ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬನಿಯಲ್ಲಿ ಕೈತೊಳೆಯುತ್ತಿದೆ ಕುಟುಂಬ

Last Updated 13 ಜನವರಿ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಮೀಸೆ ತಿಮ್ಮಯ್ಯನ ಮಾತಂದ್ರೆ ಮಾತು... ಸಂಚಾರ ನಿಯಮ ಉಲ್ಲಂಘಿಸುವಂತಿಲ್ಲ. ಉಲ್ಲಂಘಿಸಿದರೆ ದಂಡ ಕಟ್ಟಿಟ್ಟ ಬುತ್ತಿ...’

ಸಂಚಾರ ನಿಯಮ ಪಾಲಿಸದಿದ್ದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಲು ಸಂಚಾರ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಅಳವಡಿಸಿರುವ ಬ್ಯಾನರ್‌ಗಳಲ್ಲಿ ಇರುವ ಸಾಲುಗಳಿವು.

ಇದನ್ನು ನೋಡಿದವರಿಗೆ ‘ಅಷ್ಟಕ್ಕೂ ಈ ಮೀಸೆ ತಿಮ್ಮಯ್ಯ ಯಾರು, ಅವರಿಗೂ ಸಂಚಾರ ಪೊಲೀಸರಿಗೂ ಇರುವ ಸಂಬಂಧವೇನು' ಎನ್ನುವ ಪ್ರಶ್ನೆಗಳು ಕಾಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಹುಡುಕಿ ಹೊರಟ ‘ಪ್ರಜಾವಾಣಿ’ಗೆ ಕಂಡು ಬಂದದ್ದು ತಿಮ್ಮಯ್ಯ ಕುಟುಂಬದ ನೋವಿನ ಕಥೆ.

ಈ ಮೀಸೆ ತಿಮ್ಮಯ್ಯ ಬೇರಾರೂ ಅಲ್ಲ, 1996ರ ಆಗಸ್ಟ್‌ 26ರಂದು ಅಪಘಾತದಲ್ಲಿ ಅಸುನೀಗಿದ್ದ ಹೆಡ್‌ ಕಾನ್‌ಸ್ಟೆಬಲ್‌. ಅವರು ಆಗ ವಿಧಾನಸೌಧ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

‘ಸಂಚಾರ ನಿಯಮ ಪಾಲನೆಗೆ ಎಲ್ಲರೂ ಕಟಿಬದ್ಧರಾಗಿರಬೇಕು. ನಿಯಮಗಳು ಎಲ್ಲರಿಗೂ ಒಂದೇ’ ಎಂಬ ಖಡಕ್ ಧೋರಣೆ ತಿಮ್ಮಯ್ಯ ಅವರಿಗೆ ಖ್ಯಾತಿ ತಂದು ಕೊಟ್ಟಿತ್ತು. ತಾಯಿ-ಮಗುವೊಂದನ್ನು ರಕ್ಷಿಸುವ ವೇಳೆ ಅವರು ಕೊನೆಯುಸಿರೆಳೆದಿದ್ದರು. ವಿಧಾನಸೌಧದ ಬಳಿ ನಡೆದಿದ್ದ ಈ ಅವಘಡ ಅಂದು ಇಡೀ ಪೊಲೀಸ್ ಇಲಾಖೆಯೇ ಮರುಗುವಂತೆ ಮಾಡಿತ್ತು. ಬಳಿಕ, ವಿಧಾನಸೌಧದ ಬಳಿ ಪ್ರಧಾನ ಅಂಚೆ ಕಚೇರಿ ಬಳಿಯ ಜಂಕ್ಷನ್‍ಗೆ ತಿಮ್ಮಯ್ಯ ಅವರ ಹೆಸರನ್ನೇ ಇಡಲಾಯಿತು.

16 ವರ್ಷ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅವರು, ಯಾರೇ ಸಂಚಾರ ನಿಯಮ ಉಲ್ಲಂಘಿಸಿದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದ್ದರು. ಪರಿಣಾಮವಾಗಿಯೇ ‘ಮೀಸೆ ತಿಮ್ಮಯ್ಯನ ಮಾತಂದ್ರೆ ಮಾತು' ಎನ್ನುವ ನಾಣ್ಣುಡಿ ಚಾಲ್ತಿಗೆ ಬಂದಿತ್ತು.

ಕುಟುಂಬದ ಸ್ಥಿತಿ ಉತ್ತಮವಾಗಿಲ್ಲ: ನಗರದ ಗೊರಗುಂಟೆ ಪಾಳ್ಯದಲ್ಲಿ ಇರುವ ಅವರ ಪುಟ್ಟ ಮನೆಗೆ ಭೇಟಿ ನೀಡಿದಾಗ, ಕಂಡು ಬಂದ ಚಿತ್ರಣವೇ ಬೇರೆ. 22 ವರ್ಷಗಳ ಬಳಿಕವೂ ಕುಟುಂಬ ಕಂಬನಿಯಲ್ಲಿ ಕೈತೊಳೆಯುತ್ತಿದೆ.

ಕುಟುಂಬಕ್ಕೆ ಸರ್ಕಾರದಿಂದ ವಿಶೇಷ ಪರಿಹಾರವೇನೂ ಸಿಕ್ಕಿಲ್ಲ. ಸ್ವಲ್ಪ ಪಿಂಚಣಿ ಹಣ ಸಿಕ್ಕಿತ್ತು. ಅದನ್ನು ತಿಮ್ಮಯ್ಯ ಅವರ ತಂದೆ, ತಾಯಿ ಹಾಗೂ ಪತ್ನಿ ಹಂಚಿಕೊಂಡಿದ್ದರು. ಆರ್ಥಿಕ ಸಂಕಷ್ಟದಿಂದಾಗಿ ಲಕ್ಷ್ಮಿದೇವಿ ಎರಡು ವರ್ಷ ಗಾರ್ಮೆಂಟ್‌ನಲ್ಲಿ ಕೆಲಸ ಮಾಡಬೇಕಾಯಿತು. ಮಕ್ಕಳ ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕುಗೊಂಡಿತು. ಬಳಿಕ ಸರ್ಕಾರ ಅನುಕಂಪದ ಆಧಾರದ ಮೇಲೆ ಲಕ್ಷ್ಮಿದೇವಿಗೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ನೌಕರಿ ನೀಡಿತ್ತು.

‘ನಮ್ಮ ಯಜಮಾನರು ಬದುಕಿರುತ್ತಿದ್ದರೆ ಕನಿಷ್ಠ ಪಕ್ಷ ಎಸಿಪಿಯಾಗಿ ನಿವೃತ್ತರಾಗುತ್ತಿದ್ದರು. ಅವರ ಸಾವಿನ ಬಳಿಕ ನಮ್ಮ ಕುಟುಂಬ ಸೂತ್ರ ಹರಿದ ಗಾಳಿಪಟದಂತಾಯಿತು’ ಎನ್ನುತ್ತಾರೆ ಲಕ್ಷ್ಮೀದೇವಿ.

ಎಸ್ಸೆಸ್ಸೆಲ್ಸಿ ಓದಿರುವ ಹಿರಿಯ ಮಗ ಕಾರು ‌ಚಾಲಕರಾಗಿದ್ದಾರೆ. ಪಿ.ಯುವರೆಗೆ ಕಲಿತಿರುವ ಕಿರಿಯ ಮಗ ಫಿಟ್‌ನೆಸ್‌ ತರಗತಿ ನಡೆಸುತ್ತಿದ್ದಾರೆ. ಮಗಳಿಗೆ ಮದುವೆಯಾಗಿದೆ.‌

‘ಸರ್ಕಾರದಿಂದ ಪರಿಹಾರ ಸಿಕ್ಕಿದ್ದರೆ ಮಕ್ಕಳಿಗೆ ಒಳ್ಳೆಯ ವಿದ್ಯೆ ಕೊಡಿಸುತ್ತಿದ್ದೆ. ಇನ್ನೆರಡು ವರ್ಷಗಳಲ್ಲಿ ನಿವೃತ್ತಳಾಗುತ್ತೇನೆ. ಮುಂದೇನು ಎನ್ನುವ ಆತಂಕ ಕಾಡುತ್ತಿದೆ. ನನ್ನ ಮಕ್ಕಳಿಗೆ ಕೆಲಸ ಕೊಟ್ಟರೆ ಸಾಕು, ಮತ್ತೇನನ್ನೂ ಕೇಳುವುದಿಲ್ಲ’ ಎನ್ನುತ್ತಾರೆ ಅವರು.

***

ಕಾರ್ಟೂನ್‌ ಬಳಕೆಗೆ ಬೇಸರ

ತಿಮ್ಮಯ್ಯ ಸೇವಾನಿಷ್ಠತೆ ಮತ್ತು ಪ್ರಾಮಾಣಿಕತೆಯನ್ನು ಇಲಾಖೆ ಸ್ಮರಿಸುತ್ತಿರುವುದಕ್ಕೆ ಆಭಾರಿಯಾಗಿದ್ದೇನೆ ಎನ್ನುತ್ತಾರೆ ಲಕ್ಷ್ಮಿದೇವಿ.

‘ತಿಮ್ಮಯ್ಯರ ಭಾವಚಿತ್ರ ಲಭ್ಯವಿದ್ದರೂ ಅಭಿಯಾನದ ಬ್ಯಾನರ್‌ಗಳಲ್ಲಿ ಕಾರ್ಟೂನ್ ಬಳಸಿದ್ದಾರೆ. ಇದು ಅವರನ್ನು ಅಪಮಾನಿಸಿದಂತೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಭಿಯಾನಕ್ಕೆ ರಾಜಭವನದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು. ಸೌಜನ್ಯಕ್ಕೂ ನಮ್ಮನ್ನು ಈ ಸಮಾರಂಭಕ್ಕೆ ಆಹ್ವಾನಿಸಲಿಲ್ಲ’ ಎಂದು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT