₹ 5,450 ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ: ಕುಮಾರಸ್ವಾಮಿ ಆರೋಪ

7

₹ 5,450 ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ: ಕುಮಾರಸ್ವಾಮಿ ಆರೋಪ

Published:
Updated:
₹ 5,450 ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ: ಕುಮಾರಸ್ವಾಮಿ ಆರೋಪ

ಬೆಂಗಳೂರು: ‘ಬಳ್ಳಾರಿಯ ಸಂಡೂರಿನಿಂದ ₹ 5,450 ಕೋಟಿ ಮೌಲ್ಯದ ಅದಿರು ಕಳ್ಳ ಸಾಗಣೆಯಾಗಿರುವ ಪ್ರಕರಣ ಮೈಸೂರು ಮಿನರಲ್ಸ್‌ಲಿಮಿಟೆಡ್‌ (ಎಂಎಂಎಲ್‌) ಆಂತರಿಕ ತನಿಖೆಯಿಂದ ಬಹಿರಂಗವಾಗಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

‘ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳ ಮಾರ್ಗದರ್ಶನದಲ್ಲೇ ಈ ಅಕ್ರಮ ನಡೆದಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಈ ಸಂಬಂಧದ ದಾಖಲೆಗಳನ್ನು ಪಡೆದುಕೊಂಡಿದ್ದೇನೆ’ ಎಂದು ಶನಿವಾರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾರ್ಗದರ್ಶನದಲ್ಲೇ ಅಕ್ರಮ ಗಣಿಗಾರಿಕೆಗೆ ನಡೆದಿದೆ’ ಎಂದು ಕುಮಾರಸ್ವಾಮಿ ಆಪಾದಿಸಿದರು.

‘ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ  ನೆಪಮಾತ್ರಕ್ಕೆ ವಿನಯ ಕುಲಕರ್ಣಿ ಸಚಿವರಾಗಿದ್ದು, ಅವರಿಗೆ ಲಿಂಗಾಯತ ಧರ್ಮದ ಜವಾಬ್ದಾರಿ ನೀಡಲಾಗಿದೆ. ತುಷಾರ್ ಅವರೇ ಈ ಇಲಾಖೆ ನಿರ್ವಹಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕೆಲಸ ಮಾಡಿರುವುದಾಗಿ ತನಿಖೆ ವೇಳೆ ಕೆಳಹಂತದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ’ ಎಂದರು.

‘ಮಾತು ಕೇಳದ ಎಂಎಂಎಲ್‌ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚು ಕಾಲ ಆ ಹುದ್ದೆಯಲ್ಲಿ ಉಳಿದಿಲ್ಲ. ಹಗರಣ ಬಯಲಿಗೆಳೆಯಲು ಯತ್ನಿಸಿದ ಮನೀಶ್‌ ಮೌದ್ಗಿಲ್‌ ಸೇರಿ ಎಂಟು ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ’ ಎಂದರು.

‘ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆತಟ್ಟಿ ಬಳ್ಳಾರಿ ತನಕ ಪಾದಯಾತ್ರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಯಾರ ರಕ್ಷಣೆಗೆ ನಿಂತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದರು.

ಪ್ರಕರಣದ ವಿವರ: ಸಂಡೂರು ತಾಲ್ಲೂಕಿನ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಪ್ರದೇಶದಲ್ಲಿ ಎಂಎಂಎಲ್‌ ಗಣಿಗಾರಿಕೆ ನಡೆಸುತ್ತಿದೆ. ಸುಬ್ಬರಾಯನಹಳ್ಳಿಯ ವ್ಯಾಪ್ತಿಯಲ್ಲಿ 2014ರ ನ.27ರಿಂದ 2017ರ ಮಾ 31ರವರ ಅವಧಿವರೆಗೆ ಅದಿರು ತೆಗೆದು ಸಂಸ್ಕರಿಸಿ ಸಾಗಣೆ ಮಾಡಲು ಎಸ್‌.ಎಸ್‌. ಮುಚುಂಡಿ ಎಂಜಿನಿಯರ್ಸ್, ಅಮಿತ್ ಅರ್ಥ್ ಮೂವರ್ಸ್, ವಿಶಾಲ್ ಎಂಟರ್‌ ಪ್ರೈಸಸ್ ಕಂಪನಿಗಳಿಗೆ ಹಾಗೂ ತಿಮ್ಮಪ್ಪನಗುಡಿ ಪ್ರದೇಶದ ಗುತ್ತಿಗೆಯನ್ನು ಸೌಥ್‌ ವೆಸ್ಟ್‌ ಮೈನಿಂಗ್ ಲಿಮಿಟೆಡ್, ವಿಶಾಲ್ ಎಂಟರ್‌ ಪ್ರೈಸಸ್‌ಗೆ ಗುತ್ತಿಗೆ ನೀಡಲಾಗಿತ್ತು.

‘ಒಪ್ಪಂದದ ಪ್ರಕಾರ ಸುಬ್ಬರಾಯನಹಳ್ಳಿ ಗಣಿ ಪ್ರದೇಶದಿಂದ ವಾರ್ಷಿಕ 30 ಲಕ್ಷ ಟನ್ ಅದಿರು ತೆಗೆಯಲು ಅನುಮತಿ ಇದೆ. ಅದರಂತೆ 2014–15ರಿಂದ 2016–17ರವರೆಗೆ ಮೂರು ವರ್ಷದ ಅವಧಿಯಲ್ಲಿ 60,56,440 ಟನ್‌ ಅದಿರು ತೆಗೆಯಲಾಗಿದೆ ಎಂಬುದನ್ನು ದಾಖಲೆಗಳಲ್ಲಿ ತೋರಿಸಲಾಗಿದೆ. ಆದರೆ, ಅದಕ್ಕೂ ಮೂರುಪಟ್ಟು ಅಧಿಕ ಅದಿರನ್ನು ಅಕ್ರಮವಾಗಿ ತೆಗೆಯಲಾಗಿದೆ. ಕಳ್ಳ ಸಾಗಣೆ ಮುಚ್ಚಿಡಲು ಪ್ರೊಡಕ್ಷನ್ ರಿಜಿಸ್ಟರ್ ಪುಸ್ತಕಗಳ ಪುಟಗಳನ್ನು ಹರಿದು ಹಿಂದು–ಮುಂದು ಮಾಡಿ ಅಂಟಿಸಲಾಗಿದೆ’ ಎಂದು ಅವರು ದೂರಿದರು.

‘ರಿಜಿಸ್ಟರ್‌ಗೆ ಎಂಎಂಎಲ್ ಅಧಿಕಾರಿ ಮತ್ತು ಗುತ್ತಿಗೆದಾರರು ಸಹಿ ಕಡ್ಡಾಯವಾಗಿದೆ. ಆದರೆ, 2015ರ ಡಿ.22ರಿಂದ 2016ರ ಮಾ.31ರ ಅವಧಿಯಲ್ಲಿ ಎಂಎಂಎಲ್ ಅಧಿಕಾರಿ ಸಹಿ ಮಾಡಿಲ್ಲ. ಅಲ್ಲದೆ, 2016ರ ಮಾರ್ಚ್‌ನಲ್ಲಿ ಗುತ್ತಿಗೆದಾರರ ಕೂಡ ಸಹಿ ಮಾಡಿಲ್ಲ’ ಎಂದು ವಿವರಿಸಿದರು.

‘ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಎಂಎಂಎಲ್‌ ಅಧಿಕಾರಿಗಳು ನೀಡಿದ ವರದಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಆದರೆ, ಅದನ್ನು ಮುಚ್ಚಿಡುವ ಪ್ರಯತ್ನ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆಯುತ್ತಿದೆ’ ಎಂದೂ ಕುಮಾರಸ್ವಾಮಿ ಆಪಾದಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಅಷ್ಟೇ ಪ್ರಮಾಣದ ಅದಿರು ಅಕ್ರಮವಾಗಿ ಸಾಗಣೆಯಾಗಿದೆ’ ಎಂದು ದೂರಿದರು.

‘ವ್ಯವಹಾರದ ಅರಿವಿಲ್ಲದೆ ಯಡಿಯೂರಪ್ಪ ಚೆಕ್‌ನಲ್ಲಿ ಹಣ ಪಡೆದ ಕಾರಣಕ್ಕೆ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಸಿದ್ದರಾಮಯ್ಯ ಬುದ್ದಿವಂತರಿದ್ದು, ತಾವು ಸಿಕ್ಕಿಹಾಕಿಕೊಳ್ಳದಂತೆ ಎಚ್ಚರಿಕೆಯಿಂದ ಅಧಿಕಾರಿಗಳ ಮೂಲಕ ಈ ಅಕ್ರಮಗಳನ್ನು ಮಾಡಿಸಿದ್ದಾರೆ’ ಎಂದು ಆರೋಪಿಸಿದರು.

‘ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿಲ್ಲ. ನಿರಾಸೆಯಾಗಿರುವ ಕಾರಣ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಸಮಯ ವ್ಯರ್ಥ ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ’ ಎಂದರು.

‘ನನ್ನನ್ನು ಹಿಟ್ ಅಂಡ್ ರನ್‌ ಎಂದು ಸಿದ್ದರಾಮಯ್ಯ ಪದೇ ಪದೇ ಟೀಕಿಸುತ್ತಿದ್ದಾರೆ. ಕಿಕ್‌ ಬ್ಯಾಕ್ ಪಡೆದು ಸುಮ್ಮನಾಗಿದ್ದೇನೆ ಎಂದು ಬಿಜೆಪಿ ಬೆಂಬಲಿಗರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಣಕುತ್ತಿದ್ದಾರೆ. ಹೀಗಾಗಿ ದಾಖಲೆಗಳ ಸಹಿತ ಆರೋಪ ಮಾಡುತ್ತಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ತುಷಾ‌ರ್ ಆಣತಿಯಲ್ಲೇ ನಡೆದಿದೆ...

‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾರ್ಗದರ್ಶನದಲ್ಲೇ  ಅಕ್ರಮ ಗಣಿಗಾರಿಕೆಗೆ ನಡೆದಿದೆ’ ಎಂದು ಕುಮಾರಸ್ವಾಮಿ ಆಪಾದಿಸಿದರು.

‘ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ  ನೆಪಮಾತ್ರಕ್ಕೆ ವಿನಯ ಕುಲಕರ್ಣಿ ಸಚಿವರಾಗಿದ್ದು, ಅವರಿಗೆ ಲಿಂಗಾಯತ ಧರ್ಮದ ಜವಾಬ್ದಾರಿ ನೀಡಲಾಗಿದೆ. ತುಷಾರ್ ಅವರೇ ಈ ಇಲಾಖೆ ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕೆಲಸ ಮಾಡಿರುವುದಾಗಿ ತನಿಖೆ ವೇಳೆ ಕೆಳಹಂತದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ’ ಎಂದೂ ಅವರು ವಿವರಿಸಿದರು.

‘ಮಾತು ಕೇಳದ ಎಂಎಂಎಲ್‌ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚು ಕಾಲ ಆ ಹುದ್ದೆಯಲ್ಲಿ ಉಳಿದಿಲ್ಲ. ಈ ಬಗ್ಗೆ ಹಗರಣ ಬಯಲಿಗೆಳೆಯಲು ಪ್ರಯತ್ನಿಸಿದ ಎಂಎಂಎಲ್ ಎಂ.ಡಿ ಆಗಿದ್ದ ಮುನೀಶ್‌ ಮೌದ್ಗಿಲ್ ಅವರನ್ನು ಒಂದೇ ತಿಂಗಳಲ್ಲಿ ವರ್ಗಾವಣೆ ಮಾಡಲಾಯಿತು. ಅಕ್ರಮದ ಬಗ್ಗೆ ಲೋಕಾಯುಕ್ತ ತನಿಖೆಗೆ ವಹಿಸಲು ಮುಂದಾದ ಹೇಮಲತಾ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಒಟ್ಟು ಎಂಟು ಐಎಎಸ್‌ ಅಧಿಕಾರಿಗಳು ವರ್ಗಾವಣೆ ಆಗಿದ್ದಾರೆ’ ಎಂದೂ ಟೀಕಿಸಿದರು.

‘ಪ್ರತಿಕ್ರಿಯೆ ನೀಡಲಾರೆ’

ನನ್ನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡಲಾರೆ. ಗಣಿ ಇಲಾಖೆಯ ಕಾರ್ಯದರ್ಶಿ, ಎಂಎಂಎಲ್‌ ಅಥವಾ ಸಂಬಂಧಪಟ್ಟ ಸಚಿವರು ಇದಕ್ಕೆ ಉತ್ತರಿಸಬೇಕು ಎಂದು ತುಷಾರ್ ಗಿರಿನಾಥ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry