ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆಗೆ ಬಿರುಕು ಬಿಡುತ್ತಿವೆ ಮನೆಗಳು

Last Updated 14 ಜನವರಿ 2018, 7:16 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಕೋರಾ ಹೋಬಳಿಯ ಬೆಳಧರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸೀಪುರ ಗ್ರಾಮದಲ್ಲಿ ಕಟ್ಟಡದ ಕಲ್ಲಿಗೆ ಅನುಮತಿ ಪಡೆದ ಗುತ್ತಿಗೆದಾರರು ಬೋಡ್ರಸ್‌ ಬ್ಲಾಸ್ಟಿಂಗ್‌ ಮಾಡುತ್ತಿರುವುದರಿಂದ, ಅದರಿಂದ ಉಂಟಾಗುತ್ತಿರುವ ಶಬ್ದ ಮತ್ತು ದೂಳಿಗೆ ಜನರು ತತ್ತರಿಸಿದ್ದಾರೆ.

‘ನಿದ್ರೆ ಹಾಗೂ ನೆಮ್ಮದಿ ಇಲ್ಲದ ದಿನಗಳು, ಬಿರುಕು ಬಿಟ್ಟ ಮನೆಗಳು, ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅಂತರ್ಜಲ ಮಟ್ಟ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಬೇಕಾದವರೇ ಕೈ ಚೆಲ್ಲಿ ಕುಳಿತಿರುವುದರಿಂದ ತಾಲೂಕಿನ ನರಸೀಪುರ ಮತ್ತು ಅಕ್ಕಪಕ್ಕದ ಗ್ರಾಮದಲ್ಲಿ ಜೀವನ ನಡೆಸುವುದು ನರಕಸದೃಶವಾಗಿದೆ’ ಎನ್ನುವುದು ಗ್ರಾಮಸ್ಥರ ಆರೋಪ.

ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಪ್ರತಿದಿನ 25ರಿಂದ 30 ಕಲ್ಲು ತುಂಬಿದ ಲಾರಿಗಳು ಓಡಾಡುತ್ತಿವೆ. ಹೀಗಾಗಿ ರಸ್ತೆಗಳು ಗುಂಡಿ ಬೀಳುತ್ತಿದ್ದು, ರಸ್ತೆ ಅಕ್ಕಪಕ್ಕದಲ್ಲಿ ದೂಳು ತುಂಬಿಕೊಳ್ಳುತ್ತಿದೆ. ಹೀಗಾಗಿ ಶಾಲೆಗೆ ಹೋಗಿ ಬರುವ ಮಕ್ಕಳು ಮತ್ತು ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಕೂಡ ಉಂಟಾಗುತ್ತಿದೆ ಎನ್ನುವುದು ಗ್ರಾಮಸ್ಥರ ಅಳಲು.

‘ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ ಎನ್ನುವ ಕಾರಣಕ್ಕೆ ನಾವು ಕ್ರಷರ್‌ಗೆ ಅನುಮತಿ ನೀಡುತ್ತಿಲ್ಲ. ಆದರೆ ಕ್ರಷರ್‌ನವರು 9 ಜನ ಸದಸ್ಯರಿಗೆ ಹಣ ನೀಡಿ ಕ್ರಷರ್‌ ಪರವಾಗಿ ಸಹಿ ಹಾಕಿಸಿಕೊಂಡಿದ್ದಾರೆ. ನಮಗೂ ಅದೇ ಸದಸ್ಯರು ಹಣ ನೀಡುತ್ತೇವೆ ಸಹಿ ಹಾಕಿ ಎಂದು ಕೇಳಿಕೊಂಡರು. ಆದರೆ ನಾವು ಒಪ್ಪಲಿಲ್ಲ’ ಎನ್ನುತ್ತಾರೆ ಬೆಳಧರ ಗ್ರಾಮ ಪಂಚಾಯಿತಿ ಸದಸ್ಯೆ ಸೌಮ್ಯ ಪ್ರಸನ್ನಕುಮಾರ್‌.

‘ಈಗ ಇಲ್ಲಿ ಕ್ರಷರ್‌ ಮಾಡಲು ಅನುಮತಿ ನೀಡಿದರೆ ನಮ್ಮ ಪಂಚಾಯಿತಿ ವ್ಯಾಪ್ತಿಯ 9 ಬೆಟ್ಟಗಳಲ್ಲಿಯೂ ಕ್ರಷರ್‌ಗೆ ಅನುಮತಿ ನೀಡುವಂತೆ ಬೇರೆಯವರು ಕೇಳುತ್ತಾರೆ. ಎಲ್ಲ ಕಡೆಯೂ ಕ್ರಷರ್‌ಗೆ ಅನುಮತಿ ನೀಡುತ್ತಾ ಹೋದರೆ ಜನರು ವಾಸಿಸುವುದಾದರೂ ಎಲ್ಲಿ?. ನಮ್ಮ ಪಂಚಾಯಿತಿ ವ್ಯಾಪ್ತಿಯ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಉದ್ದೇಶದಿಂದ ನಾವು ಅನುಮತಿ ನೀಡುತ್ತಿಲ್ಲ. ಆದರೆ ಹಣ ಪಡೆದ ಸದಸ್ಯರು ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ.

ಕಲ್ಲು ಸ್ಪೋಟ ಮಾಡುತ್ತಿರುವುದರಿಂದ ಗ್ರಾಮದ ಅಕ್ಕಪಕ್ಕದ ಮನೆಗಳು ಬಿರುಕು ಬಿಡುತ್ತಿವೆ. ಸ್ಥಳೀಯರ ಆರೋಗ್ಯದ ಮೇಲೆಯೂ ಸಮಸ್ಯೆ ಉಂಟಾಗುತ್ತಿದೆ. ಈ ಪ್ರದೇಶದಲ್ಲಿ ರೈತರು ಹೆಚ್ಚು ಹೂ ಬೆಳೆಯುತ್ತಾರೆ. ಆದರೆ ಕ್ರಷರ್‌ ದೂಳು ಕುಳಿತುಕೊಳ್ಳುತ್ತಿರುವುದರಿಂದ ಹೂವಿನ ಬೆಳೆಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥ ಗೋವಿಂದರಾಜು. ಕ್ರಷರ್‌ನಿಂದ ಉಂಟಾಗುತ್ತಿರುವ ದೂಳು ಮತ್ತು ಶಬ್ದದಿಂದಾಗಿ ಮಕ್ಕಳು, ಗರ್ಭಿಣಿ ಸ್ತ್ರೀ ಮತ್ತು ವಯೋವೃದ್ಧರಿಗೆ ಆರೋಗ್ಯದ ತೊಂದರೆ ಉಂಟಾಗುತ್ತಿದೆ ಎನ್ನುತ್ತಾರೆ.

‘ಕ್ರಷರ್‌ಗೆ ಅನುಮತಿ ನೀಡುವ ಬಗ್ಗೆ ಎನ್‌ಒಸಿ ನೀಡುವ ಕುರಿತು ವರದಿ ಮಾಡುವಂತೆ ಜಿಲ್ಲಾಧಿಕಾರಿಯಿಂದ ನೋಟಿಸ್‌ ಬಂದಿತ್ತು. ಈ ಬಗ್ಗೆ ಗ್ರಾಮ ಪಂಚಾಯಿತಿ ಸಭೆ ಕರೆಯಲಾಗಿತ್ತು. ಆದರೆ ಪಿಡಿಒ ಸೇರಿದಂತೆ 9 ಜನ ಸದಸ್ಯರು ಸಭೆಗೆ ಹಾಜರಾಗಿರಲಿಲ್ಲ. ಕ್ರಷರ್‌ಗೆ ಅನುಮತಿ ನೀಡಿರುವ ಬಗ್ಗೆ ಸುಮಾರು 500 ಜನ ಗ್ರಾಮಸ್ಥರು ಪಂಚಾಯಿತಿ ಎದುರು ಬಂದು ಸದಸ್ಯರು ತರಾಟೆಗೆ ತೆಗೆದುಕೊಂಡಾಗ ಹಣ ಪಡದಿದ್ದ ಸದಸ್ಯರು ಕಾಲ್ಕಿತ್ತಿದ್ದಾರೆ’ ಎಂದು ಬೆಳಧರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎ.ಮೋಹನ್‌ ಆರೋಪಿಸಿದರು. ‘ಯಾವುದೇ ಕಾರಣಕ್ಕೂ ನಮ್ಮ ಅವಧಿಯಲ್ಲಿ ಹೊಸ ಕ್ರಷರ್‌ಗಳಿಗೆ ಅನುಮತಿ ನೀಡಬಾರದು’ ಎನ್ನುವುದು ಅವರ ಅಭಿಪ್ರಾಯ.

ಕೈ ಕಟ್ಟಿ ಕುಳಿತ ಆಡಳಿತ

‘ಕಲ್ಲು ಗಣಿಗಾರಿಕೆಯನ್ನು ಕಂಡು ಕಾಣದಂತಿರುವ ಆಡಳಿತವೂ ಜಾಣ ಕಿವುಡತನ ಪ್ರದರ್ಶಿಸುತ್ತಿದೆ. ಜನರ ಪ್ರಾಣಕ್ಕೆ ಎರವಾದ ಈ ಗಣಿಗಾರಿಕೆಯನ್ನು ಬಂದ್‌ ಮಾಡುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿ ಪರಿಪರಿಯಾಗಿ ಬೇಡಿಕೊಂಡರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ಗಣಿಗಾರಿಕೆಯನ್ನು ಬಂದ್‌ ಮಾಡಿಸುತ್ತಿಲ್ಲ’ ಎನ್ನುವುದು ಮೋಹನ್‌ ಆರೋಪ.

* *

ಸಹಿ ಹಾಕಿಲ್ಲ ಎನ್ನುವ ಕಾರಣಕ್ಕೆ ಕೆಲವು ಸದಸ್ಯರು ನನಗೆ ಮತ್ತು ಅಧ್ಯಕ್ಷರಿಗೆ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ನೋವುಂಟಾಗಿದೆ
ಸೌಮ್ಯ ಪ್ರಸನ್ನಕುಮಾರ್‌, ಗ್ರಾಮ ಪಂಚಾಯಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT