ಟ್ರಂಪ್‌ ಆರೋಗ್ಯ ‘ಅತ್ಯುತ್ತಮ’

7
ಅಧ್ಯಕ್ಷ ಹುದ್ದೆ ಏರಿದ ನಂತರ ಮೊದಲ ಬಾರಿ ದೈಹಿಕ ಆರೋಗ್ಯ ತಪಾಸಣೆ

ಟ್ರಂಪ್‌ ಆರೋಗ್ಯ ‘ಅತ್ಯುತ್ತಮ’

Published:
Updated:
ಟ್ರಂಪ್‌ ಆರೋಗ್ಯ ‘ಅತ್ಯುತ್ತಮ’

ವಾಷಿಂಗ್ಟನ್ : ‘ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಉತ್ತಮವಾಗಿದೆ’ ಎಂದು ವೈದ್ಯ ರೊನಿ ಜಾಕ್ಸನ್ ಅವರು ಶನಿವಾರ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಹುದ್ದೆಗೆ ಏರಿದ ನಂತರ ಇದೇ ಮೊದಲ ಬಾರಿ ಟ್ರಂಪ್ ಅವರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.

ವಾಲ್ಟರ್ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ನಡೆದ ಆರೋಗ್ಯ ತಪಾಸಣೆಯಲ್ಲಿ ಟ್ರಂಪ್ ಅವರ ರಕ್ತದೊತ್ತಡ, ಕೊಬ್ಬಿನಂಶ, ಹೃದಯ ಬಡಿ, ತೂಕ ಮತ್ತು ಮಧುಮೇಹ ಪ್ರಮಾಣವನ್ನು ಪರೀಕ್ಷಿಸಲಾಗಿದೆ.

‘ನನ್ನ ಪ್ರಕಾರ ತಪಾಸಣೆ ವರದಿ ಸಹಜವಾಗಿಯೇ ಇರಲಿದೆ. ಒಂದೊಮ್ಮೆ ಹಾಗಿಲ್ಲವಾದರೆ ನನಗೇ ಅಚ್ಚರಿಯಾಗುತ್ತದೆ’ ಎಂದು ಸ್ವತಃ ಟ್ರಂಪ್ ಅವರೇ ತಮ್ಮ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದರು. ‘ನನ್ನ ಆರೋಗ್ಯ ಕೆಟ್ಟಿದೆ ಎಂಬ ವರದಿ ಬಂದರೆ ಷೇರುಪೇಟೆಗೆ ಬೇಸರವಾಗುತ್ತದೆ’ ಎಂದು ಹಾಸ್ಯ ಮಾಡಿದ್ದರು.

ಅಮೆರಿಕದ ಅಧ್ಯಕ್ಷರ ಆರೋಗ್ಯ ತಪಾಸಣೆ ಮಾಡುವುದು ಹೊಸದೇನಲ್ಲ. ಆದರೆ ವಿರೋಧಿಗಳು ಟ್ರಂಪ್ ಅವರ ಆರೋಗ್ಯದ ಬಗ್ಗೆ ಟೀಕಿಸಿದ್ದರಿಂದ ಅವರ ತಪಾಸಣೆ ಹೆಚ್ಚು ಚರ್ಚೆಗೆ ಕಾರಣವಾಗಿತ್ತು.

ರೊನ್ನಿ ಜಾಕ್ಸನ್ ಅವರು ಕಳೆದ ಮೂರು ಸರ್ಕಾರದ ಅವಧಿಯಿಂದಲೂ ಸತತವಾಗಿ ಅಧ್ಯಕ್ಷರ ವೈದ್ಯರಾಗಿ ನೇಮಕವಾಗಿದ್ದಾರೆ. ಇದೇ 16ರಂದು ತಪಾಸಣೆಯ ಸಂಪೂರ್ಣ ವರದಿಯನ್ನು ಮಾಧ್ಯಮದ ಎದುರು ಅವರು ವಿವರಿಸಲಿದ್ದಾರೆ.

6.3 ಅಡಿ ಎತ್ತರವಿರುವ ಟ್ರಂಪ್ 107 ಕೆ.ಜಿ. ಇದ್ದಾರೆ. ಅವರು ತಮ್ಮ ಎತ್ತರಕ್ಕೆ ಅನುಗುಣವಾಗಿ ಇರಬೇಕಿರುವುದಕ್ಕಿಂತ ಹೆಚ್ಚು ತೂಕ ಇದ್ದಾರೆ.

***

ಮೌನ ವಹಿಸಲು ಅಶ್ಲೀಲ ಸಿನಿಮಾ ತಾರೆಗೆ ಟ್ರಂಪ್‌ ಹಣ!

2016ರಲ್ಲಿ ಒಂದೆಡೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಹುದ್ದೆಯ ಕನಸು ಕಾಣುತ್ತಿದ್ದರೆ ಇನ್ನೊಂದೆಡೆ ಅವರ ವಕೀಲರು ಅಶ್ಲೀಲ ಸಿನಿಮಾ ತಾರೆಗೆ ಪ್ರತಿ ತಿಂಗಳು ₹ 82 ಲಕ್ಷ (1.3 ಲಕ್ಷ ಅಮೆರಿಕನ್ ಡಾಲರ್) ನೀಡುವ ಒಪ್ಪಂದ ಮಾಡಿಕೊಂಡಿದ್ದರು ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಶನಿವಾರ ವರದಿ ಮಾಡಿದೆ.

‘ಟ್ರಂಪ್ ಹಾಗೂ ವಯಸ್ಕರ ಚಿತ್ರಗಳ ತಾರೆ ಸ್ಟೆಫಾನಿ ಕ್ಲಿಫ್ಫೋರ್ಡ್ ಅವರ ನಡುವೆ ನಡೆದಿದೆ ಎನ್ನಲಾದ ಲೈಂಗಿಕ ಸಂಭಾಷಣೆಗೆ ಸಂಬಂಧಿಸಿ ಕ್ಲಿಫೋರ್ಡ್ ಮೌನ ವಹಿಸುವ ಸಲುವಾಗಿ ಟ್ರಂಪ್ ವಕೀಲ ಮೈಕೇಲ್ ಕೋಹೆನ್ ಅವರು ಒಪ್ಪಂದ ಮಾಡಿಸಿದ್ದಾರೆ’ ಎಂದು ವರದಿ ಹೇಳಿದೆ.‌ ವರದಿ ಕುರಿತು ಪ್ರತಿಕ್ರಿಯಿಸಲು ಶ್ವೇತಭವನ ನಿರಾಕರಿಸಿದೆ.

‘‌ನನ್ನ ಕಕ್ಷಿದಾರರ ವಿರುದ್ಧ ನೀವು ಇಂಥ ವಿಲಕ್ಷಣ ಆರೋಪ ಮಾಡುತ್ತಿರುವುದು ಇದು ಎರಡನೇ ಬಾರಿ. ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ಪ್ರಯತ್ನ ನಿಮ್ಮದು. ಪ್ರಕರಣಕ್ಕೆ ಸಂಬಂಧಿಸಿದವರು 2011ರಿಂದಲೂ ಆರೋಪವನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ’ ಎಂದು ಕೊಹೇನ್ ಹೇಳಿದ್ದಾರೆ.

ಸ್ಟೆಫಾನಿ ಕ್ಲಿಫ್ಫೋರ್ಡ್

‘2006ರ ಜುಲೈನಲ್ಲಿ ಲೇಕ್ ತಹೋಯ್ ತೀರದಲ್ಲಿ ನಡೆದ ಗಾಲ್ಫ್ ಪಂದ್ಯಾವಳಿ ವೇಳೆ ಸ್ಟೆಫಾನಿ ಹಾಗೂ ಟ್ರಂಪ್ ನಡುವೆ ಲೈಂಗಿಕ ಸಂಭಾಷಣೆ ನಡೆದಿತ್ತು ಎಂದು ಹೆಸರು ಹೇಳಲು ಇಚ್ಛಿಸದ, ಕ್ಲಿಫೋರ್ಡ್ ಅವರ ಆಪ್ತರೊಬ್ಬರು ತಿಳಿಸಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸಂಬಂಧಿಸಿದವರಿಗೆ’ ಎಂಬ ಒಕ್ಕಣೆಯ ಅಡಿ, ‘ಟ್ರಂಪ್ ಅವರೊಂದಿಗೆ ಯಾವುದೇ ರೀತಿಯ ಲೈಂಗಿಕ ಸಂಬಂಧ ಹೊಂದಿಲ್ಲ’ ಎಂದು ಕ್ಲಿಫೋರ್ಡ್ ಅವರು ಇಮೇಲ್ ಮಾಡಿದ್ದಾರೆ’ ಎಂದು ‘ನ್ಯೂಯಾರ್ಕ್ ಡೈಲಿ ನ್ಯೂಸ್’ ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry