ಮೈಲಾಪುರ ಮಲ್ಲಯ್ಯನ ಪಲ್ಲಕ್ಕಿ ಮಹೋತ್ಸವ

7

ಮೈಲಾಪುರ ಮಲ್ಲಯ್ಯನ ಪಲ್ಲಕ್ಕಿ ಮಹೋತ್ಸವ

Published:
Updated:
ಮೈಲಾಪುರ ಮಲ್ಲಯ್ಯನ ಪಲ್ಲಕ್ಕಿ ಮಹೋತ್ಸವ

ಯಾದಗಿರಿ: ಹೈದರಾಬಾದ್‌ ಕರ್ನಾಟಕ ಭಾಗದ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಜ.14ರಂದು ವಿಜೃಂಭಣೆಯಿಂದ ಜರುಗಲಿದ್ದು, ಇಡೀ ಮೈಲಾಪುರ ಗ್ರಾಮ ಜಾತ್ರಾ ಸಂಭ್ರಮದಲ್ಲಿ ಸಿಂಗಾರಗೊಂಡಿದೆ.

ದೇಶದಲ್ಲಿನ 77 ಮೈಲಾರಲಿಂಗನ ಕ್ಷೇತ್ರಗಳಲ್ಲಿ ಮೈಲಾಪುರ 77ನೇ ಕ್ಷೇತ್ರವಾಗಿದ್ದು, ಮೈಲಾರಲಿಂಗೇಶ್ವರ ಇಲ್ಲಿನ ಗಿರಿಯಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ ಎಂಬ ಪ್ರತೀತಿಗೆ ಮೈಲಾಪುರ ಖ್ಯಾತಿಗೊಂಡಿದೆ.

ಪೌರಾಣಿಕ ಹಿನ್ನೆಲೆ: ಆಂಧ್ರಪ್ರದೇಶದಲ್ಲಿನ ಶ್ರೀಶೈಲ ವಾಸಿಯಾಗಿದ್ದ ಶಿವನಿಗೆ ಹೇಮರಡ್ಡಿ ಮಲ್ಲಮ್ಮ ಪರಮ ಭಕ್ತೆಯಾಗಿದ್ದಳು. ಆಕೆಯ ಕನಸಿನಲ್ಲಿ ಶಿವ ಕಾಣಿಸಿಕೊಂಡು ಯಾರ ದರ್ಶನವೂ ಆಗದ ಹಸುವಿನ ಹಾಲು ನೈವೇದ್ಯ ಮಾಡುವಂತೆ ಕೇಳಿಕೊಳ್ಳುತ್ತಾನೆ. ಅದರಂತೆ ಹೇಮರಡ್ಡಿ ಮಲ್ಲಮ್ಮ ನಸುಕಿನಲ್ಲಿ ಉಗುರು ಬೆಚ್ಚನೆಯ ಹಸುವಿನ ಹಾಲು ಕರೆದುಕೊಂಡು ಶಿವನಿಗೆ ನೈವೇದ್ಯ ಮಾಡುವ ಮೂಲಕ ಭಕ್ತಿ ಅರ್ಪಿಸುತ್ತಾಳೆ.

ಹೀಗಿರುವಾಗ ಒಮ್ಮೆ ಹೇಮರಡ್ಡಿ ಮಲ್ಲಮ್ಮನನ್ನು ಹಿಂಬಾಲಿಸಿದ ಆಕೆಯ ಪತಿ ಭರಮಣ್ಣ ಹಾಲಿನ ದರ್ಶನ ಮಾಡುತ್ತಾನೆ. ನಂತರ ಆ ಹಾಲನ್ನು ಸೇವಿಸದ ಶಿವ ಅಲ್ಲಿನ ಗಿರಿ ತ್ಯಜಿಸಿ ಮೈಲಾಪುರದಲ್ಲಿ ಬಂದು ನೆಲೆಗೊಳ್ಳಲು ನೋಡುತ್ತಾನೆ. ಮೈಲಾಪುರದಲ್ಲಿನ ಗಿರಿಯಲ್ಲಿ ಸಪ್ತ ಋಷಿಗಳು ತಪಸ್ಸು ಮಾಡುತ್ತಿರಲು ಮಲ್ಲಾರಕ್ಷ, ಮಾಣಿಕರಕ್ಷ ಎಂಬ ರಾಕ್ಷಸರು ತೊಂದರೆ ನೀಡುತ್ತಿದ್ದರು. ಸಪ್ತ ಋಷಿಗಳ ಮಧ್ಯೆ ಜಾಗ ಪಡೆದ ಶಿವ ನಂತರ ರಾಕ್ಷಸರ ಸಂಹಾರ ನಡೆಸುತ್ತಾನೆ. ಶಿವನಿಗೂ ರಾಕ್ಷಸರಿಗೂ ನಡೆದ ಯುದ್ಧದಲ್ಲಿ ಮಣಿಕರಕ್ಷ ಸಂಹಾರ ಆಗುತ್ತಾನೆ. ನಂತರ ಮಲ್ಲಾರಕ್ಷ ಉಳಿದು ಶಿವನಿಗೆ ಶರಣಾಗುತ್ತಾನೆ. ಆ ಮಲ್ಲಾರಕ್ಷನನ್ನು ಶಿವ ತನ್ನ ವಾಹನ ಕುದುರೆಯನ್ನಾಗಿ ಮಾಡಿಕೊಳ್ಳುತ್ತಾನೆ. ನಂತರ ಬೆಟ್ಟದಲ್ಲಿ ಶಾಶ್ವತವಾಗಿ ನೆಲೆಸುತ್ತಾನೆ. ಶಿವನ ಜತೆ ಗಂಗಾಮಾಳಮ್ಮ , ತುಂಗಂಗಿ ಮಾಳಮ್ಮ ಎರಡೂ ಬದಿಯಲ್ಲಿ ನೆಲೆಸುತ್ತಾರೆ. ಅದರ ಪಕ್ಕದಲ್ಲಿ ಹೆಗ್ಗಣ ಪ್ರಧಾನಿಗೆ ಜಾಗ ನೀಡಲಾಗಿದೆ. ಹೀಗೆ ಮೈಲಾಪುರ ಮೈಲಾರಲಿಂಗೇಶ್ವರನ ಪವಾಡಗಳಿಗೆ ಪೌರಾಣಿಕ ಹಿನ್ನೆಲೆ ಇದೆ.

ಹೊನ್ನಕೆರೆಯಲ್ಲಿ ಗಂಗಾಸ್ನಾನ: ಜಾತ್ರಾ ಮಹೋತ್ಸವದ ಅಂಗವಾಗಿ ಸಂಕ್ರಾಂತಿಯಂದು ಇಲ್ಲಿನ ಮೈಲಾರಪ್ಪ ಮತ್ತು ಗಂಗಾಮಾಳಮ್ಮನ ಮೂರ್ತಿಗಳನ್ನು ಸಕಲವಾದ್ಯಗಳೊಂದಿಗೆ ಹೊನ್ನಕೆರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಗಂಗಾಸ್ನಾನ ಮಾಡಿಸುವ ಸಂಪ್ರದಾಯ ಜಾತ್ರಾ ಭಕ್ತರ ಕುತೂಹಲ, ಭಕ್ತಿಯ ಪರಾಕಾಷ್ಠೆಯಾಗಿ ಇಲ್ಲಿ ನಡೆಯುತ್ತದೆ.

ಏಳುಕೋಟಿ ಮೈಲಾರನಿಗೆ.. ಎಂಬ ಉದ್ಘೋಷ ಎಲ್ಲೆಡೆ ಮೊಳಗುತ್ತದೆ. ದೇವರ ಪ್ರಭಾವಳಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಹೊನ್ನಕೆರೆಯತ್ತ ಹೊರಟಾಗ ಪಲ್ಲಕ್ಕಿಯ ಮೇಲೆ ಕುರಿಮರಿ, ಕಬ್ಬು, ಶೇಂಗಾ ಎಸೆಯುತ್ತಾರೆ. ಕುರಿಮರಿ ಸೇರಿದಂತೆ ಹೊಲಗಳಲ್ಲಿನ ಪೈರು ಸಮೃದ್ಧವಾಗಿ ಹೆಚ್ಚಲಿ ಎಂಬ ಹರಕೆಯ ಹಿನ್ನೆಲೆಯಲ್ಲಿ ಹೀಗೆ ಪಲ್ಲಕ್ಕಿ ಮೇಲೆ ಕುರಿಮರಿ ಎಸೆಯುತ್ತಾರೆ ಎಂಬುದಾಗಿ ಮೈಲಾಪುರ ಗ್ರಾಮದ ಮುಖಂಡ ಬಸವರಾಜಪ್ಪ ಹೇಳುತ್ತಾರೆ. ಕುರಿಮರಿ ಎಸೆಯದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ.

ಜಾತ್ರಾ ಮಹೋತ್ಸವದ ಮತ್ತೊಂದು ವಿಶೇಷ ಎಂದರೆ ಸರಪಳಿ ಹರಿಯುವ ಸಂಪ್ರದಾಯ. ದೇವಸ್ಥಾನದ ಅರ್ಚಕರೊಬ್ಬರು ಸರಪಳಿ ಹರಿಯುವಾಗ ಭಕ್ತರು ರೋಮಾಂಚನ ಅನುಭವಿಸುತ್ತಾರೆ. ನಂತರ ಬೆಟ್ಟದಲ್ಲಿನ ತುಪ್ಪದ ಬಂಡೆಗೆ ತುಪ್ಪದ ದೀಪ ಹಚ್ಚಿ ಭಕ್ತರು ಸಂಭ್ರಮಿಸುತ್ತಾರೆ.

450 ಪೊಲೀಸರ ನಿಯೋಜನೆ

ಜಾತ್ರಾ ಬಂದೋಬಸ್ತ್‌ಗಾಗಿ ಇಬ್ಬರು ಡಿವೈಎಸ್‌ಪಿ, 8 ಸಿಪಿಐ, 25 ಪಿಎಸ್‌ಐ ಸೇರಿದಂತೆ 50 ಎಎಸ್‌ಐ, ಎರಡು ಕೆಎಸ್‌ಆರ್‌ಪಿ, ಎರಡು ಡಿಆರ್‌ಆರ್‌ ತುಕಡಿ, 250 ಹೋಂ ಗಾರ್ಡ್‌ ಸೇರಿದಂತೆ ಕಲಬುರ್ಗಿ, ಬೀದರ್‌ ಜಿಲ್ಲೆಗಳಿಂದ ಒಟ್ಟು 450 ಪೊಲೀಸರನ್ನು ನೇಮಿಸಲಾಗಿದೆ. ಪ್ರಾಣಿಹಿಂಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಿಗಿಕ್ರಮ ಅನುಸರಿಸಿದೆ. ಗ್ರಾಮದ ಎಂಟು ದಿಕ್ಕುಗಳಲ್ಲಿ ಚೆಕ್‌ಪೋಸ್ಟ್. ನಾಕಾಬಂದಿ ಹಾಕಲಾಗಿದೆ. ಬ್ಯಾರಿಕೆಡ್‌ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನೆರಳು–ನೀರಿನ ವ್ಯವಸ್ಥೆ

ಮೈಲಾರಲಿಂಗ ಜಾತ್ರೆಗೆ ಬರುವ ಭಕ್ತರಿಗೆ ಈ ವರ್ಷ ವಿಶೇಷವಾಗಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಟ್ಟದ ಕೊನೆಯಿಂದ ಹಿಡಿದು ತುದಿಯವರೆಗೂ ಛಾವಣಿ ಅಳವಡಿಸಲಾಗಿದೆ. ಜತೆಗೆ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಪ್ರತಿವರ್ಷದಂತೆ ಭಕ್ತರು ಬಿಸಿಲಿನಿಂದ ಬಳಲುವುದು ಈ ಬಾರಿ ತಪ್ಪಲಿದೆ ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ತಿಳಿಸಿದರು.

ನಾಳೆ ಬಹಿರಂಗ ಹರಾಜು

ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಭಕ್ತರಿಂದ ವಶಪಡಿಸಿಕೊಂಡ ಕುರಿ-ಆಡು ಮರಿಗಳನ್ನು ಜ.15ರಂದು ಬೆಳಿಗ್ಗೆ 10ಕ್ಕೆ ನಗರದ ಪಶು ಆಸ್ಪತ್ರೆ ಆವರಣದಲ್ಲಿ ಬಹಿರಂಗ ಹರಾಜು ನಡೆಸಲಾಗುವುದು ಎಂದು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ತಿಳಿಸಿದ್ದಾರೆ.

ಪಾದಯಾತ್ರಿಗಳ ಪಯಣ..

ಮೈಲಾರಲಿಂಗಸ್ವಾಮಿ ಜಾತ್ರೆ ಅಂಗವಾಗಿ ರಾಯಚೂರು, ಕಲಬುರ್ಗಿ ತೆಲಂಗಾಣದ ಕಡೆಗಳಿಂದ ಮೂರು ದಿನಗಳ ಹಿಂದೆ ಪಾದಯಾತ್ರೆ ಮೂಲಕ ಬಂದ ಅನೇಕ ಪಾದಯಾತ್ರಿ ಭಕ್ತರ ಗುಂಪು ಶನಿವಾರ ಮೈಲಾಪುರ ರಸ್ತೆಯುದ್ದಕ್ಕೂ ಸಾಗಿತ್ತು.

‘ಮಲ್ಲಯ್ಯ ನಮ್ಮ ಇಷ್ಟ ದೇವರು. ಪ್ರತಿವರ್ಷ 80 ಕಿಲೋ ಮೀಟರ್ ಪಾದಯಾತ್ರೆ ಮೂಲಕ ಬಂದು ಮೈಲಾರಲಿಂಗನ ದರ್ಶನ ಪಡೆದ ಮೇಲೆಯೇ ಮನಸ್ಸಿಗೆ ಶಾಂತಿ. ಇದನ್ನು ನಮ್ಮ ಪೂರ್ವಜರು ರೂಢಿಸಿಕೊಂಡು ಬಂದಿರುವ ಪಾರಂಪರಿಕ ಧಾರ್ಮಿಕ ಪದ್ಧತಿ. ನಾವು ಮುಂದುವರಿಸಿದ್ದೇವೆ’ ಎಂದು ಕಲಬುರ್ಗಿ ಜಿಲ್ಲೆ ನಾಗಾಪುರದ ಶರಣು, ಸುರೇಶ ತಿಳಿಸಿದರು.

ಶನಿವಾರ ಸಂಜೆಯ ವೇಳೆಗೆ ಮೈಲಾಪುರದಲ್ಲಿ ಭಕ್ತರ ದಂಡು ಬೀಡುಬಿಡುತ್ತಿದ್ದ ದೃಶ್ಯ ಕಂಡುಬಂತು. ಒಂದೆಡೆ ಹೊನ್ನಕೆರೆಯಲ್ಲಿ ಭಕ್ತರು ಗಂಗಾಸ್ನಾನದಲ್ಲಿ ತೆಲ್ಲೀನರಾದರೆ; ಇನ್ನೊಂದೆಡೆ ತೆಲಂಗಾಣದ ಕಡೆಯಿಂದ ಬಂದಿದ್ದ ಭಕ್ತರು ಕೆರೆಯಂಗಳಲ್ಲಿ ತಾತ್ಕಾಲಿಕ ಗುಡಾರಗಳನ್ನು ನಿರ್ಮಿಸುತ್ತಿದ್ದರು.

ಒಂದು ದಿನ ಮುಂಚೆಯೇ ಲಕ್ಷಾಂತರ ಭಕ್ತರು ಬಂದು ಉಳಿದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚುವ ಸಾಧ್ಯ ಇದೆ ಎಂದು ದೇಗುಲದ ಅರ್ಚಕ ಭೀಮಾಶಂಕರ್ ಹೇಳಿದರು.

* * 

ಭಕ್ತರ ರಕ್ಷಣೆಗಾಗಿ 14 ಮಂದಿ ಈಜುಗಾರರನ್ನು ಗಂಗಾಸ್ನಾನ ಮಾಡುವ ಹೊನ್ನಕೆರೆಯಲ್ಲಿ ನಿಯೋಜಿಸಲಾಗಿದೆ. 14 ಸಾರ್ವಜನಿಕ ಶೌಚಾಲಯ ಕೂಡ ನಿರ್ಮಿಸಲಾಗಿದೆ. ಚನ್ನಮಲ್ಲಪ್ಪ ಘಂಟಿ

ತಹಶೀಲ್ದಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry