ನ್ಯಾಯಮೂರ್ತಿ ಜೆ.ಚಲಮೇಶ್ವರ್‌ ನಿವಾಸಕ್ಕೆ ಬಿಸಿಐನ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ, ಸದಸ್ಯರ ಭೇಟಿ

7

ನ್ಯಾಯಮೂರ್ತಿ ಜೆ.ಚಲಮೇಶ್ವರ್‌ ನಿವಾಸಕ್ಕೆ ಬಿಸಿಐನ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ, ಸದಸ್ಯರ ಭೇಟಿ

Published:
Updated:
ನ್ಯಾಯಮೂರ್ತಿ ಜೆ.ಚಲಮೇಶ್ವರ್‌ ನಿವಾಸಕ್ಕೆ ಬಿಸಿಐನ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ, ಸದಸ್ಯರ ಭೇಟಿ

ನವದೆಹಲಿ: ಪ್ರಕರಣಗಳ ಹಂಚಿಕೆ ಸೇರಿದಂತೆ ಕೆಲವು ಆಡಳಿತಾತ್ಮಕ ವಿಚಾರಗಳ ಸಂಬಂಧ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದರಿಂದ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಮುಂದಾಗಿರುವ ವಕೀಲರ ಪ್ರಮುಖ ಸಂಘಟನೆ ಸದಸ್ಯರು ಹಾಗೂ ಅಧ್ಯಕ್ಷರು ಭಾನುವಾರ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನಿವಾಸಕ್ಕೆ ಬೇಡಿ ನೀಡಿದ್ದಾರೆ.

ಬಿಕ್ಕಟ್ಟು ಶಮನಕ್ಕೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ಸುಪ್ರೀಂ ಕೋರ್ಟ್‌ನ ವಕೀಲರ ಒಕ್ಕೂಟ (ಎಸ್‌ಸಿಬಿಎ) ಶನಿವಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದವು.

ಇಂದು ಬೆಳಿಗ್ಗೆ ಬಿಸಿಐನ ಸದಸ್ಯರು ಸೇರಿದಂತೆ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರು ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಅಲ್ಲಿಂದ ತೆರಳುವ ಮುನ್ನ ಮಾತನಾಡಿದ ಬಿಸಿಐನ ಸದಸ್ಯರು ಹಾಗೂ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರಿದ್ದ ತಂಡ, ‘ಮುಖ್ಯ ನ್ಯಾಯಮೂರ್ತಿ ಮತ್ತು ಇತರ ಮೂರು ನ್ಯಾಯಾಧೀಶರನ್ನು ಸಂಜೆ ಭೇಟಿ ಮಾಡಿ ಮಾತನಾಡಿದ ಬಳಿಕ ಪ್ರತಿಕ್ರಿಯೆ ನೀಡಲಾಗುವುದು’ ಎಂದು ಹೇಳಿದೆ. 

ನಾಲ್ವರು ನ್ಯಾಯಮೂರ್ತಿಗಳು ಎತ್ತಿರುವ ವಿಚಾರಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಇದನ್ನು ಪೂರ್ಣ ಪೀಠದ ಮುಂದೆ ಬಗೆಹರಿಸಿಕೊಳ್ಳಬೇಕು ಎಂದು ಶನಿವಾರ ಪ್ರತಿಪಾದಿಸಿದ್ದ ಸುಪ್ರೀಂ ಕೋರ್ಟ್‌ನ ವಕೀಲರ ಒಕ್ಕೂಟ, ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಲೂ ಅದು ತೀರ್ಮಾನಿಸಿತ್ತು. 

ಶನಿವಾರ ಸಭೆ ಸೇರಿದ್ದ ಭಾರತೀಯ ವಕೀಲರ ಪರಿಷತ್ತು, ಬಿಕ್ಕಟ್ಟನ್ನು ಸುಪ್ರೀಂ ಕೋರ್ಟ್‌ ಮಟ್ಟದಲ್ಲಿಯೇ ಬಗೆಹರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಬಿಕ್ಕಟ್ಟನ್ನು ಪರಿಹರಿಸುವ ಯತ್ನವಾಗಿ ಅದು ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಸಮಿತಿ ಸದಸ್ಯರು ಇಂದು ಸಿಜೆಐ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು (ಅತೃಪ್ತಿ ಹೊರಹಾಕಿದವರು) ಬಿಟ್ಟು ಉಳಿದ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.

ಇವನ್ನೂ ಓದಿ...
* ವಕೀಲರಿಂದ ಶಮನ ಯತ್ನ; ನ್ಯಾಯಮೂರ್ತಿಗಳ ಭೇಟಿಗೆ ವಕೀಲ ಸಂಘಟನೆಗಳ ನಿರ್ಧಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry