ಹರಿದು ಬಂದ ಜನಸಾಗರ, ಕಳೆಗಟ್ಟಿದ ಕ್ಷೇತ್ರ

7
ಸುತ್ತೂರು ಜಾತ್ರೆಗೆ ವಿಧ್ಯುಕ್ತ ಚಾಲನೆ; ಇಂದು ಸಾಮೂಹಿಕ ವಿವಾಹ, 15ರಂದು ಮಹಾರಥೋತ್ಸವ

ಹರಿದು ಬಂದ ಜನಸಾಗರ, ಕಳೆಗಟ್ಟಿದ ಕ್ಷೇತ್ರ

Published:
Updated:
ಹರಿದು ಬಂದ ಜನಸಾಗರ, ಕಳೆಗಟ್ಟಿದ ಕ್ಷೇತ್ರ

ಮೈಸೂರು: ತಳಿರು ತೋರಣಗಳಿಂದ ಸಿಂಗಾರಗೊಂಡ ರಸ್ತೆಗಳು, ಭಕ್ತರನ್ನು ಜಾತ್ರೆಯ ಸ್ಥಳಕ್ಕೆ ಆಹ್ವಾನಿಸುತ್ತಿರುವ ಸ್ವಾಗತ ಕಮಾನುಗಳು, ರಸ್ತೆಯ ಇಕ್ಕೆಲಗಳಲ್ಲಿ ತೆರೆದ ನೂರಾರು ಅಂಗಡಿಗಳಲ್ಲಿ ಖರೀದಿಯ ಭರಾಟೆ, ಮೈಕ್‌ಗಳಲ್ಲಿ ಅಲೆಅಲೆಯಾಗಿ ಕೇಳಿಬರುತ್ತಿರುವ ಭಜನೆ, ಭಕ್ತಿಗೀತೆ...

ಸುತ್ತೂರು ಕ್ಷೇತ್ರದಲ್ಲಿ ಶನಿವಾರ ಆರಂಭವಾದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಮೊದಲ ದಿನ ಕಂಡುಬಂದ ದೃಶ್ಯಗಳಿವು. ಜನವರಿ 18ರವರೆಗೆ ನಡೆಯಲಿರುವ ಜಾತ್ರೆಗೆ ಅದ್ದೂರಿ ಚಾಲನೆ ದೊರೆತಿದೆ. ಇನ್ನು ಆರು ದಿನ ಸುತ್ತೂರು ಕ್ಷೇತ್ರ ಸಾಂಸ್ಕೃತಿಕ ವೈಭವ, ಭಕ್ತಿ ಭಾವದಲ್ಲಿ ಮಿಂದೇಳಲಿದೆ.

ವಸ್ತು ಪ್ರದರ್ಶನ ತಾಣ ಮತ್ತು ಕೃಷಿ ಮೇಳದಲ್ಲಿ ಮೊದಲ ದಿನವೇ ಜನ ಜಂಗುಳಿ ಕಂಡು ಬಂತು. ಜನರಿಗೆ ಮನರಂಜನೆ ನೀಡುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ಸಂಜೆಯಾಗುತ್ತಿದ್ದಂತೆಯೇ ರಂಗೇರಿತು. ವಸ್ತುಪ್ರದರ್ಶನ ತಾಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಿವರಾಜ್‌ಕುಮಾರ್‌ ಉದ್ಘಾಟನೆ: ನಟ ಶಿವರಾಜ್‌ಕುಮಾರ್‌ ಅವರು ನಗಾರಿ ಬಾರಿಸಿ ಸಾಂಸ್ಕೃತಿಕ ಮೇಳ ಉದ್ಘಾಟಿಸಿದರು. ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌ ಅವರು ರಂಗೋಲಿ ಸ್ಪರ್ಧೆ ಮತ್ತು ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರು ಸೋಬಾನೆ ಪದ ಸ್ಪರ್ಧೆಯನ್ನು ಉದ್ಘಾಟಿಸಿದರು.

ಸುರೇಶ್ ಕುಮಾರ್ ಮಾತನಾಡಿ, ‘ಇಂದು ದೇಶದ ಎಲ್ಲೆಡೆ ಸಮಾಜವನ್ನು ಒಡೆಯುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ. ಆದರೆ, ಸುತ್ತೂರು ಕ್ಷೇತ್ರ ಜನರನ್ನು ಒಟ್ಟುಗೂಡಿಸಿ, ಸಮಾಜವನ್ನು ಬಲಪಡಿಸುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಮಾತನಾಡಿ, ‘ದೇಶದ ಭವ್ಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ಮಠಗಳು ಮಾಡುತ್ತಿವೆ. ಲಕ್ಷಾಂತರ ಜನರಿಗೆ ಸಂತಸ ನೀಡುವ ಇಂತಹ ಜಾತ್ರೋತ್ಸವವನ್ನು ಪ್ರತಿವರ್ಷ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ಭಕ್ತರ ಅನುಕೂಲಕ್ಕಾಗಿ ಮೈಸೂರು ಹಾಗೂ ಇತರೆಡೆಗಳಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಜಾತ್ರೆಯ ದಾಸೋಹ ಕಾರ್ಯಕ್ರಮಕ್ಕೆ ಶುಕ್ರವಾರದಂದೇ ಚಾಲನೆ ನೀಡಲಾಗಿತ್ತು. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಮೊದಲ ದಿನ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಲಾವಿದರು ನಾದಸ್ವರ, ಸುಗಮಸಂಗೀತ ಮತ್ತು ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ರಾತ್ರಿ ಶಹನಾಯ್‌ ವಾದನ ಮತ್ತು ನಾಟಕ ಪ್ರದರ್ಶನ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಕಂಬದಹಳ್ಳಿಯ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಜಯರಾಜೇಂದ್ರ ಸ್ವಾಮೀಜಿ, ಚಿತ್ರ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ಶಾಸಕ ಎಂ.ಪಿ.ರವೀಂದ್ರ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್‌, ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ಪಾಲ್ಗೊಂಡಿದ್ದರು.

ಮನಗೆದ್ದ ಶಿವರಾಜ್‌ಕುಮಾರ್‌

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಟ ಶಿವರಾಜ್‌ಕುಮಾರ್‌ ಅವರು ಸಿನಿಮಾದ ಡೈಲಾಗ್‌ ಹೊಡೆದು, ಹಾಡು ಮತ್ತು ನೃತ್ಯದ ಮೂಲಕ ನೆರೆದವರ ಮನಗೆದ್ದರು.

‘ಮಫ್ತಿ’ ಚಿತ್ರದ ಡೈಲಾಗ್‌ನೊಂದಿಗೆ ಮಾತು ಆರಂಭಿಸಿದ ಅಭಿಮಾನಿಗಳ ನೆಚ್ಚಿನ ‘ಶಿವಣ್ಣ’, ಸುತ್ತೂರು ಕ್ಷೇತ್ರದ ವತಿಯಿಂದ ನಡೆಯುತ್ತಿರುವ ಕೆಲಸಗಳನ್ನು ಶ್ಲಾಘಿಸಿದರು.

‘ಈ ಹಿಂದೆ ಎರಡು ಸಲ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೆ. ನನ್ನ ಮಗಳು ಜೆಎಸ್‌ಎಸ್‌ನಲ್ಲೇ ಓದಿದ್ದು. ಸುತ್ತೂರು ಗ್ರಾಮದ ಸೊಬಗು ಕಣ್ಣಿಗೆ ಕಟ್ಟುವಂತಿದೆ. ಅವಕಾಶ ಸಿಕ್ಕರೆ ಮುಂದಿನ ಸಿನಿಮಾದ ಶೂಟಿಂಗ್‌ ಇಲ್ಲೇ ಮಾಡಬೇಕು’ ಎಂದು ಹೇಳಿದರು.

ಅಭಿಮಾನಿಗಳು ಹಾಡು ಹೇಳುವಂತೆ ಒತ್ತಾಯಿಸಿದಾಗ, ‘ವಾರೆ ನೋಟ ನೋಡೈತೆ.. ’ ಹಾಡಿನ ಎರಡು ಮೂರು ಸಾಲುಗಳನ್ನು ಹಾಡಿದರು. ಆ ಬಳಿಕ ನೃತ್ಯಮಾಡಿ ನೆರೆದವರನ್ನು ರಂಜಿಸಿದರು.

ಶಿವರಾಜ್‌ ಕುಮಾರ್‌ ವೇದಿಕೆಯಿಂದ ಇಳಿದು ಹೋಗುವಾಗ ಅಭಿಮಾನಿಗಳು ಹಿಂಬಾಲಿಸಿದರು. ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

***

ಮನಗೆದ್ದ ಶಿವರಾಜ್‌ಕುಮಾರ್‌

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಟ ಶಿವರಾಜ್‌ಕುಮಾರ್‌ ಅವರು ಸಿನಿಮಾದ ಡೈಲಾಗ್‌ ಹೊಡೆದು, ಹಾಡು ಮತ್ತು ನೃತ್ಯದ ಮೂಲಕ ನೆರೆದವರ ಮನಗೆದ್ದರು.

‘ಮಫ್ತಿ’ ಚಿತ್ರದ ಡೈಲಾಗ್‌ನೊಂದಿಗೆ ಮಾತು ಆರಂಭಿಸಿದ ಅಭಿಮಾನಿಗಳ ನೆಚ್ಚಿನ ‘ಶಿವಣ್ಣ’, ಸುತ್ತೂರು ಕ್ಷೇತ್ರದ ವತಿಯಿಂದ ನಡೆಯುತ್ತಿರುವ ಕೆಲಸಗಳನ್ನು ಶ್ಲಾಘಿಸಿದರು.

‘ಈ ಹಿಂದೆ ಎರಡು ಸಲ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೆ. ನನ್ನ ಮಗಳು ಜೆಎಸ್‌ಎಸ್‌ನಲ್ಲೇ ಓದಿದ್ದು. ಸುತ್ತೂರು ಗ್ರಾಮದ ಸೊಬಗು ಕಣ್ಣಿಗೆ ಕಟ್ಟುವಂತಿದೆ. ಅವಕಾಶ ಸಿಕ್ಕರೆ ಮುಂದಿನ ಸಿನಿಮಾದ ಶೂಟಿಂಗ್‌ ಇಲ್ಲೇ ಮಾಡಬೇಕು’ ಎಂದು ಹೇಳಿದರು.

ಅಭಿಮಾನಿಗಳು ಹಾಡು ಹೇಳುವಂತೆ ಒತ್ತಾಯಿಸಿದಾಗ, ‘ವಾರೆ ನೋಟ ನೋಡೈತೆ.. ’ ಹಾಡಿನ ಎರಡು ಮೂರು ಸಾಲುಗಳನ್ನು ಹಾಡಿದರು. ಆ ಬಳಿಕ ನೃತ್ಯಮಾಡಿ ನೆರೆದವರನ್ನು ರಂಜಿಸಿದರು.

ಶಿವರಾಜ್‌ ಕುಮಾರ್‌ ವೇದಿಕೆಯಿಂದ ಇಳಿದು ಹೋಗುವಾಗ ಅಭಿಮಾನಿಗಳು ಹಿಂಬಾಲಿಸಿದರು. ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಜನರತ್ತ ಕೈಬೀಸಿ ಕಾರನ್ನೇರಿ ಹೊರಟಾಗ ಕೆಲವು ಮಕ್ಕಳು ಕಾರಿನ ಹಿಂದೆಯೇ ಒಂದಷ್ಟು ದೂರ ಓಡಿದರು.

***

ಉತ್ಸವ ಮೂರ್ತಿಗೆ ಅಭಿಷೇಕ

ನಸುಕಿನ ನಾಲ್ಕು ಗಂಟೆಗೆ ಗದ್ದುಗೆಗೆ ಮಹಾರುದ್ರಭಿಷೇಕ ನೆರವೇರಿಸಲಾಯಿತು. ಏಳು ಗಂಟೆಗೆ ಉತ್ಸವಮೂರ್ತಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆಯಿತು. ಸಂಜೆ ಉತ್ಸವ ಮೂರ್ತಿಯನ್ನು ಮಠದಿಂದ ಗದ್ದುಗೆಗೆ ತರುವ ಮೂಲಕ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರಕಿತು.

ಜಾತ್ರೆಯ ಅಂಗವಾಗಿ ಮಲ್ಲುಪುರ ಗ್ರಾಮದಲ್ಲಿ ಸ್ನೇಹ–ಸೌಹಾರ್ದ–ಶಾಂತಿ ಪ್ರಾರ್ಥನಾ ಪಥಸಂಚಲನ ಏರ್ಪಡಿಸಲಾಗಿತ್ತು. ಅಂಕನಹಳ್ಳಿಯ ಬಸವಕಲ್ಯಾಣ ಮಠದ ವಿಜಯಕುಮಾರ ಸ್ವಾಮೀಜಿ ಅವರು ಷಟ್ಸಲ ಧ್ವಜಾರೋಹಣ ನೆರವೇರಿಸಿದರು.ಸ್ವಾಮೀಜಿಗಳ ರಾಜಕೀಯ ಪ್ರವೇಶ ದುರಂತ: ಶಾಸಕ ಮಂಜುನಾಥ್‌

‘ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರು ಕೆಟ್ಟುಹೋಗಿದ್ದಾರೆ. ಆದರೆ, ನಮ್ಮನ್ನು ಕರೆದು ಬುದ್ಧಿ ಹೇಳಬೇಕಿರುವ ಸ್ವಾಮೀಜಿಗಳು ಕೂಡಾ ರಾಜಕೀಯ ಪ್ರವೇಶಿಸುತ್ತಿರುವುದು ದುರಂತ’ ಎಂದು ಉದ್ಘಾಟನೆ ವೇಳೆ ಹುಣಸೂರು ಶಾಸಕ ಎಚ್‌.ಪಿ.ಮಂಜುನಾಥ್ ಹೇಳಿದರು.

ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಜನರಿಗಿದ್ದ ನಂಬಿಕೆ ಈ ಹಿಂದೆಯೇ ಹೊರಟುಹೋಗಿತ್ತು. ಇದೀಗ ನ್ಯಾಯಾಂಗದ ಘನತೆ ಕೂಡಾ ಬೀದಿಗೆ ಬಿದ್ದಿರುವುದು ಆತಂಕಕಾರಿ ಬೆಳವಣಿಗೆ ಎಂದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry