ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕರಿತ ತ್ಯಾಜ್ಯ ನೀರು: ಪೂರೈಕೆ ಲೋಪ

ನಿತ್ಯ 1 ಕೋಟಿ ಲೀಟರ್‌ ನೀರು ಸಂಸ್ಕರಣೆ l 4 ಕೋಟಿ ಲೀಟರ್‌ ನೀರು ಕಂಪನಿಗಳಿಗೆ
Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಲಮಂಡಳಿಯು ಕೆಲವು ಸರ್ಕಾರಿ ಸಂಸ್ಥೆಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ಸಂಸ್ಕರಿಸಿದ ತ್ಯಾಜ್ಯನೀರನ್ನು ಪೂರೈಸುತ್ತಿದ್ದು, ಕೆಲವು ತಿಂಗಳುಗಳಿಂದ ವ್ಯತ್ಯಯವಾಗುತ್ತಿದೆ.

ಜಲಮಂಡಳಿಯು ಯಲಹಂಕದಲ್ಲಿರುವ ಮೂರನೇ ಹಂತದ ಶುದ್ಧೀಕರಣ ಘಟಕದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌), ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌), ಇಂಡಿಯನ್‌ ಟೊಬ್ಯಾಕೊ ಕಂಪನಿ (ಐಟಿಸಿ), ರೈಲು ಗಾಲಿ ಕಾರ್ಖಾನೆ ಹಾಗೂ ಭಾರತೀಯ ವಾಯುಪಡೆಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪೂರೈಸುತ್ತದೆ.

ಕೊಳವೆಮಾರ್ಗಗಳಲ್ಲಿ ದೋಷವಿರುವುದು ಹಾಗೂ ಗುಣಮಟ್ಟದ ನೀರು ಪೂರೈಸಲು ಕೆಲವು ತೊಡಕುಗಳಿವೆ. ಹಾಗಾಗಿ ಈ ಸಂಸ್ಥೆಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ.

ಕಂಪನಿಯೊಂದಕ್ಕೆ ಎರಡು ತಿಂಗಳುಗಳಿಂದ ನೀರು ಸರಬರಾಜು ಆಗಿರಲಿಲ್ಲ. ತದನಂತರವೂ ಕಳಪೆ ಗುಣಮಟ್ಟದ ನೀರನ್ನು ಒದಗಿಸಲಾಗಿದೆ. ಈ ನೀರನ್ನು ಶುದ್ಧೀಕರಿಸಲು ಪ್ರತ್ಯೇಕ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಆ ಸಂಸ್ಥೆ ಮುಂದಾಗಿದೆ.

‘ಆರಂಭದಲ್ಲಿ ನಮಗೆ ಪೂರೈಕೆ ಆಗುತ್ತಿದ್ದ ಶುದ್ಧೀಕರಿಸಿದ ನೀರು ಉತ್ತಮ ಗುಣಮಟ್ಟದ್ದಾಗಿತ್ತು. ಕೆಲವು ತಿಂಗಳುಗಳಿಂದ ದುರ್ವಾಸನೆಯಿಂದ ಕೂಡಿದ ನೀರು ಬರುತ್ತಿದೆ. ಕೊಳವೆ ಮಾರ್ಗ ದುರಸ್ತಿ ಮಾಡಬೇಕಿರುವುದರಿಂದ ಎರಡು ತಿಂಗಳು ನೀರು ಪೂರೈಸಲು ಸಾಧ್ಯವಿಲ್ಲ ಎಂದೂ ಜಲಮಂಡಳಿ ಹೇಳಿತ್ತು’ ಎಂದು ಕಂಪನಿಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಜಲಮಂಡಳಿ ನಮಗೆ ಸಂಸ್ಕರಿಸಿದ ನೀರನ್ನು ಪೂರೈಸುತ್ತಿದೆ. ಅದನ್ನು ನಾವು ಉದ್ಯಾನಗಳಿಗೆ ಬಳಸುತ್ತೇವೆ. ನೀರಿನ ಗುಣಮಟ್ಟದ ಬಗ್ಗೆ ನಮ್ಮ ನಿರ್ವಹಣಾ ಸಿಬ್ಬಂದಿ ಯಾರೂ ದೂರಿಲ್ಲ. ನಮಗೆ ಜಲಮಂಡಳಿಯಿಂದ ಕಾವೇರಿ ನೀರು ಪ್ರತ್ಯೇಕವಾಗಿ ಸರಬರಾಜಾಗುತ್ತಿದೆ’ ಎಂದು ಕೆಐಎಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

ತೃತೀಯ ಹಂತದ ನೀರು ಶುದ್ಧೀಕರಣ ಘಟಕದಲ್ಲಿ ಸಂಸ್ಕರಣೆಗೆ ಒಳಪಡುವ ನೀರು ಅತ್ಯಂತ ಉನ್ನತ ಗುಣಮಟ್ಟದ್ದಾಗಿರುತ್ತದೆ. ಆದರೂ ಅದು ಕುಡಿಯುವ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ.

‘ನಾವು ನಿತ್ಯ 1 ಕೋಟಿ ಲೀಟರ್‌ ನೀರನ್ನು ಸಂಸ್ಕರಿಸುತ್ತೇವೆ. ಅದರಲ್ಲಿ 4 ಕೋಟಿ ಲೀಟರ್‌ ನೀರನ್ನು ಕಂಪನಿಗಳಿಗೆ ಪೂರೈಸುತ್ತೇವೆ. ಉಳಿದ ನೀರನ್ನು ಕೆರೆಗಳಿಗೆ ಹರಿಸುತ್ತೇವೆ. ಸಂಸ್ಕರಿಸಿದ ನೀರು ಪೂರೈಕೆ ವ್ಯವಸ್ಥೆಯಲ್ಲಿ ಯಾವುದೇ ಲೋಪವಿಲ್ಲ’ ಎಂದು ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವೈ.ಮೊಹಮ್ಮದ್‌ ಹನೀಫ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT