ಸಂಕ್ರಾಂತಿ ಸಡಗರ: ಎಳ್ಳು–ಬೆಲ್ಲ ದುಬಾರಿ

7

ಸಂಕ್ರಾಂತಿ ಸಡಗರ: ಎಳ್ಳು–ಬೆಲ್ಲ ದುಬಾರಿ

Published:
Updated:
ಸಂಕ್ರಾಂತಿ ಸಡಗರ: ಎಳ್ಳು–ಬೆಲ್ಲ ದುಬಾರಿ

ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು–ಬೆಲ್ಲ, ಕಬ್ಬು, ಕಡಲೆಕಾಯಿ, ಗೆಣಸು ಹಾಗೂ ಅವರೆಕಾಯಿ ನಗರದ ಬಹುತೇಕ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದು, ಅವುಗಳನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದರು.

ಪ್ರತಿ ಹಬ್ಬದಂತೆ ಈ ಹಬ್ಬಕ್ಕೂ ಹೂವು–ಹಣ್ಣಿನ ಬೆಲೆ ಕೊಂಚ ಏರಿಕೆಯಾಗಿದೆ. ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಿಗಳ ನಡುವೆ ಪೈಪೋಟಿ ನಡೆಯುತ್ತಿದ್ದದ್ದು ಕಂಡುಬಂತು.

ಕೆ.ಆರ್.ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಎಳ್ಳು–ಬೆಲ್ಲದ ಬೆಲೆಯಲ್ಲಿ ಏರಿಳಿತವಾಗಿದೆ. ಮಧ್ಯಾಹ್ನದ ಮೇಲೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಂತೆ ಬೆಲೆ ಏಕಾಏಕಿ ಏರಿದೆ.

ಪ್ರತಿ ಕೆ.ಜಿ ಎಳ್ಳು–ಬೆಲ್ಲಕ್ಕೆ ಮುಂಜಾನೆ 80 ಇತ್ತು. ಮಧ್ಯಾಹ್ನ 2 ಗಂಟೆಗೆ ಅದರ ಬೆಲೆ ₹100ಕ್ಕೆ ಏರಿತ್ತು. ಮಾರುಕಟ್ಟೆಯಲ್ಲಿ ಕಡಲೆಕಾಯಿ ಬೆಲೆ ಕೆ.ಜಿ.ಗೆ ₹60 ಇದ್ದರೆ ಹೊರಗಡೆ ಅದರ ಬೆಲೆ ₹80 ಇತ್ತು. ಅವರೆಕಾಯಿ, ಗೆಣಸು ಹಾಗೂ ಹಸಿ ಅರಿಸಿನದ ಬೆಲೆಯೂ ಕೆಲ ಗಂಟೆಗಳ ಅಂತರದಲ್ಲಿ ಏರಿಳಿತವಾಗಿದೆ.

ಈ ಬಗ್ಗೆ ವ್ಯಾಪಾರಿ ಪಳನಿಸ್ವಾಮಿ ಅವರನ್ನು ಕೇಳಿದರೆ, ‘ವರ್ಷಕ್ಕೊಮ್ಮೆ ಎಳ್ಳು–ಬೆಲ್ಲ ಮಾರಾಟ ಮಾಡುತ್ತೇವೆ. ಈ ಸಂದರ್ಭದಲ್ಲಿ ಗ್ರಾಹಕರ ಸಂಖ್ಯೆ ಹಾಗೂ ಬೇಡಿಕೆಗೆ ಅನುಗುಣವಾಗಿ ಬೆಲೆ ಏರಿಕೆ ಅನಿವಾರ್ಯ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮದು ಅವಿಭಕ್ತ ಕುಟುಂಬ. ಹೆಚ್ಚು ಎಳ್ಳು–ಬೆಲ್ಲ ಖರೀದಿಸಲು ಮಾರುಕಟ್ಟೆಗೆ ಬಂದಿದ್ದೇವೆ. ವ್ಯಾಪಾರಿಗಳು ಹೆಚ್ಚು ಬೆಲೆ ಹೇಳುತ್ತಿದ್ದಾರೆ. ಹೀಗಾಗಿ, ಎಳ್ಳು, ಅಚ್ಚು ಬೆಲ್ಲ, ಕೊಬ್ಬರಿ ಹಾಗೂ ಸಕ್ಕರೆ ಮಿಠಾಯಿಗಳನ್ನು ಖರೀದಿಸಿದ್ದೇವೆ. ಮನೆಯಲ್ಲಿ ಎಳ್ಳು–ಬೆಲ್ಲ ತಯಾರಿಸಿಕೊಳ್ಳುತ್ತೇವೆ’ ಎಂದು ರಾಮಚಂದ್ರಪ್ಪ ಹೇಳಿದರು.

‘ಕಳೆದ ವಾರ ಚೆಂಡು ಹೂವು ಪ್ರತಿ ಕೆ.ಜಿ.ಗೆ ₹40, ಗುಲಾಬಿ ₹250, ಸುಗಂಧರಾಜ ₹200 ಹಾಗೂ ಸೇವಂತಿಗೆ ₹150 ಇತ್ತು. ಈ ವಾರ ಅವುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಮಲ್ಲಿಗೆ, ಕನಕಾಂಬರ, ಜಾಜಿ ಹಾಗೂ ಸಂಪಿಗೆ ಬೆಲೆ ದುಪ್ಪಟ್ಟಾಗಿದೆ’ ಎಂದು ಹೂವಿನ ವ್ಯಾಪಾರಿ ಮುರುಗನ್ ಹೇಳಿದರು.

ಮಾರುಕಟ್ಟೆಗೆ ಕೆಲವು ಹೂವುಗಳ ಪೂರೈಕೆ ಹೆಚ್ಚಿದ್ದರಿಂದ ಬೆಲೆ ಇಳಿಕೆಯಾಗಿದೆ. ಅದನ್ನು ಹೊರತುಪಡಿಸಿ ಸಂಕ್ರಾಂತಿ ವೇಳೆ ಹೂವುಗಳ ಬೆಲೆಯಲ್ಲಿ ಏರಿಳಿತವಾಗಿಲ್ಲ. ಮಲ್ಲಿಗೆ, ಕನಕಾಂಬರ, ಜಾಜಿ ಹಾಗೂ ಸಂಪಿಗೆ ಹೂವು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ಅವುಗಳ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿ ಮಂಜುನಾಥ್ ಹೇಳಿದರು.

‘ಪೂಜೆಗೆ ಹೆಚ್ಚಾಗಿ ಬಳಸುವ ಹೂವುಗಳ ಬೆಲೆ ಈ ಬಾರಿ ಕಡಿಮೆ ಇದೆ’ ಎಂದರು ಬಸವನಗುಡಿಯ ಮೇಘನಾ.

ಸಗಟು ವ್ಯಾಪಾರದಲ್ಲಿ ಗಾತ್ರದ ಆಧಾರದ ಮೇಲೆ ಪ್ರತಿ ತೆಂಗಿನಕಾಯಿಗೆ ₹10–₹15 ಇದೆ. ಚಿಲ್ಲರೆ ವ್ಯಾಪಾರಿಗಳು ಸಣ್ಣ ಗಾತ್ರದ ಕಾಯಿಯನ್ನು ₹20ಗೆ, ದೊಡ್ಡ ಗಾತ್ರ ಕಾಯಿಯನ್ನು ₹30–₹35ರವರೆಗೆ ಮಾರಾಟ ಮಾಡುತ್ತಿದ್ದಾರೆ ಎಂದರು ಮಾರುಕಟ್ಟೆಯ ನಿತ್ಯದ ಗ್ರಾಹಕ ಮುನಿಸ್ವಾಮಿ.

ತರಕಾರಿ ಬೆಲೆ ಯಥಾಸ್ಥಿತಿ: ಕಳೆದ ವಾರಕ್ಕೆ ಹೋಲಿಸಿದರೆ ಮೂಲಂಗಿ, ಆಲೂಗಡ್ಡೆ, ಬದನೆ, ಹೂ ಕೋಸು, ಎಲೆ ಕೋಸು, ಬೀನ್ಸ್‌, ಬೀಟ್‌ರೂಟ್‌ ಬೆಲೆ ಕೆ.ಜಿ.ಗೆ ₹10 ರಿಂದ ₹20ರಷ್ಟು ಏರಿಕೆಯಾಗಿದೆ.

ಕೋಲಾರ, ಬೆಂಗಳೂರು ಗ್ರಾಮಾಂತರ ಸುತ್ತಮುತ್ತಲ ಪ್ರದೇಶದಲ್ಲಿ ರೈತರು ಟೊಮೆಟೊವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಹೀಗಾಗಿ, ಅವಶ್ಯಕತೆಗಿಂತ ಹೆಚ್ಚು ಪ್ರಮಾಣದ ಟೊಮೆಟೊ ಮಾರುಕಟ್ಟೆಗೆ ಬಂದಿದೆ. ಎರಡು ತಿಂಗಳಿನಿಂದ ಇದರ ಬೆಲೆಯಲ್ಲಿ ಹೆಚ್ಚೇನೂ ಬದಲಾಣೆ ಕಂಡು ಬಂದಿಲ್ಲ ಎಂದು ವ್ಯಾಪಾರಿ ರಾಜು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry