ಜೈಲ್ ಭರೋ; 110 ಮಂದಿ ಬಂಧನ, ಬಿಡುಗಡೆ

7
ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಜೈಲ್ ಭರೋ; 110 ಮಂದಿ ಬಂಧನ, ಬಿಡುಗಡೆ

Published:
Updated:
ಜೈಲ್ ಭರೋ; 110 ಮಂದಿ ಬಂಧನ, ಬಿಡುಗಡೆ

ಬೆಂಗಳೂರು: ‘ಬಿಜೆಪಿ ಮತ್ತು ಆರ್‌ಎಸ್ಎಸ್‌ನವರು ಉಗ್ರಗಾಮಿಗಳು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಜೈಲ್ ಭರೋ ಚಳವಳಿ ನಡೆಸಿದರು.‌

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬೆಳಿಗ್ಗೆ ಸೇರಿದ್ದ ಪ್ರತಿಭಟನಾಕಾರರು, ‘ನಿದ್ದೆಯಲ್ಲಿ ಬೇಡ ಹೇಳಿಕೆ, ಇರಲಿ ಸಿ.ಎಂ ಎಚ್ಚರಿಕೆ’, ‘ಕಾಂಗ್ರೆಸ್‌ ಬೆಳೆಸಿದ ಮರ ಉಗ್ರವಾದ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಪ್ರತಿಭಟನಾಕಾರರು ವಾಹನಗಳ ಸಂಚಾರ ತಡೆಯಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು, ಶೋಭಾ ಕರಂದ್ಲಾಜೆ ಸೇರಿದಂತೆ 110 ಮಂದಿಯನ್ನು ವಶಕ್ಕೆ ಪಡೆದು ಮೈಸೂರು ರಸ್ತೆಯ ಸಿಎಆರ್‌ ಮೈದಾನಕ್ಕೆ ಕರೆದೊಯ್ದರು. ಅವರನ್ನು ಮಧ್ಯಾಹ್ನ ಬಿಡುಗಡೆ ಮಾಡಿದರು.

ಶೋಭಾ ಕರಂದ್ಲಾಜೆ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಮುಸ್ಲಿಮರನ್ನು ಓಲೈಸಲು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರನ್ನು ಉಗ್ರಗಾಮಿಗಳು ಎಂದು ಕರೆದಿದ್ದಾರೆ. ಅವರು ಹೇಳಿಕೆಯನ್ನು ಹಿಂಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಶಾಸಕರಾದ ಬಿ.ಎನ್‌. ವಿಜಯಕುಮಾರ್, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರತಿಭಟನೆಯಲ್ಲಿದ್ದರು.

ಸಂಚಾರ ದಟ್ಟಣೆ: 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸೇರಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕಾರ್ಪೊರೇಷನ್ ವೃತ್ತ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಮೆಜೆಸ್ಟಿಕ್‌ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಂಡುಬಂತು.

***

ದೇಶದಲ್ಲಿ ಉಗ್ರವಾದವನ್ನು ಬೆಳೆಸಿದ್ದು ಕಾಂಗ್ರೆಸ್. ಇಂಥ ಪಕ್ಷದವರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯನ್ನು ದೂರುತ್ತಿರುವುದಕ್ಕೆ ಅರ್ಥವೇ ಇಲ್ಲ

– ಶೋಭಾ ಕರಂದ್ಲಾಜೆ, ಸಂಸದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry