‘23ರಿಂದ ವಿಶ್ವ ಲಿಂಗಾಯತ ಪರಿಷತ್ ಅಸ್ತಿತ್ವಕ್ಕೆ’

5

‘23ರಿಂದ ವಿಶ್ವ ಲಿಂಗಾಯತ ಪರಿಷತ್ ಅಸ್ತಿತ್ವಕ್ಕೆ’

Published:
Updated:
‘23ರಿಂದ ವಿಶ್ವ ಲಿಂಗಾಯತ ಪರಿಷತ್ ಅಸ್ತಿತ್ವಕ್ಕೆ’

ಬೆಂಗಳೂರು: ‘ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಮುನ್ನಡೆಸಲು ‘ವಿಶ್ವ ಲಿಂಗಾಯತ ಪರಿಷತ್’ ಅಸ್ತಿತ್ವಕ್ಕೆ ಬರಲಿದೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿಯೂ ಆದ ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಸಂಚಾಲಕ ಎಸ್.ಎಂ. ಜಾಮದಾರ ಘೋಷಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ನಾವು ಅಖಿಲ ಭಾರತ ವೀರಶೈವ ಮಹಾಸಭಾ ಜತೆಗೆ ಮೂರ್ನಾಲ್ಕು ಬಾರಿ ಸಭೆ ನಡೆಸಿದ್ದರೂ ಈ ಮೂರು ವಿಚಾರಗಳಲ್ಲಿ ಒಮ್ಮತಕ್ಕೆ ಬರಲಾಗಿಲ್ಲ. ಹೀಗಾಗಿ ನಮ್ಮ ಹೋರಾಟ ಮುನ್ನಡೆಸಲು ಪರಿಷತ್ ರಚನೆಗೆ ಮುಂದಾಗಿದ್ದೇವೆ’ ಎಂದರು.

‘ನಮ್ಮ ಧರ್ಮದ ಸಂಸ್ಥಾಪಕ ಬಸವಣ್ಣ, ವಚನ ಸಾಹಿತ್ಯ ನಮ್ಮ ಧರ್ಮಗ್ರಂಥ ಮತ್ತು ನಾವು ಹಿಂದೂ ಧರ್ಮದ ಭಾಗವಲ್ಲ ಎಂಬ ವಿಚಾರಗಳನ್ನು ವೀರಶೈವ ಮಹಾಸಭಾ ಒಪ್ಪುತ್ತಿಲ್ಲ. ಪಂಚಾಚಾರ್ಯರು ನಮ್ಮ ಧರ್ಮ ಸಂಸ್ಥಾಪಕರು, ಸಿದ್ಧಾಂತ ಶಿಖಾಮಣಿ ನಮ್ಮ ಧರ್ಮಗ್ರಂಥ ಮತ್ತು ನಾವು ಹಿಂದೂ ಧರ್ಮದ ಭಾಗ ಎಂದು ಮಹಾಸಭೆ ವಾದಿಸುತ್ತಿದೆ’ ಎಂದರು.

‘113 ವರ್ಷ ಹಳೆಯದಾದ ವೀರಶೈವ ಮಹಾಸಭಾ ತನ್ನ ಮೊಂಡು ವಾದಕ್ಕೆ ಅಂಟಿಕೊಂಡು ಕುಳಿತಿದೆ. ಒಮ್ಮತಕ್ಕೆ ಬರಲು ನಾವು 8 ತಿಂಗಳಿನಿಂದ ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ, ಅವರು ನಮ್ಮ ಪ್ರಯತ್ನಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಇನ್ನೂ ಅವರಿಗಾಗಿ ಕಾಯುತ್ತಾ ಕೂರುವುದು ಸಾಧ್ಯವಿಲ್ಲ’ ಎಂದು ಹೇಳಿದರು.

‘ಜನವರಿ 23ರಿಂದ ಪರಿಷತ್‌ನ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸುತ್ತೇವೆ. ಅಂದಿನಿಂದಲೇ ಪರಿಷತ್‌ ಅಸ್ತಿತ್ವಕ್ಕೆ ಬರಲಿದೆ. ಈ ತಿಂಗಳೊಳಗೆ ಪರಿಷತ್‌ನ ನೋಂದಣಿಯೂ ನಡೆಯಲಿದೆ. ಲಿಂಗಾಯತ ಪರಿಷತ್‌ನ ಯುವ ವೇದಿಕೆಯಾಗಿ ರಾಷ್ಟ್ರೀಯ ಬಸವ ಸೇನಾ ಕೆಲಸ ಮಾಡಲಿದೆ. ಪರಿಷತ್‌ನಲ್ಲಿ ವೃತ್ತಿಪರರ ವಿಶೇಷ ವಿಭಾಗ, ಮಹಿಳಾ ವಿಭಾಗ, ವಿದೇಶಿ ಲಿಂಗಾಯತರ ವಿಶೇಷ ಕೋಶ ಇರಲಿದೆ. ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡಿನಲ್ಲಿರುವ ಲಿಂಗಾಯತರನ್ನೂ ಸಂಪರ್ಕಿಸಿದ್ದೇವೆ. ಎಲ್ಲ ಲಿಂಗಾಯತರನ್ನೂ ಪರಿಷತ್‌ ಅಡಿ ಒಂದುಗೂಡಿಸುವ ಉದ್ದೇಶ ನಮ್ಮದು’ ಎಂದರು.

‘ಪರಿಷತ್‌ಗಾಗಿ ವಿಶೇಷ ಲಾಂಛನ ಸಿದ್ಧಪಡಿಸುತ್ತಿದ್ದೇವೆ. ಅದರಲ್ಲಿ ಬಸವಣ್ಣನ ಚಿತ್ರವೂ ಇರಲಿದೆ. ನಮ್ಮ ಹೋರಾಟಕ್ಕೆ ಜತೆಯಾಗುವ ಎಲ್ಲರನ್ನೂ ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ. ನಮ್ಮ ಗುರಿ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆನ್ನುವುದು’ ಎಂದರು.

‘ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ವೀರಶೈವ ಮಹಾಸಭಾದ ಪ್ರೋತ್ಸಾಹ ಹೆಚ್ಚೇನೂ ಇಲ್ಲ. ಆದರೆ, ಲಿಂಗಾಯತ ಪರಿಷತ್‌ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಶ್ರಮಿಸಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry