ಇಂದಿನಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

7

ಇಂದಿನಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

Published:
Updated:
ಇಂದಿನಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

ತುಮರಿ: ಇಂದಿನಿಂದ ಆರಂಭವಾಗುವ ಎರಡು ದಿನಗಳ ಮಕರ ಸಂಕ್ರಮಣ ಜಾತ್ರೆ ಹಿನ್ನೆಲೆಯಲ್ಲಿ ಸಮೀಪದ ಸಿಗಂದೂರು ಚೌಡೇಶ್ವರಿ ದೇವಾಲಯವು ಸುಣ್ಣಬಣ್ಣಗಳಿಂದ ಕಂಗೊಳಿಸುತ್ತಿದೆ. ಇದೇ ಮೊದಲ ಬಾರಿಗೆ ಬೆಳ್ಳಿರಥದಲ್ಲಿ ದೇವಿಯ ಮೂಲಜಾಗದಿಂದ ಧರ್ಮಜ್ಯೋತಿ ತರುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿರುವುದು ಈ ಬಾರಿ ಜಾತ್ರೆಯ ವಿಶೇಷವೆನಿಸಿದೆ.

ಶನಿವಾರ ದೇವಾಲಯದ ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕ ಶೇಷಗಿರಿ ಭಟ್ ಜಂಟಿಯಾಗಿ ಜಾತ್ರೆಯ ಪೂರ್ವಸಿದ್ಧತೆಯನ್ನು ಪರೀಶಿಲಿಸಿದರು. ಎರಡು ದಿನಗಳ ಕಾಲ ಸಾವಿರಾರು ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ವಿಶೇಷ ಹೋಳಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಬಗ್ಗೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಬೆಳಗಿನ ಜಾವದಲ್ಲಿ ಸಂಕ್ರಮಣ ಜಾತ್ರೆಯ ಮೊದಲ ಪೂಜೆಯನ್ನು ದೇವಾಲಯದ ಧರ್ಮದರ್ಶಿ ರಾಮಪ್ಪ ಅವರ ಸಮ್ಮುಖದಲ್ಲಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ನೆರವೇರಿಸುವರು. ಬೆಳಿಗ್ಗೆ 6ಕ್ಕೆ ದೇವಾಲಯದ ಮುಂಭಾಗದಲ್ಲಿ ಧರ್ಮ ಧ್ವಜಾರೋಹಣ ನೇರವೇರಲಿದೆ. ಇದೇ ಮೊದಲ ಬಾರಿಗೆ ದೇವಿಯ ಮೂಲ ಸ್ಥಳವಾದ ಸೀಗೆಕಣಿವೆಯಿಂದ ಬೆಳ್ಳಿಯ ರಥದಲ್ಲಿ ಧರ್ಮಜ್ಯೋತಿಯನ್ನು ಈಗಿನ ದೇವಾಲಯದ ಆವರಣಕ್ಕೆ ತರಲಾಗುವುದು. ಈ ಮೆರವಣಿಗೆಯಲ್ಲಿ 108 ಪೂರ್ಣಕುಂಭ ಕಳಶ, ಕೇರಳ ಮಾದರಿಯ ಚಂಡೆವಾದ್ಯ, ಹತ್ತಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗಿಯಾಗಲಿವೆ.

ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ಎಂದು ಕರೆಯಲ್ಪಡುವ ಚೌಡೇಶ್ವರಿ ದೇವಿಯ ಈಗಿನ ದೇವಾಲಯದ ನಿರ್ಮಾಣದ ಹಿಂದೆ ಐತಿಹ್ಯಗಳಿದ್ದು ಈಗಿನ ಧರ್ಮದರ್ಶಿಗಳು ಮತ್ತು ಪ್ರಧಾನ ಅರ್ಚಕರ ಪೂರ್ವಜರ ಜತೆ ಇದು ಸಂಬಂಧ ಹೊಂದಿದೆ.

ಮೂಲತಃ ವನದೇವಿಯಾದ ಸಿಗಂದೂರೇಶ್ವರಿಯ ಈ ಹಿಂದಿನ ಸಣ್ಣ ದೇವಾಲಯವು ಹಿರೆಭಾಸ್ಕರ ಆಣೆಕಟ್ಟಿನ ಸಂದರ್ಭದಲ್ಲಿ ಮುಳುಗಡೆಯಾಗಿತ್ತು. ದೇವಿಯ ಬನವು ಮುಳಗಡೆಯಾದ ಪರಿಣಾಮ ಭಕ್ತರು ಹರಕೆ ತೀರಿಸಲು ಬೇಸಿಗೆಯಲ್ಲಿ ಅಣೆಕಟ್ಟೆಯ ನೀರು ಕಡಿಮೆ ಆಗುವ ತನಕ ಕಾಯುವ ಅನಿವಾರ್ಯ ಉಂಟಾಗಿತ್ತು. ಈ ಸಂದರ್ಭದಲ್ಲಿ ಬೇಟೆಗೆ ತೆರೆಳಿದ ಶೇಷಪ್ಪ ನಾಯಕನಿಗೆ ದೇವಿ ಪ್ರತ್ಯಕ್ಷವಾಗಿ ನೂತನ ದೇವಸ್ಥಾನ ಕಟ್ಟುವ ಬಗ್ಗೆ ನುಡಿದಳು ಎನ್ನಲಾಗಿದೆ.

ಮಕರ ಸಂಕ್ರಮಣ ಜಾತ್ರೆಯಲ್ಲಿ ಹರಕೆ ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರಲಿವೆ ಎಂಬ ನಂಬಿಕೆ ಭಕ್ತರಲ್ಲಿದ್ದು ಸಂಕ್ರಮಣ ಜಾತ್ರೆಗೆ ಮೆರುಗು ತಂದಿದೆ.

ಜಿ.ಟಿ. ಸತ್ಯನಾರಾಯಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry