15 ಟಿಎಂಸಿ ಅಡಿ ನೀರು ಬಿಡಿ: ಪಳನಿಸ್ವಾಮಿ ಒತ್ತಾಯ

7

15 ಟಿಎಂಸಿ ಅಡಿ ನೀರು ಬಿಡಿ: ಪಳನಿಸ್ವಾಮಿ ಒತ್ತಾಯ

Published:
Updated:
15 ಟಿಎಂಸಿ ಅಡಿ ನೀರು ಬಿಡಿ: ಪಳನಿಸ್ವಾಮಿ ಒತ್ತಾಯ

ಚೆನ್ನೈ: ಕಾವೇರಿ ನದಿ ನೀರಿನಲ್ಲಿ ಈ ವರ್ಷ (2017–18ನೇ ಸಾಲು) ಎಷ್ಟು ನೀರು ಬರಬೇಕಿತ್ತೋ ಅಷ್ಟು ನೀರು ಬಂದಿಲ್ಲ. ಹಾಗಾಗಿ 15 ಟಿಎಂಸಿ ಅಡಿ ನೀರನ್ನು ತಕ್ಷಣವೇ ತಮಿಳುನಾಡಿಗೆ ಹರಿಸಬೇಕು ಎಂದು ಅಲ್ಲಿನ ಸರ್ಕಾರವು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

‘ಈತನಕ 179.87 ಟಿಎಂಸಿ ಅಡಿ ನೀರು ಹರಿದುಬರಬೇಕಿತ್ತು. ಆದರೆ ಇದೇ 9ರವರೆಗೆ ಬಿಳಿಗುಂಡ್ಲು ಮಾಪನ ಕೇಂದ್ರದ ಮೂಲಕ 111.64 ಟಿಎಂಸಿ ಅಡಿ ನೀರು ಮಾತ್ರ ಬಂದಿದೆ. ಇನ್ನೂ 68.22 ಟಿಎಂಸಿ ಅಡಿ ನೀರು ಬರಬೇಕಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಪತ್ರದಲ್ಲಿ ಹೇಳಿದ್ದಾರೆ.

ಕಾವೇರಿ ನದಿ ನೀರು ವಿವಾದ ಪರಿಹಾರ ನ್ಯಾಯಮಂಡಳಿಯು 2007ರಲ್ಲಿ ನೀಡಿದ ಆದೇಶದ ಪ್ರಕಾರ ತಮಿಳುನಾಡಿಗೆ ಪ್ರತಿ ವರ್ಷ 192 ಟಿಎಂಸಿ ಅಡಿ ನೀರು ಹೋಗಬೇಕು.

ಸೇಲಂ ಜಿಲ್ಲಿಯಲ್ಲಿನ ಮೆಟ್ಟೂರು ಜಲಾಶಯದಲ್ಲಿ ಈಗ ಕೇವಲ 21.27 ಟಿಎಂಸಿ ಅಡಿ ನೀರು ಇದೆ. ಅದರಲ್ಲಿ ಬಳಸಲು ಸಾಧ್ಯವಿರುವ ನೀರಿನ ಪ್ರಮಾಣ 16.27 ಟಿಎಂಸಿ ಅಡಿ ಮಾತ್ರ. ಬೆಳೆದು ನಿಂತಿರುವ ಬೆಳೆ ಮತ್ತು ಬೇಸಿಗೆಯಲ್ಲಿ ಕುಡಿಯುವುದಕ್ಕೆ ಈ ನೀರು ಸಾಕಾಗದು ಎಂದು ಪಳನಿಸ್ವಾಮಿ ಹೇಳಿದ್ದಾರೆ.

ಕಾವೇರಿ ನದಿ ಪಾತ್ರದಲ್ಲಿರುವ ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಈಗ 49.82 ಟಿಎಂಸಿ ಅಡಿ ನೀರಿದೆ. ಕರ್ನಾಟಕದ ಬೆಳೆ ಋತು ಮುಗಿದಿದೆ. ಕುಡಿಯುವುದಕ್ಕಾಗಿ ನೀರು ಉಳಿಸಿಕೊಂಡು ಕನಿಷ್ಠ 15 ಟಿಎಂಸಿ ಅಡಿ ನೀರನ್ನಾದರೂ ಕರ್ನಾಟಕ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ನೀರಿಲ್ಲದಿರುವಾಗ ಕೊಡುವುದು ಹೇಗೆ‘

ನವದೆಹಲಿ: ಕಾವೇರಿ ನೀರು ಬಿಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ತಳ್ಳಿ ಹಾಕಿದರು.

ನೀರು ಬಿಡುವುದಿಲ್ಲ ಎಂಬುದು ರಾಜ್ಯದ ನಿಲುವಲ್ಲ. ಆದರೆ ನಮಗೇ ನೀರಿಲ್ಲದಿರುವಾಗ ತಮಿಳುನಾಡಿಗೆ ಬಿಡುವುದು ಸಾಧ್ಯವಿಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

ಕಾವೇರಿ ಜಲವಿವಾದ ಕುರಿತು ತಿಂಗಳೊಪ್ಪತ್ತಿನಲ್ಲಿ ಹೊರಬೀಳಲಿರುವ ಸುಪ್ರೀಂ ಕೋರ್ಟ್ ತೀರ್ಪು ರಾಜ್ಯದ ಪರವಾಗಿರುತ್ತದೆ ಎಂಬ ನಿರೀಕ್ಷೆ ಇದೆ ಎಂದರು.

ಮಹದಾಯಿ ಜಲವಿವಾದ ಕುರಿತು ಶೀಘ್ರದಲ್ಲೇ ಮತ್ತೊಂದು ಸರ್ವಪಕ್ಷ ಸಭೆ ಕರೆಯಲಾಗುವುದು. ಈ ವಿವಾದಕ್ಕೆ ರಾಜಕೀಯ ಪರಿಹಾರವೊಂದೇ ಕಾಯಂ ಪರಿಹಾರ ಆಗಲಿದೆ. ಪ್ರಧಾನಿ ಮಧ್ಯಪ್ರವೇಶಿಸಿ ಈ ವಿವಾದವನ್ನು ಬಗೆಹರಿಸುವ ಅವಕಾಶ ಈಗಲೂ ಇದೆ. ಆದರೆ ಅವರು ಮನಸ್ಸು ಮಾಡುತ್ತಿಲ್ಲ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry