ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಗೆ ಎಲ್ಲೆಡೆ ಸಡಗರದ ಸಿದ್ಧತೆ

Last Updated 14 ಜನವರಿ 2018, 7:18 IST
ಅಕ್ಷರ ಗಾತ್ರ

ತುಮಕೂರು: ಹೊಸ ವರ್ಷದ ಮೊದಲ ಹಬ್ಬವಾದ ‘ಸಂಕ್ರಾಂತಿ’ ಹಬ್ಬದ ಸಂಭ್ರಮ ಜಿಲ್ಲೆಯಲ್ಲಿ ಎರಡು ದಿನ ಮುಂಚಿತವಾಗಿಯೇ ಶುರುವಾಗಿದೆ. ಸಂಕ್ರಾಂತಿಯ ದಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಕ್ತರಿಗೆ ವಿಶೇಷ ವ್ಯವಸ್ಥೆ, ಉತ್ಸವ ಕಾರ್ಯಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ನಗರದ ಸಿದ್ಧಗಂಗಾಮಠ, ಸಿದ್ಧಗಂಗೆ, ಶಿವಗಂಗೆ, ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ, ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಸೇರಿದಂತೆ ಅನೇಕ ಪ್ರಸಿದ್ಧ ದೇವಸ್ಥಾನಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಪ್ರವಾಸಿಗರ ಮತ್ತು ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾದ ದೇವರಾಯನದುರ್ಗ, ಮಧುಗಿರಿ ಬೆಟ್ಟ ಹೀಗೆ ವಿವಿಧ ಕಡೆ ಸಂಕ್ರಾಂತಿ ದಿನ ತೆರಳಲು ಜನರೂ ಸಿದ್ಧತೆ ನಡೆಸಿದ್ದಾರೆ. ’ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ’ ಎಂದು ಹಬ್ಬದ ಮಹತ್ವ ಸಾರುವ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣದತ್ತ ಹೊರಳುವ ದಿನವೇ ಸಂಕ್ರಾಂತಿ. ಸೂರ್ಯ ತನ್ನ ಪಥ ಬದಲಿಸುವ ದಿನವೇ ಸಂಕ್ರಾಂತಿ ದಿನ. ಈ ದಿನ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವುದು, ಬಂಧು ಬಾಂಧವರು, ಸ್ನೇಹಿತರಿಗೆ ಎಳ್ಳು ಬೆಲ್ಲ ಹಂಚಿ ಸಂಭ್ರಮಿಸುವುದು ವಿಶೇಷ. ಈ ಸಂಭ್ರಮಕ್ಕಾಗಿ ಜನರು ತುದಿಗಾಲ ಮೇಲೆ ನಿಂತಿದ್ದಾರೆ ಎಂಬುದು ಶನಿವಾರ ಮಾರುಕಟ್ಟೆಯಲ್ಲಿ ಕಂಡಿತು.

ಸಂಕ್ರಾಂತಿ ಸುಗ್ಗಿ ಹಬ್ಬವೂ ಆಗಿದೆ. ಹೀಗಾಗಿ ಇದರ ಪ್ರತೀಕವಾಗಿ ಹಸಿ ಶೇಂಗಾ, ಗೆಣಸು, ಅವರೆಕಾಯಿ ಕಬ್ಬಿನ ಜಲ್ಲೆ ಖರೀದಿಸಿ ಸವಿಯುವುದು ವಿಶೇಷ. ಹೀಗಾಗಿ, ಮಾರುಕಟ್ಟೆಯಲ್ಲಿ ಇವುಗಳ ಖರೀದಿ ಕಂಡು ಬಂದಿತು. ಗೆಣಸು ಕೆ.ಜಿಗೆ ₹ 30, ಕಬ್ಬು ಜೋಡಿಗೆ ₹ 80, ಅವರೆಕಾಯಿ ₹ 120ಕ್ಕೆ ಎರಡುವರೆ ಕೆ.ಜಿ(ತೂಕ), ಶೇಂಗಾ ಕೆ.ಜಿಗೆ ₹ 70ಕ್ಕೆ ಮಾರಾಟ ಮಾಡಲಾಗುತ್ತಿದೆ.

'ಈ ಬಾರಿ ಶೇಂಗಾ ಬೆಳೆ ಕಡಿಮೆ ಇದೆ. ಮಾರುಕಟ್ಟೆಗೆ ಆವಕ ಕಡಿಮೆ ಇದ್ದು, ದೂರದ ಕಡೆಯಿಂದ ಮಾರಾಟ ಮಾಡಬೇಕಾಗಿದೆ. ನೀರಾವರಿ ಪ್ರದೇಶದಲ್ಲಿ ಪುಣ್ಯಾತ್ಮ ರೈತರು ಬೆಳೆದಿದ್ದಾರೆ. ಎರಡು ದಿನಕ್ಕೂ ಮೊದಲು ₹ 60ಕ್ಕೆ 1 ಕೆ.ಜಿ ಶೇಂಗಾ ಮಾರಾಟ ಮಾಡುತ್ತಿದ್ದೆವು. ಈಗ ಹಬ್ಬದ ಪ್ರಯುಕ್ತ ₹ 10ಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾಗಿದೆ' ಎಂದು ವ್ಯಾಪಾರಸ್ಥರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT