರವೇಶಿಸಬೇಕು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಶನಿವಾರ ಹೇಳಿದ್ದಾರೆ.

ಪ್ರಜಾಪ್ರಭುತ್ವವನ್ನು ರಕ್ಷಿಸುವುದಕ್ಕಾಗಿ ನ್ಯಾಯಮೂರ್ತಿಗಳು ಪರಸ್ಪರ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಪರಿಹರಿಸಲು ಯತ್ನಿಸಬೇಕು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry