ಮುಸ್ಲಿಮರನ್ನು ಅನುಮಾನಿಸುತ್ತಿರುವ ಸಮಾಜ

7
ರಾಜ್ಯ ಮಟ್ಟದ ಸರ್ಕಾರಿ ಮುಸ್ಲಿಂ ನೌಕರರ ಸಮ್ಮೇಳನದಲ್ಲಿ ಸಚಿವ ಯು.ಟಿ. ಖಾದರ್ ವಿಷಾದ

ಮುಸ್ಲಿಮರನ್ನು ಅನುಮಾನಿಸುತ್ತಿರುವ ಸಮಾಜ

Published:
Updated:
ಮುಸ್ಲಿಮರನ್ನು ಅನುಮಾನಿಸುತ್ತಿರುವ ಸಮಾಜ

ಧಾರವಾಡ: ಮುಸ್ಲಿಂ ಸಮುದಾಯದ ಅಧಿಕಾರಿಗಳನ್ನು ಅನುಮಾನದಿಂದ ಕಾಣುವ ಪರಿಸ್ಥಿತಿ ಸಮಾಜದಲ್ಲಿದ್ದು, ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕ ಸೇವೆಯಲ್ಲಿ ಜನತೆಯನ್ನು ಮೆಚ್ಚಿಸುವುದು ಸುಲಭದ ಮಾತಲ್ಲ ಎಂದು ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದರು.

ಇಲ್ಲಿನ ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ವೆಲ್‌ಫೇರ್ ಅಸೋಸಿಯೇಶನ್ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸರ್ಕಾರಿ ಮುಸ್ಲಿಂ ನೌಕರರ ಸಮ್ಮೇಳನ, ಶೈಕ್ಷಣಿಕ ಹಾಗೂ ಅಲ್ಪಸಂಖ್ಯಾತರ ಯೋಜನೆಗಳ ಅರಿವು ಕಾರ್ಯಾಗಾರ, ಪ್ರತಿಭಾವಂತ ವಿದ್ಯಾರ್ಥಿಗಳ ಮತ್ತು ಐಎಎಸ್, ಕೆಎಎಸ್ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇತರೆ ಅಧಿಕಾರಿಗಳಿಗೆ ಹೋಲಿಸಿದರೆ ಮುಸ್ಲಿಂ ಸಮಾಜದ ಅಧಿಕಾರಿಗಳಿಗೆ ಹೆಚ್ಚು ಸವಾಲುಗಳಿವೆ. ಈ ಹಿನ್ನೆಲೆಯಲ್ಲಿ ಕೇವಲ ಒಂದೇ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡದೆ ಅಧಿಕಾರಿಗಳು ಪ್ರಾಮಾಣಿಕ ಹಾಗೂ ನ್ಯಾಯಯುತ ಆಡಳಿತ ನಡೆಸಿ, ಎಲ್ಲ ವರ್ಗದವರನ್ನು ಮೆಚ್ಚಿಸುವ ಕಾರ್ಯ ಮಾಡಬೇಕು ಎಂದರು.

ಜಾತಿ ಹಾಗೂ ಸಮುದಾಯ ಲೆಕ್ಕಿಸದೇ ಮಾನವೀಯ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಾಗ ಮಾತ್ರ ಅಧಿಕಾರಿಗಳು ಜನ ಮಾನಸದಲ್ಲಿ ನೆಲೆಯೂರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.

ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ಮುಸ್ಲಿಮರು ಎಂದಾಕ್ಷಣ ಮಾಂಸ ಕಡಿಯುವವರು ಎಂದು ತಪ್ಪು ತಿಳಿದುಕೊಳ್ಳವವರೆ ಇದ್ದಾರೆ. ಆ ತಪ್ಪು ತಿಳಿವಳಿಕೆಯನ್ನು ದೂರ ಮಾಡಲು ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಂಡು ಅರಿವು ಮೂಡಿಸಬೇಕು ಎಂದರು.

ವಿಶೇಷ ಮೀಸಲಾತಿಗಾಗಿ ಬ್ಯಾಕ್‌ಲಾಗ್ ವ್ಯವಸ್ಥೆ ಅನುಷ್ಠಾನಗೊಳಿಸಿದ್ದು, ಈವರೆಗೆ ರಾಜ್ಯ ಸರ್ಕಾರ ಸಾವಿರಾರು ಕೋಟಿ ಮೊತ್ತದ ಸೌಲಭ್ಯಗಳನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ತಮ್ಮ ಸುಮುದಾಯವನ್ನು ವೈರಿಗಳಂತೆ ಬಿಂಬಿಸುವ ಪಕ್ಷ ರಾಜ್ಯದಲ್ಲಿದ್ದು, ಸಮಾಜ ಬಾಂಧವರು ತಾಳ್ಮೆಯಿಂದ ಎಚ್ಚರವಹಿಸಬೇಕು. ಅಕ್ಷರಸ್ಥರಾಗುವ ವರೆಗೆ ಅನ್ಯಾಯ ನಡೆಯುತ್ತಲೆ ಇರುತ್ತವೆ. ಇಂದು ಸರ್ಕಾರದ ಪ್ರಯತ್ನದಿಂದ 6 ಮುಸ್ಲಿಂ ವಿದ್ಯಾರ್ಥಿಗಳು ಐಎಎಸ್ ಅಧಿಕಾರಿಗಳಾಗಿದ್ದಾರೆ. ಸಮಾಜದ ಮಕ್ಕಳು ದಾರಿ ತಪ್ಪಬಾರದು ಸುಶಿಕ್ಷಿತರಾಗಬೇಕು, ಮದರಸಾ ಬಂದ್‌ ಮಾಡುವುದರಿಂದ ಸಮಾಜಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗುತ್ತದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.

ಉರ್ದು ಭಾಷೆ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ. ಮಾತೃ ಭಾಷೆ ಅವನತಿಯನ್ನು ನಾವು ಸಹಿಸುವುದಿಲ್ಲ. ಸಾವಿರದಲ್ಲಿ ಒಬ್ಬರಿಗೆ ಅಧಿಕಾರ ಸಿಕ್ಕರೂ ಸಹ ಅದನ್ನು ಸಮಾಜಕ್ಕಾಗಿ ಬಳಸಬೇಕು. ಮುಸ್ಲಿಂ ಸಮುದಾಯದ ಶೇ 50 ರಷ್ಟು ಜನರು ಇಂದಿಗೂ ಸೌಲಭ್ಯ ವಂಚಿತರಾಗಿದ್ದು, ಸಮಾಜದ ಜನತೆ ಮುಂದುವರೆಯಬೇಕಾದರೆ ಪರಸ್ಪರ ಸಹಾಯ, ಸಹಕಾರ ಅಗತ್ಯ ಎಂದರು.

ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ಉರ್ದು ಮಾಧ್ಯಮ ಶಾಲೆಗಳನ್ನು ಮುಚ್ಚಿಸುತ್ತಿರುವುದು ವಿಷಾದನೀಯ. ಉರ್ದು ಭಾಷೆ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಉರ್ದು ಭಾಷೆಗೂ ಗೌರವ ನೀಡಿದರೆ ದೇಶದ ಸಾಹಿತ್ಯ ಹಾಗೂ ಇತಿಹಾಸಕ್ಕೆ ಗೌರವ ಸಲ್ಲಿಸದಂತಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಪಾಲಿಕೆ ಸದಸ್ಯ ದೀಪಕ ಚಿಂಚೊರೆ ಮಾತನಾಡಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಇಸ್ಮಾಯಿಲ್ ತಮಟಗಾರ, ಕೆ. ಅಬ್ದುಲ್ ರಹೀಂ, ಸರ್ಕಾರದ ಕಾರ್ಯದರ್ಶಿ ಮೊಹ್ಮದ ಮೊಹಸಿನ್, ಮಹ್ಮದ ಸಲೀಂ ಹಂಚಿನಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry