ಮೈಲಾಪುರ: 500 ಕುರಿಮರಿ ವಶ

7

ಮೈಲಾಪುರ: 500 ಕುರಿಮರಿ ವಶ

Published:
Updated:

ಯಾದಗಿರಿ: ಜಾತ್ರಾ ಅಂಗವಾಗಿ ಮೈಲಾರ ಲಿಂಗ ಪಲ್ಲಕ್ಕಿ ಮೇಲೆ ಹಾರಿಸಲು ಭಕ್ತರು ತಂದಿದ್ದ ಒಟ್ಟು 500 ಕುರಿಮರಿಗಳನ್ನು ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ತಿಳಿಸಿದ್ದಾರೆ.

ಒಟ್ಟು ಆರು ಕಡೆಗಳಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ನಿಗಾ ವಹಿಸಿದ್ದು, ಕುರಿಮರಿಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ರಾತ್ರಿ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಕುರಿಮರಿ ತೆಗೆದುಕೊಂಡು ಹೋಗುವ ಭಕ್ತರ ಮೇಲೆ ನಿಗಾ ವಹಿಸಲಿದ್ದಾರೆ. ಪೊಲೀಸರೊಂದಿಗೆ ಕಂದಾಯ ಇಲಾಖೆ, ಪಶುಪಾಲನಾ ಇಲಾಖೆ, ಮುಜರಾಯಿ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಭೇಟಿ: ಜಾತ್ರೆ ಅಂಗವಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ ಶನಿವಾರ ಸಂಜೆ ಮೈಲಾಪುರಕ್ಕೆ ಭೇಟಿ ನೀಡಿ ಜಾತ್ರಾ ಸಿದ್ಧತೆ ನಡೆಸಿದರು. ಮಲ್ಲಯ್ಯನ ದರ್ಶನಕ್ಕೆ ನಿಂತ ಭಕ್ತರೊಂದಿಗೆ ಜಾತ್ರಾ ಕುಂದುಕೊರತೆ ಕುರಿತಂತೆ ನೇರವಾಗಿ ಜಿಲ್ಲಾಧಿಕಾರಿ ವಿಚಾರಿಸಿದರು. ಕಳೆದ ಬಾರಿಗೆ ಹೋಲಿಸಿದರೆ ಜಿಲ್ಲಾಡಳಿತ ಭಕ್ತರಿಗೆ ಸೌಕರ್ಯ ಕಲ್ಪಿಸಿದೆ. ಆದರೆ, ದರ್ಶನಕ್ಕಾಗಿ ಮಹಿಳೆಯರಿಗೆ ಪ್ರತ್ಯೇಕ ಸಾಲು ನಿರ್ಮಿಸಲು ಅವಕಾಶ ಕಲ್ಪಿಸಿಕೊಡಬೇಕಿತ್ತು ಎಂದು ಭಕ್ತರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಊರಲ್ಲಿ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಗ್ರಾಮದಲ್ಲಿ ಮತ್ತು ಕೆರೆ ಸುತ್ತಲೂ ಭಕ್ತರ ದಂಡು ಬೀಡುಬಿಟ್ಟಿದ್ದು, ರಾತ್ರಿ ಬೆಳಕಿನ ಕೊರತೆಯಿಂದ ಜನರು ಸಂಕಷ್ಟ ಪಡುತ್ತಾರೆ ಎಂದು ಭಕ್ತರು ಸಮಸ್ಯೆ ಬಿಚ್ಚಿಟ್ಟರು. ಕೂಡಲೇ ಬೆಳಕಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ದೇವರ ದರ್ಶನಕ್ಕೆ ಮಹಿಳೆಯರ ಪ್ರತ್ಯೇಕ ಸಾಲು ನಿರ್ಮಿಸಲು ಅವಕಾಶ ಕಲ್ಪಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry