ಲ್ಯಾಪ್‌ಟಾಪ್ ಕದ್ದು, ಪ್ರಿಯಕರನ ಜತೆ ಶಾಪಿಂಗ್!

7
ಕಳ್ಳತನ ಮಾಡುತ್ತಿದ್ದ ಡಿಪ್ಲೊಮಾ ಪದವೀಧರೆ ಬಂಧನ

ಲ್ಯಾಪ್‌ಟಾಪ್ ಕದ್ದು, ಪ್ರಿಯಕರನ ಜತೆ ಶಾಪಿಂಗ್!

Published:
Updated:
ಲ್ಯಾಪ್‌ಟಾಪ್ ಕದ್ದು, ಪ್ರಿಯಕರನ ಜತೆ ಶಾಪಿಂಗ್!

ಬೆಂಗಳೂರು: ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಯುವತಿಯರ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡುತ್ತಿದ್ದ ಚಿಂತಾಮಣಿಯ ಡಿಪ್ಲೊಮಾ ಪದವೀಧರೆ ಶೋಭಾ (26) ಮೈಕೊಲೇಔಟ್ ಪೊಲೀಸರ ಅತಿಥಿಯಾಗಿದ್ದಾರೆ.

ಕದ್ದ ಲ್ಯಾಪ್‌ಟಾಪ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಶೋಭಾ, ಬಂದ ಹಣದಲ್ಲಿ ಪ್ರಿಯಕರನ ಜತೆ ಶಾಪಿಂಗ್ ಮಾಡುತ್ತಿದ್ದರು. ಆರೋಪಿಯಿಂದ ₹ 4 ಲಕ್ಷ ಮೌಲ್ಯದ ಹತ್ತು ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಇವರ ವಿರುದ್ಧ ಮೈಕೊಲೇಔಟ್, ಎಚ್‌ಎಸ್‌ಆರ್‌ ಲೇಔಟ್, ಸದ್ದುಗುಂಟೆಪಾಳ್ಯ, ಬಂಡೆಪಾಳ್ಯ ಹಾಗೂ ಮಡಿವಾಳ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಹೇಗೆ ಕೃತ್ಯ: ಆನ್‌ಲೈನ್‌ನಲ್ಲಿ ಪೇಯಿಂಗ್ ಗೆಸ್ಟ್‌ ಕಟ್ಟಡಗಳ ಮಾಲೀಕರ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಳ್ಳುತ್ತಿದ್ದ ಶೋಭಾ, ‘ನಾನು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದೇನೆ. ನನಗೆ ಕೊಠಡಿ ಬಾಡಿಗೆಗೆ ಬೇಕು’ ಎಂದು ಕೇಳುತ್ತಿದ್ದರು. ಅಲ್ಲಿರುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು, ಬೆಳಗಿನ ಜಾವ ಕಟ್ಟಡದ ಬಳಿ ಹೋಗಿ ಮಾಲೀಕರನ್ನು ಭೇಟಿಯಾಗುತ್ತಿದ್ದರು.

ನಂತರ ಕೊಠಡಿಯನ್ನು ನೋಡಿ, ‘ನಾನು ಇಲ್ಲೇ ಇರುತ್ತೇನೆ. ಸಂಜೆ ಲಗೇಜ್ ಸಮೇತ ಬರುತ್ತೇನೆ. ಈಗ ತುರ್ತಾಗಿ ನಾನು ಸಂದರ್ಶನಕ್ಕೆ ತೆರಳಬೇಕು. ನೀವು ಅನುಮತಿ ಕೊಟ್ಟರೆ, ಕೊಠಡಿಯಲ್ಲೇ 10 ನಿಮಿಷ ವಿಶ್ರಾಂತಿ ಪಡೆದು ಹೋಗುತ್ತೇನೆ’ ಎನ್ನುತ್ತಿದ್ದರು. ಅವರ ಮಾತು ನಂಬಿ ಮಾಲೀಕರು ಒಪ್ಪಿಕೊಳ್ಳುತ್ತಿದ್ದರು.

ಕೊಠಡಿಯಲ್ಲಿ ಇರುತ್ತಿದ್ದ ಯುವತಿಗೆ ತಮ್ಮನ್ನು ಬೇರೆ ಹೆಸರಿನಿಂದ ಪರಿಚಯ ಮಾಡಿಕೊಳ್ಳುತ್ತಿದ್ದ ಶೋಭಾ, ಅವರು ಸ್ನಾನಕ್ಕೆ ಹೋಗುತ್ತಿದ್ದಂತೆಯೇ ಲ್ಯಾಪ್‌ಟಾಪ್‌ಗಳನ್ನು ಬ್ಯಾಗ್‌ಗೆ ಹಾಕಿಕೊಂಡು ಹೊರಬರುತ್ತಿದ್ದರು. ಮಾಲೀಕರು ಎದುರಾದರೆ, ‘ಸಂದರ್ಶನಕ್ಕೆ ಹೋಗುತ್ತಿದ್ದೇನೆ. ಸಂಜೆ ಬರುತ್ತೇನೆ’ ಎಂದು ಹೇಳಿ ಪರಾರಿಯಾಗುತ್ತಿದ್ದರು.

ರಿಪೇರಿಗೆ ಕೊಟ್ಟು ಮಾರಾಟ: ಕದ್ದ ಲ್ಯಾಪ್‌ಟಾಪ್‌ಗಳನ್ನು ಸರ್ವಿಸ್‌ ಸೆಂಟರ್‌ಗಳಿಗೆ ಕೊಡುತ್ತಿದ್ದ ಶೋಭಾ, ‘ಕೆಲ ದಿನಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇವುಗಳನ್ನು ರಿಪೇರಿ ಮಾಡಿ ಯಾರಿಗಾದರೂ ಮಾರಾಟ ಮಾಡಿ. ನಿಮಗೆ ಕಮಿಷನ್ ಕೊಡುತ್ತೇನೆ’ ಎಂದು ಹೇಳುತ್ತಿದ್ದರು. ಹೀಗೆ, ₹3,000ದಿಂದ ₹5,000ಕ್ಕೆ ಒಂದರಂತೆ ಲ್ಯಾಪ್‌ಟಾಪ್‌ಗಳನ್ನು ಮಾರಿದ್ದರು ಎಂದು ಪೊಲೀಸರು ಹೇಳಿದರು. ಶೋಭಾ ದೊಡ್ಡಬಳ್ಳಾಪುರದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾರೆ. ಪಿಯುಸಿ ಓದಿರುವ ಆತ ಕೆಲಸಕ್ಕೆ ಹೋಗುವುದಿಲ್ಲ. ಈ ರೀತಿ ಗಳಿಸಿದ ಹಣದಲ್ಲೇ ಪ್ರಿಯಕರನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದ ಶೋಭಾ, ಖರ್ಚಿಗೆ ಆತನಿಗೆ ಪ್ರತೀ ತಿಂಗಳು ಹಣ ಕೊಡುತ್ತಿದ್ದರು ಎಂದು ಮಾಹಿತಿ ನೀಡಿದರು.

ಮಾರಲು ಬಂದಾಗಲೇ ಬಂಧನ

‘ಬಿಟಿಎಂ ಲೇಔಟ್‌ನ ಪೇಯಿಂಗ್ ಗೆಸ್ಟ್ ಕಟ್ಟಡದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಶೋಭಾ ಚಹರೆ ಸೆರೆಯಾಗಿತ್ತು. ಅದರ ಹಲವು ಪ್ರತಿಗಳನ್ನು ಮುದ್ರಿಸಿಕೊಂಡು ಕಾರ್ಯಾಚರಣೆ ಶುರು ಮಾಡಿದೆವು. ಚಹರೆ ನೋಡಿದ ಕೋರಮಂಗಲದ ಸರ್ವಿಸ್‌ ಸೆಂಟರ್‌ನ ನೌಕರರು, ಈ ಯುವತಿ ಕೆಲ ದಿನಗಳ ಹಿಂದೆ ತಮಗೆ ಲ್ಯಾಪ್‌ಟಾಪ್ ಮಾರಾಟ ಮಾಡಿ ಹೋಗಿದ್ದಾಗಿ ಹೇಳಿದರು’ ಎಂದು ಪೊಲೀಸರು ತಿಳಿಸಿದರು.

‘ಮತ್ತೊಮ್ಮೆ ಬಂದರೆ ಠಾಣೆಗೆ ಕರೆ ಮಾಡುವಂತೆ ತಿಳಿಸಿದ್ದೆವು. ಲ್ಯಾಪ್‌ಟಾಪ್ ಮಾರಲು ಶೋಭಾ ಪುನಃ ಅಲ್ಲಿಗೇ ತೆರಳಿದ್ದರು. ತಕ್ಷಣ ನೌಕರರು ನಮಗೆ ಮಾಹಿತಿ ನೀಡಿದರು. ಆರೋಪಿಯನ್ನು ವಶಕ್ಕೆ ಪಡೆದು ಲ್ಯಾಪ್‌ಟಾಪ್ ಜಪ್ತಿ ಮಾಡಿದೆವು’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry