ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಮೌಲ್ಯ ಕುಸಿತ: ನ್ಯಾ. ಡಿಕುನ್ಹ ವಿಷಾದ

7 ಸಾಧಕರಿಗೆ ಸಂದೇಶ ಪ್ರಶಸ್ತಿ ಪ್ರದಾನ
Last Updated 14 ಜನವರಿ 2018, 7:48 IST
ಅಕ್ಷರ ಗಾತ್ರ

ಮಂಗಳೂರು: ‘ಜಾತಿ, ಮತ ಹಾಗೂ ಧರ್ಮಗಳ ಸಂಕೋಲೆಯಲ್ಲಿ ನಾವಿಂದು ಸಂಕುಚಿತ ಮನೋಭಾವ ಬೆಳೆಸಿಕೊಳ್ಳುತ್ತಿದ್ದು, ಮಾನವೀಯ ಮೌಲ್ಯಗಳು ಕುಸಿಯುತ್ತಿವೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹ ವಿಷಾದ ವ್ಯಕ್ತಪಡಿಸಿದರು.

ಮಂಗಳೂರಿನ ಸಂದೇಶ ಸಂಸ್ಕೃತಿ, ಶಿಕ್ಷಣ ಪ್ರತಿಷ್ಠಾನದಿಂದ ನೀಡುವ 27ನೇ ವರ್ಷದ ಸಂದೇಶ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ವಿಶ್ವದಲ್ಲಿರುವ ಸಮುದಾಯಗಳು ಒಂದೊಂದು ಜಾತಿ, ಧರ್ಮದ ಹೆಸರಿನಲ್ಲಿ ಗುರುತಿಸಿಕೊಂಡಿದ್ದು, ಇದರಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಸಮಾಜದದಲ್ಲಿ ಪರಸ್ಪರ ಗೌರವ ಮನೋಭಾವ ನಶಿಸುತ್ತಿವೆ. ನಾವು ಒಡೆದಿರುವ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡಬೇಕಿದೆ.

‘ಮಾನವೀಯ ಮೌಲ್ಯಗಳು ಪಠ್ಯದಿಂದ ಬರುವುದಿಲ್ಲ. ಬದಲಾಗಿ ನಮ್ಮ ನಿಮ್ಮ ಮುಂದೆ ಇರುವ ಆದರ್ಶ ವ್ಯಕ್ತಿಗಳಿಂದ ಬರುತ್ತವೆ’ ಎಂದರು.

‘ನಾವು ಜೀವನದಲ್ಲಿ ಏನು ಸಾಧನೆ ಮಾಡಿದ್ದೇವೆ ಎಂಬುದು ಮುಖ್ಯ. ಇಲ್ಲಿರುವ ಪ್ರತಿಯೊಬ್ಬರೂ ವಿವಿಧ ಕ್ಷೇತ್ರಗಳಲ್ಲಿ ಸೇವಾ ಮನೋಭಾವದಿಂದ ಅಸಾಧಾರಣ ಸಾಧನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಅಸಾಧಾರಣ ಪ್ರತಿಭೆ, ವಿಶಾಲ ಹೃದಯ ಹಾಗೂ ಸಾಧನೆಯಿಂದ ಗುರುತಿಸಿಕೊಂಡಿದ್ದಾರೆ. ಇವರು ನಿಮಗೆ ಮಾದರಿಯಾಗಬೇಕು. ಬೇರೆಯವರಿಗೆ ನೀವು ಆದರ್ಶವಾಗುವ ರೀತಿಯಲ್ಲಿ ಸಾಧನೆ ಮಾಡಬೇಕು. ಮನುಷ್ಯ ಮಾನವೀಯ ಮೌಲ್ಯಗಳಿಂದ ಮನುಷ್ಯ ದೊಡ್ಡವನಾಗುತ್ತಾನೆ’ ಎಂದರು.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ.ಡಿ.ಸೋಜ ಮಾತನಾಡಿ ‘ನಮ್ಮ ನಾಡಿನ ಎಲ್ಲ ಪ್ರತಿಭಾವಂತರನ್ನು ಜಾಲಾಡಿಸಿ ಅವರಲ್ಲಿ 7 ಮಂದಿಯನ್ನು ಗುರುತಿಸಿದ್ದೇವೆ. ಇದರಲ್ಲಿ ಯಾವುದೇ ಲಾಬಿ ಇಲ್ಲ ಎಂದರು.

ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಮಾತನಾಡಿ, ‘ಸಂದೇಶ ಸಂಸ್ಕೃತಿ ಪ್ರತಿಷ್ಠಾನದ ಅಚ್ಚುಕಟ್ಟುತನ ಎಲ್ಲರಿಗೂ ಮಾದರಿ. ಇದು ಕ್ರಿಶ್ಚಿಯನ್ ಸಮಾಜ ಎಂಬ ಭಾವನೆ ಬರುವುದಿಲ್ಲ. ನಮ್ಮ ಸಮಾಜ ಎಂಬ ಭಾವನೆ ಬರುತ್ತದೆ. ಬೇರೆ ಧರ್ಮಗಳ ನಡುವೆ ಸಂಘರ್ಷ ಇದೆ. ಆದರೆ ಕ್ರಿಶ್ಚಿಯನ್ ಹಿಂದೂ ಧರ್ಮಗಳ ನಡುವೆ ಯಾವುದೇ ಸಂಘರ್ಷ ಇಲ್ಲ’ ಎಂದರು.

ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಫಾದರ್ ಹೆನ್ರಿ ಡಿಸೋಜ, ಶಾಸಕ ಜೆ.ಆರ್‌.ಲೊಬೊ, ವಿಕಾರ್‌ ಜನರಲ್‌ ಮೊ.ಡೆನ್ನಿಸ್ ಮೊರಾಸ್ ಪ್ರಭು, ವಿಶ್ವಸ್ಥರಾದ ರಾಯ್ ಕ್ಯಾಸ್ಟಲಿನೊ, ನಿರ್ದೇಶಕ ವಿಕ್ಟರ್‌ ವಿಜಯ್‌ ಲೊಬೊ, ವಿಕ್ಟರ್ ಕ್ರಾಸ್ತಾ ಇದ್ದರು.
***
ಪ್ರಶಸ್ತಿ ಪುರಸ್ಕೃತರು
ಸಂದೇಶ ಸಾಹಿತ್ಯ ಪ್ರಶಸ್ತಿಯನ್ನು ವಿಮರ್ಶಕ ಗಿರಡ್ಡಿ ಗೋವಿಂದರಾಜ, ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಎ.ಡಿ.ನಟ್ಟೋ, ಸಂದೇಶ ಕಲಾ ಪ್ರಶಸ್ತಿ ಯನ್ಬು ಅಶೋಕ್ ಗುಡಿಗಾರ್, ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಎನ್.ಗುರುರಾಜ್, ಸಂದೇಶ ಶಿಕ್ಷಣ ಪ್ರಶಸ್ತಿಯನ್ನು ಕೆ.ಗಾದಿಲಿಂಗಪ್ಪ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಯನ್ನು ವಿಲ್ಸನ್ ಒಲಿವರಾ ಹಾಗೂ ಸಂದೇಶ ವಿಶೇಷ ಪ್ರಶಸ್ತಿಯನ್ನು ಟಿ.ರಾಜಾ (ಆಟೊ ರಾಜ) ಪ್ರಧಾನ ಮಾಡಲಾಯಿತು.

ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ'ಕುನ್ಹಾ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 25 ಸಾವಿರ ನಗದು, ಟ್ರೋಫಿಯನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT