ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಿಲ್ಲ ಎನ್ನಲಾರೆ, ಅಗೋಚರ ಶಕ್ತಿ ಇದ್ದೇ ಇದೆ: ಸಿದ್ದರಾಮಯ್ಯ

Last Updated 13 ಜನವರಿ 2018, 19:57 IST
ಅಕ್ಷರ ಗಾತ್ರ

ನವದೆಹಲಿ: 'ಯಾವುದೋ ಒಂದು ಕಾಲದಲ್ಲಿ ನಾನು ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ, ಈಗ ಹೋಗುತ್ತೇನೆ. ದೇವರಿಲ್ಲ ಎಂದು ಹೇಳಲಾರೆ. ಒಂದು ಅಗೋಚರ ಶಕ್ತಿ ಇದ್ದೇ ಇದೆ. ಅದು ಇಲ್ಲದೆ ಹೋಗಿದ್ದರೆ ಪ್ರಕೃತಿ ಹೀಗೆಲ್ಲ ಇರಲು ಸಾಧ್ಯವೇ ಇಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯ ಕೋಮುವಾದಿ ಕಾರ್ಯಸೂಚಿ ಮತ್ತು ಕಟ್ಟರ್ ಹಿಂದುತ್ವ, ರಾಹುಲ್ ಗಾಂಧಿ ಅವರಿಂದ ದೇವಾಲಯ ಭೇಟಿಗಳ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.

‘ಹುಡುಗನಾಗಿದ್ದಾಗ ದೇವಾಲಯಗಳಿಗೆ ಹೋಗ್ತಿದ್ದೆ. ಮಧ್ಯ ಬಿಟ್ಬಿಟ್ಟೆ. ಈಗ ಹೋಗ್ತಿದ್ದೇನೆ. ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ದಿನಗಳಲ್ಲಿ, ಸಮಾಜವಾದಿ ಯುವಜನ ಸಭಾದಲ್ಲಿದ್ದ ಕಾಲದಲ್ಲಿ ದೇವಸ್ಥಾನಗಳಿಂದ ದೂರ ಉಳಿದಿದ್ದೆ. ಶಾಸಕ ಆದ ಮೇಲೆ ಪುನಃ ಹೋಗ್ತಿದ್ದೇನೆ. ಆದರೆ ದೇವಸ್ಥಾನಕ್ಕೆ ಹೋಗೋದಷ್ಟೇ ಹಿಂದುತ್ವ ಅಲ್ಲ. ಮನೆಯಲ್ಲಿ ನನ್ನ ಪತ್ನಿ ಮತ್ತು ಪುತ್ರ ಇಬ್ಬರೂ ದೈವಭಕ್ತರು. ನಿತ್ಯ ಪೂಜೆ ಮಾಡುತ್ತಾರೆ. ಮಾಡಬೇಡಿ ಎಂದು ಹೇಳಲಾರೆ. ಅದು ಅವರವರ ನಂಬಿಕೆಗೆ ಬಿಟ್ಟ ವಿಷಯ’ ಎಂದರು.

ದೇವರು ಎಲ್ಲ ಕಡೆ ಇದ್ದಾನೆ. ಗುಡಿಯಲ್ಲಿ ಮಾತ್ರ ಇದ್ದಾನಾ? ಏನೋ ನಂಬಿಕೆ ಮೇಲೆ ಜನ ದೇವಸ್ಥಾನಗಳಿಗೆ ಹೋಗುತ್ತಾರೆ. ನಾನು ತಿರುಪತಿ ತಿಮ್ಮಪ್ಪ, ಚಾಮುಂಡೇಶ್ವರಿ, ನಂಜುಂಡೇಶ್ವರ, ಮಲೆ ಮಾದೇಶ್ವರ ಹಾಗೂ ನಮ್ಮೂರ ಸಿದ್ದರಾಮೇಶ್ವರ ದೇವಸ್ಥಾನಗಳಿಗೆ ಹೋಗುತ್ತೇನೆ. ಹುಡುಕಿಕೊಂಡು ಕಾಶ್ಮೀರ, ಪಂಡರಾಪುರ, ತಮಿಳುನಾಡಿಗೆಲ್ಲ ಹೋಗಲ್ಲ. ಮಾದೇಶ್ವರ ಬೆಟ್ಟಕ್ಕೆ, ಮಂಟೆಸ್ವಾಮಿಗೆ, ಸಿದ್ದಪ್ಪಾಜಿಗೆ ನಡೆದುಕೊಳ್ಳುವ ಜನ ಸಾಮಾಜಿಕ ಏಣಿಶ್ರೇಣಿಯ ಕೆಳಭಾಗದಲ್ಲಿ ಇಡಲಾಗಿರುವವರು. ಅಲ್ಲಿಗೆ ಹೋಗದಿರುವವರು ಹಿಂದುಗಳಲ್ಲ ಅಂತ ಹೇಳಲು ಬರುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಹುಡುಗನಾಗಿದ್ದಾಗ ಸಿದ್ದರಾಮೇಶ್ವರನಿಗೆ ವೀರಮಕ್ಕಳನ್ನು ಕುಣಿಸುತ್ತಾರೆ. ನಾನು ವೀರಮಕ್ಕಳ ಕುಣಿತ ಕುಣಿಯಲು ಸೇರಿದ್ದವನು. ಯೋಗಿ ಆದಿತ್ಯನಾಥ ಅವರು ನನಗಿಂತ ಒಳ್ಳೆಯ ಹಿಂದೂ ಆಗಲು ಸಾಧ್ಯವಿಲ್ಲ ಎಂದರು.

ಪಿ.ಎಫ್.ಐ ಮಾತ್ರ ಯಾಕೆ, ಶ್ರೀರಾಮಸೇನೆಯನ್ನು ಯಾಕೆ ನಿಷೇಧಿಸಕೂಡದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಪ್ರಶ್ನೆ ಹಾಕಿದರು.

ಕೋಮುವಾದಿ ಚಟುವಟಿಕೆಗಳಲ್ಲಿ ಯಾವ್ಯಾವ ಸಂಘಟನೆಗಳಿದ್ದಾವೆ, ಕೋಮುವಾದಿ ಬೀಜ ಬಿತ್ತಿ ಬಿಗುವಿನ ಕೋಮುಗಳ ನಡುವೆ ಬಿಗುವಿನ ವಾತಾವರಣ ಮೂಡಿಸುವವರು, ಸಂಘಟಿತ ಅಪರಾಧಗಳನ್ನು ಯಾರು ಮಾಡುತ್ತಿದ್ದಾರೆ ಮಾಹಿತಿ- ದಾಖಲಾತಿ ಸಂಗ್ರಹಿಸಲು ಹೇಳಿದ್ದೇನೆ ಎಂದರು.

ಕೋಮುವಾದಿ ಚಟುವಟಿಕೆ ಯಾರು ಮಾಡಿದರೂ ಸರ್ಕಾರ ಸಹಿಸುವುದಿಲ್ಲ. ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ. ಸಂಘಟನೆಗಳನ್ನು ನಮ್ಮ ಸರ್ಕಾರ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಎಂ.ಐ.ಎಂ., ಪಿಎಫ್ಐ, ಎಸ್.ಡಿ.ಪಿ.ಐ., ಬಜರಂಗದಳ, ಶ್ರೀರಾಮಸೇನೆ, ಆರೆಸ್ಸೆಸ್, ವಿಶ್ವಹಿಂದು ಪರಿಷತ್ ಯಾರನ್ನೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT