ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ಒಡ್ಡುವ ಕೋಮುವಾದಿ ಬೋನಿಗೆ ಬೀಳದಿರಿ’

ಕರ್ನಾಟಕ ಕಾಂಗ್ರೆಸ್‌ ಮುಖಂಡರಿಗೆ ರಾಹುಲ್‌ ಸಲಹೆ
Last Updated 13 ಜನವರಿ 2018, 20:19 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಡ್ಡುವ ಕೋಮುವಾದಿ ಕಾರ್ಯಸೂಚಿಯ ಬೋನಿಗೆ ಬೀಳದೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಮತ್ತು ಉತ್ತಮ ಕೆಲಸಕಾರ್ಯಗಳನ್ನು ಜನರ ಮುಂದೆ ಇಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟಕಕ್ಕೆ ಸೂಚನೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸಬೇಕಾದ ರಣತಂತ್ರ ಕುರಿತು ಅವರು ಶನಿವಾರ ಇಲ್ಲಿ ಕರ್ನಾಟಕದ ಕಾಂಗ್ರೆಸ್ ತಲೆಯಾಳುಗಳ ಜೊತೆ ಪ್ರತ್ಯೇಕವಾಗಿ ಮತ್ತು ಸಾಮೂಹಿಕವಾಗಿ ಸಮಾಲೋಚನೆ ನಡೆಸಿದರು.

ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತಿ ಚುನಾವಣೆ ಗೆಲ್ಲುವ ಬಿಜೆಪಿಯ ಕಾರ್ಯತಂತ್ರಕ್ಕೆ ಬಲಿಬೀಳದಂತೆ ರಾಜ್ಯ ಕಾಂಗ್ರೆಸ್ ಎಚ್ಚರಿಕೆ ವಹಿಸಬೇಕು. ಜನರ ಮುಂದಿರಿಸಿ ಮತ ಬೇಡಲು ರಾಜ್ಯ ಕಾಂಗ್ರೆಸ್ ಸರ್ಕಾರದ ಉತ್ತಮ ಸಾಧನೆಗಳು ಬೇಕಾದಷ್ಟಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರಮುಕ್ತವಾದ ಸ್ವಚ್ಛ ಸರ್ಕಾರ ನೀಡಿದ್ದಾರೆ. ಯಾರೂ ಪ್ರಶ್ನಿಸಲಾರದ ವ್ಯಕ್ತಿಗತ ಸಚ್ಚಾರಿತ್ರ್ಯ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷ ಈ ವಿಷಯಗಳನ್ನೇ ಚುನಾವಣಾ ವಿಷಯ ಮಾಡಬೇಕು ಎಂದು ಅವರು ನಿರ್ದೇಶನ
ನೀಡಿದ್ದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಅವರು ಮುಂಬರುವ ಫೆಬ್ರುವರಿ 10ರಿಂದ 12ರ ತನಕ ಬೆಂಗಳೂರು ವಿಭಾಗದಲ್ಲಿ ಚುನಾವಣಾ ಪ್ರವಾಸ ಕೈಗೊಳ್ಳಲಿದ್ದಾರೆ. ಆನಂತರದ ದಿನಗಳಲ್ಲಿ ರಾಹುಲ್ ಅವರು ಕೈಗೊಳ್ಳಲಿರುವ ರಾಜ್ಯ ಪ್ರವಾಸ, ಭೇಟಿ ನೀಡಬೇಕಿರುವ ಮಠ, ಮಂದಿರ, ಮಸೀದಿ, ಇಗರ್ಜಿಗಳನ್ನು ರಾಜ್ಯ ಕಾಂಗ್ರೆಸ್ ತಲೆಯಾಳುಗಳು ಸಮಾಲೋಚಿಸಿ ನಿರ್ಧರಿಸಲಿದ್ದಾರೆ.

ಮಾರ್ಚ್ ಮೊದಲ ವಾರದಿಂದ ಕಾಂಗ್ರೆಸ್ ನಾಯಕರು ರಾಜ್ಯದಾದ್ಯಂತ ಒಂದೇ ಬಸ್‌ನಲ್ಲಿ ಪ್ರವಾಸ ಕೈಗೊಂಡು ಎಲ್ಲ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ನಾಯಕರ ನಡುವೆ ವೈಮನಸ್ಯ ಇಲ್ಲ ಎಂಬ ಸಂದೇಶ ಹೊಮ್ಮಿಸುವುದು ಈ ಪ್ರವಾಸದ ಉದ್ದೇಶ. ರಾಹುಲ್ ರಾಜ್ಯ ಚುನಾವಣಾ ಪ್ರವಾಸವು, ಅವರು ಇತ್ತೀಚಿಗೆ ಕೈಗೊಂಡಿದ್ದ ಗುಜರಾತ್ ಚುನಾವಣಾ ಪ್ರವಾಸದ ಸುಧಾರಿತ ರೂಪ ಹೊಂದಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಈ ಚುನಾವಣೆ ನನ್ನ ಮತ್ತು ಯಡಿಯೂರಪ್ಪ ಅಥವಾ ನನ್ನ ಮತ್ತು ನರೇಂದ್ರ ಮೋದಿ ನಡುವಣ ಹಣಾಹಣಿ ಅಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಮತ್ತು ನಮ್ಮ ಸರ್ಕಾರದ ಸಾಧನೆಗಳ ಆಧಾರದ ಮೇಲೆ ನಡೆಯುವ ಚುನಾವಣೆ’ ಎಂದು ಸಿದ್ದರಾಮಯ್ಯ ಹೇಳಿದರು.

ಮನುಷ್ಯತ್ವ ಇರುವ ಹಿಂದುತ್ವವನ್ನು ನಾವು ಪಾಲಿಸುತ್ತೇವೆ. ಬೇರೆ ಧರ್ಮಗಳ ಕುರಿತು ಸಹಿಷ್ಣುತೆ ಹೊಂದಿರುವುದೇ ನಿಜವಾದ ಹಿಂದು ಧರ್ಮ ಎಂದು ಅವರು ಹೇಳಿದರು.

ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ, ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ,  ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ರಾಜ್ಯ ಚುನಾವಣಾ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಕಾರ್ಯದರ್ಶಿಗಳಾದ ಮಧುಗೌಡ್ ಯಕ್ಷಿ, ಮಾಣಿಕ್ ಠಾಗೂರ್, ಸಾಕೆ ಸೈಲಜಾನಾಥ್, ಹಾಗೂ ಪಿ.ಸಿ.ವಿಷ್ಣುನಾಥ್ ಅವರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT