ಕಾನೂನು ಪರಿಪಾಲನೆ ನಮ್ಮೆಲ್ಲರ ಹೊಣೆ

7

ಕಾನೂನು ಪರಿಪಾಲನೆ ನಮ್ಮೆಲ್ಲರ ಹೊಣೆ

Published:
Updated:

ಲಿಂಗಸುಗೂರು: ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ವೈವಿಧ್ಯಮಯ ಕಾನೂನುಗಳನ್ನು ರಚಿಸಲಾಗಿದೆ. ಅಂತಹ ಎಲ್ಲ ಕಾನೂನುಗಳ ಅಧ್ಯಯನ ಮಾಡಿ ಪರಿಪಾಲನೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ’ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಲಕ್ಷ್ಮಿಕಾಂತ ಜೆ. ಮಿಸ್ಕಿನ್‌ ಸಲಹೆ ನೀಡಿದರು.

ಶುಕ್ರವಾರ ಒಳಬಳ್ಳಾರಿ ಚೆನ್ನಬಸವೇಶ್ವರ ಕಾಲೇಜಿನಲ್ಲಿ ವಕೀಲರ ಸಂಘ ಮತ್ತು ಕಾನೂನು ಅರಿವು ನೆರವು ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಯುವಕರು ಈ ದೇಶದ ಸಂಪತ್ತು. ಸುಭದ್ರ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಅಂತೆಯೆ ಶಿಕ್ಷಣ ಜೊತೆ ರಾಷ್ಟ್ರೀಯ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರೊಬೇಷನರಿ ಪಿಎಸ್‌ಐ ಡಂಬಳ ಪ್ರಕಾಶರೆಡ್ಡಿ ಮಾತನಾಡಿ, ‘ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಬಳಕೆ ಕಡ್ಡಾಯವಾಗಿದೆ. ಮನುಷ್ಯನ ಜೀವದ ಮಹತ್ವವನ್ನು ಅರಿತು ಅನುಷ್ಠಾನಕ್ಕೆ ತಂದಿರುವ ಕಾನೂನಗಳ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಐಎಸ್‌ಐ ಮಾರ್ಕ್‌ ಹೆಲ್ಮೆಟ್‌ ಬಳಕೆ ಮಹತ್ವ, ಸಂಚಾರ ನಿಯಮಗಳ ಪಾಲನೆ, ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಹಲವು ಸಾಂದರ್ಭಿಕ ಘಟನೆಗಳ ಸುದೀರ್ಘ ವಿವರಣೆ ನೀಡಿದರು.

ಹಿರಿಯ ವಕೀಲ ಮಹೇಶ ಹಿರೇಮಠ ಮಾತನಾಡಿ, ‘ಸಂವಿಧಾನದಡಿ ನೀಡಿರುವ ಮೂಲಭೂತ ಹಕ್ಕುಗಳ ಬಳಕೆ, ಕರ್ತವ್ಯಗಳ ಪಾಲನೆ ಹಾಗೂ ಮೋಟಾರು ವಾಹನ ಕಾಯ್ದೆ ಕುರಿತು ವಿವರಣೆ ನೀಡಿ, ಕಾನೂನುಗಳ ಜ್ಞಾನ ಹೆಚ್ಚಾದಂತೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾನೂನುಗಳ ದುರ್ಬಳಕೆ ಸಲ್ಲದು. ಅಂತೆಯೆ ವಿದ್ಯಾರ್ಥಿ ಸಮೂಹ ಕಾನೂನುಗಳ ತಿಳುವಳಿಕೆ ಪಡೆದುಕೊಳ್ಳಬೇಕು’ ಎಂದು ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ರುದ್ರಪ್ಪ ಎಲಿಗಾರ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್‌ ನ್ಯಾಯಾಧೀಶ ದೇವರಾಜ ಭೂತೆ, ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ಪಾಟೀಲ, ಪ್ರಾಚಾರ್ಯ ಪಿ. ಜಗದೀಶ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry