ಒಂದೇ ಇರಿತಕ್ಕೆ ಇಲ್ಯಾಸ್‌ ಹತ್ಯೆ

7

ಒಂದೇ ಇರಿತಕ್ಕೆ ಇಲ್ಯಾಸ್‌ ಹತ್ಯೆ

Published:
Updated:

ಮಂಗಳೂರು: ಹಲವು ಅಪರಾಧ ಕೃತ್ಯಗಳನ್ನು ನಡೆಸಿ ನಗರದ ಜನರಲ್ಲಿ ಭೀತಿ ಹುಟ್ಟಿಸಿದ್ದ ಟಾರ್ಗೆಟ್‌ ಇಲ್ಯಾಸ್‌ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದು ಆಗಂತುಕರ ಒಂದೇ ಇರಿತಕ್ಕೆ!

ಇಲ್ಯಾಸ್‌ ದೈಹಿಕವಾಗಿ ಬಲಶಾಲಿಯಾಗಿದ್ದ. ಆತನನ್ನು ಹತ್ಯೆ ಮಾಡಲು ಹವಣಿಸುತ್ತಿದ್ದ ತಂಡ ಮನೆಯನ್ನೇ ಆಯ್ಕೆ ಮಾಡಿಕೊಂಡಿತ್ತು. ಆತ ವಾಸಿಸುತ್ತಿದ್ದ ಮನೆಯ ಪಾರ್ಕಿಂಗ್‌ ಪ್ರದೇಶ ಮತ್ತು ಮೆಟ್ಟಿಲುಗಳಲ್ಲಿ ಸರಿಯಾಗಿ ಬೆಳಕು ಬೀಳುವುದಿಲ್ಲ. ಬೆಳಿಗ್ಗೆ 8.45ರ ಸುಮಾರಿಗೆ ಕಗ್ಗತ್ತಲು ಆವರಿಸಿದ್ದ ದಾರಿಯಲ್ಲಿ ಸಾಗಿ ಹೋದ ಹಂತಕರು ಯಾವ ಸುಳಿವನ್ನೂ ಬಿಟ್ಟುಕೊಡದೆ ಮನೆ ಪ್ರವೇಶಿಸಿದ್ದರು. ಸ್ನೇಹಿತರು ಬಂದಿರಬಹುದು ಎಂದು ಇಲ್ಯಾಸ್‌ನ ಅತ್ತೆ ಚಹಾ ಮಾಡಲು ಹೋಗುತ್ತಿದ್ದಂತೆ ಆಗಂತುಕರಿಬ್ಬರೂ ಕೋಣೆ ನುಗ್ಗಿದ್ದರು.

ಇಲ್ಯಾಸ್‌ ಎದ್ದು ನಿಲ್ಲುವುದರೊಳಗೆ ಹರಿತವಾದ ಆಯುಧದಿಂದ ಆತನ ಎದೆಯ ಮಧ್ಯಭಾಗಕ್ಕೆ ಇರಿದಿದ್ದರು. ಇರಿತದ ರಭಸಕ್ಕೆ ಆತನ ಶ್ವಾಸಕೋಶವೇ ತುಂಡಾಗಿತ್ತು. ಚೀರುತ್ತಲೇ ಕೆಳಕ್ಕೆ ಕುಸಿಯುತ್ತಿದ್ದಂತೆ ಹಂತಕರು ಅಲ್ಲಿಂದ ಕಾಲ್ಕಿತ್ತಿದ್ದರು. ಎದೆಯಲ್ಲಿ ಆಳವಾದ ಗಾಯವಾಗಿದ್ದರಿಂದ ಇಲ್ಯಾಸ್‌ ಮಲಗಿದ್ದ ಕೋಣೆಯಲ್ಲಿ ರಕ್ತದ ಹರಿದಿತ್ತು.

ಅಕ್ಕಪಕ್ಕದವರ ನೆರವಿನಲ್ಲಿ ತಕ್ಷಣವೇ ಇಲ್ಯಾಸ್‌ನನ್ನು ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಗೆ ರವಾನಿಸಿದ ಕುಟುಂಬದವರು, ಪ್ರಾಣ ಉಳಿಸಲು ಯತ್ನಿಸಿದರು. ಆದರೆ, ಆಸ್ಪತ್ರೆಗೆ ಬಂದ ಕೆಲವೇ ನಿಮಿಷಗಳಲ್ಲಿ ಆತ ಕೊನೆಯುಸಿರೆಳೆದ.

ಆಸ್ಪತ್ರೆಗೆ ಬಂದ ಯುವಕರ ದಂಡು: ಇಲ್ಯಾಸ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಗರದ ವಿವಿಧೆಡೆಯಿಂದ ನೂರಾರು ಮಂದಿ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯ ಶವಾಗಾರದತ್ತ ಬಂದರು. ಅವರಲ್ಲಿ ಹೆಚ್ಚಿನ ಸಂಖ್ಯೆಯ ಯುವಕರಿದ್ದರು. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಅಲ್ಲಿಯೇ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಆಸ್ಪತ್ರೆಯ ಆವರಣದಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸ್ ಭದ್ರತೆಯಲ್ಲಿ ಇಲ್ಯಾಸ್‌ ಶವವನ್ನು ಉಳ್ಳಾಲದ ಸುಂದರಿಭಾಗ್‌ನ ಆತನ ಮನೆಗೆ ಕೊಂಡೊಯ್ಯಲಾಯಿತು.

ತನಿಖೆ ಆರಂಭ: ಮೃತನ ಪತ್ನಿ ನೀಡಿದ ದೂರಿನಂತೆ ರೌಡಿಗಳಾದ ಟಾರ್ಗೆಟ್‌ ಸಫ್ವಾನ್, ದಾವೂದ್‌ ಧರ್ಮನಗರ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry