ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷುದ್ರ ಗ್ರಹಗಳಿಂದ ಭೂಮಿಗೆ ಸದ್ಯ ಅಪಾಯವಿಲ್ಲ

ಫ್ರಾನ್ಸ್‌ನ ಬಾಹ್ಯಾಕಾಶ ವಿಜ್ಞಾನಿ ಡಾ.ಪ್ಯಾಟ್ರಿಕ್‌ ಮೈಕಲ್‌
Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂಮಿಗೆ ಹಾನಿ ಉಂಟುಮಾಡುವಂತಹ ಯಾವುದೇ ಕ್ಷುದ್ರ ಗ್ರಹ ಇದುವರೆಗೆ ಪತ್ತೆಯಾಗಿಲ್ಲ’ ಎಂದು ಫ್ರಾನ್ಸ್‌ನ ಬಾಹ್ಯಾಕಾಶ ವಿಜ್ಞಾನಿ ಡಾ.ಪ್ಯಾಟ್ರಿಕ್‌ ಮೈಕಲ್‌ ಅಭಿಪ್ರಾಯಪಟ್ಟರು.

ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜುಕೇಷನ್‌ ವತಿಯಿಂದ ಜವಾಹರ ಲಾಲ್ ನೆಹರೂ ತಾರಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಸೌರಮಂಡಲ ಇತಿಹಾಸ ಮತ್ತು ಕ್ಷುದ್ರ ಗ್ರಹಗಳ ಕುರಿತು ಮಾತನಾಡಿದರು.

‘2029ರಲ್ಲಿ ಭೂಮಿಯ ಹತ್ತಿರ ಹಾದುಹೋಗುವ ಎಪೊಪಿಸ್‌ ಕ್ಷುದ್ರ ಗ್ರಹದಿಂದ ಯಾವುದೇ ಹಾನಿ ಆಗದು.  ಇದು 2036ರಲ್ಲೂ ನಮ್ಮ ಗ್ರಹದಿಂದ 36,000 ಕಿ.ಮೀ. ದೂರದಲ್ಲಿ ಹಾದುಹೋಗಲಿದೆ. ಆಗ ಭೂಮಿಗೆ  ಹಾನಿ ಉಂಟಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇದರಿಂದ ಅಪಾಯವಾಗುವ ಸಾಧ್ಯತೆ ಕಡಿಮೆ ಎನ್ನುವುದು ಇತ್ತೀಚಿನ ಸಂಶೋಧನೆಗಳಿಂದ ಖಚಿತಪಟ್ಟಿದೆ’ ಎಂದರು.

ಕ್ಷುದ್ರ ಗ್ರಹ ನಿರ್ದಿಷ್ಟ ಪಥದಲ್ಲಿ ಹಾದು ಬಂದರೆ ಮಾತ್ರ  ಅಪಾಯ ಹೆಚ್ಚು. ಅಂತಹ ಪಥದಲ್ಲಿ ಅದು ಹಾದು ಹೋಗುವುದಿಲ್ಲ. ಒಂದಷ್ಟು ಕ್ಷುದ್ರ ಗ್ರಹಗಳು ಗುರುತ್ವಾಕರ್ಷಣೆಗೆ ಒಳಪಟ್ಟು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುತ್ತದೆ. ಕ್ಷುದ್ರಗ್ರಹಗಳಿಂದ ಸದ್ಯಕ್ಕೆ ಅಪಾಯವಿಲ್ಲದಿದ್ದರೂ ವಿಜ್ಞಾನಿಗಳು ಸುಮ್ಮನಿರುವಂತಿಲ್ಲ. ಯಾವ್ಯಾವ ಕ್ಷುದ್ರ ಗ್ರಹಗಳು ಅಪ್ಪಳಿಸಲಿವೆ ಎಂಬುದನ್ನು ಕಂಡುಕೊಳ್ಳಲು ನಾವು ಸಂಶೋಧನೆ ಮುಂದುವರಿಸಬೇಕು ಎಂದರು.

ಸೌರಮಂಡಲದಲ್ಲಿ ಅಗಾಧ ಸಂಖ್ಯೆಯಲ್ಲಿ ಕ್ಷುದ್ರ ಗ್ರಹಗಳಿವೆ. ಇವುಗಳ ಅಧ್ಯಯನದಿಂದ ಸೌರಮಂಡಲದ ಉಗಮದ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಎಂದರು.

ಸಾವಿರಾರು ಕ್ಷುದ್ರ ಗ್ರಹಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸಂಭವನೀಯ ಅಪಾಯವನ್ನು ಮೊದಲೇ ಊಹಿಸಿ, ಮುಂಜಾಗ್ರತೆ ವಹಿಸಲು ಈ ಅಧ್ಯಯನಗಳು ಸಹಕಾರಿ ಎಂದರು.

ಕ್ಷುದ್ರ ಗ್ರಹಗಳಿಂದ ಭೂಮಿಗೆ ಒಳಿತಾಗಿದೆ. ನೀರು, ಖನಿಜ, ರಾಸಾಯನಿಕ ಪದಾರ್ಥಗಳನ್ನು ನೀಡಿವೆ. ಇಲ್ಲಿನ ಜೀವ ಸಂಕುಲಕ್ಕೆ ಅಪಾಯಕಾರಿಯಾಗಿದ್ದ ಡೈನೋಸಾರ್‌ಗಳನ್ನು ನಿರ್ನಾಮ ಮಾಡಿವೆ ಎಂದರು.

ಕ್ಷುದ್ರ ಗ್ರಹ ಅಧ್ಯಯನಕ್ಕೆ ಗಗನನೌಕೆ

ಇದೇ ವರ್ಷ ಜಪಾನ್‌ ಹಾರಿಬಿಡುತ್ತಿರುವ ಹಯಬೂಸ –2 ಗಗನನೌಕೆ ಕ್ಷುದ್ರ ಗ್ರಹದ ಮೇಲೆ ಇಳಿದು ಎರಡು ವರ್ಷ ಅಧ್ಯಯನ ನಡೆಸಿದೆ. 2020ಕ್ಕೆ ಅಲ್ಲಿನ ದೂಳಿನ ಮಾದರಿಯೊಂದಿಗೆ ಮರಳಲಿದೆ ಎಂದು ಪ್ಯಾಟ್ರಿಕ್‌ ತಿಳಿಸಿದರು.

ಅಮೆರಿಕ ಕಳುಹಿಸುತ್ತಿರುವ ಒಸಿರಿಸ್‌ (OSIRIS- REx Eart) ನೌಕೆಯೂ ಅಲ್ಲಿನ ವಾತಾವರಣ ಅಧ್ಯಯನ ನಡೆಸಿ, ಕಣಗಳ ಮಾದರಿ ಸಂಗ್ರಹಿಸಿ 2023ರ ವೇಳೆಗೆ ವಾಪಸಾಗಲಿದೆ. ನಾಸಾದ ಲೂಸಿ (Lucy) ಮತ್ತು ಸೈಕಿ (psyche) ಗಗನನೌಕೆಗಳು 2022ರಲ್ಲಿ ಕ್ಷುದ್ರ ಗ್ರಹ ಅಧ್ಯಯನಕ್ಕೆ ತೆರಳಲಿವೆ.

ಜಪಾನ್‌ ಎಂಎಂಎಕ್ಸ್‌ ಗಗನ ನೌಕೆಯನ್ನು 2024ರ ವೇಳೆಗೆ ಫೋಬೊಸ್‌ ಕ್ಷುದ್ರ ಗ್ರಹಕ್ಕೆ ಕಳುಹಿಸಲಿದೆ. ಇದು ಅಲ್ಲಿನ ಮಾದರಿ ಸಂಗ್ರಹಿಸಿಕೊಂಡು 2029ಕ್ಕೆ ವಾಪಸಾಗಲಿದೆ. 2022ರ ಅಕ್ಟೋಬರ್‌ನಲ್ಲಿ ಭೂಮಿಗೆ ಹತ್ತಿರ ಬರುವ ಕ್ಷುದ್ರ ಗ್ರಹದ ಅಧ್ಯಯನಕ್ಕೆ ನಾಸಾ ಐಡಾ (AIDA) ನೌಕೆಯನ್ನು ಕಳುಹಿಸಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT