ವಿದ್ಯುತ್ ಮಗ್ಗ ಸಹಾಯಧನ ಹೆಚ್ಚಿಸಿ

7

ವಿದ್ಯುತ್ ಮಗ್ಗ ಸಹಾಯಧನ ಹೆಚ್ಚಿಸಿ

Published:
Updated:
ವಿದ್ಯುತ್ ಮಗ್ಗ ಸಹಾಯಧನ ಹೆಚ್ಚಿಸಿ

ವಿಜಯಪುರ: ವಿದ್ಯುತ್ ಮಗ್ಗಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನದ ಪ್ರಮಾಣವನ್ನು ಏರಿಕೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ನೇಕಾರರಾದ ಚಂದ್ರು, ಮೇಸ್ತ್ರಿ ತಿರುಮಲೇಶ್, ಮಂಜುನಾಥ್, ಹರೀಶ್ ಕುಮಾರ್ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

‘ವಿದ್ಯುತ್ ಮಗ್ಗಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನೂರಾರು ಕುಟುಂಬಗಳ ಪಾಲಿಗೆ ವಿದ್ಯುತ್ ಮಗ್ಗ ಬೆಳಕು ಚೆಲ್ಲದಂತೆ ಆಗಿದೆ. ನಿತ್ಯ ₹300 ರಿಂದ ₹400 ಸಂಪಾದನೆ ಮಾಡುತ್ತೇವೆ. ಇಷ್ಟು ಹಣ ಸಂಪಾದನೆ ಮಾಡಬೇಕಾದರೆ 12 ಗಂಟೆ ಕೆಲಸ ಮಾಡಬೇಕು. ವಿದ್ಯುತ್‌ ಆಗಾಗ ಕೈ ಕೊಡುತ್ತಿದೆ. ಇದರಿಂದ ಕೆಲವೊಮ್ಮೆ ದಿನಕ್ಕೆ ₹150 ಮಾತ್ರ ಸಿಗುತ್ತದೆ. ಇದರಿಂದ ನಾವು ದಿವಾಳಿಯಾಗುತ್ತಿದ್ದೇವೆ’ ಎಂದು ಹೇಳುತ್ತಾರೆ.

‘ಇಲ್ಲಿನ ನೂರಾರು ಮಗ್ಗಗಳು ಏಜೆನ್ಸಿಗಳ ಮೂಲಕ ನಡೆಯುತ್ತಿವೆ. ಬೆಂಗಳೂರಿನಿಂದ ಬರುವ ಮಾಲೀಕರು, ಸೀರೆಗಳನ್ನು ಉತ್ಪಾದನೆ ಮಾಡಲು ಬೇಕಾಗಿರುವ ಕಚ್ಚಾ ಸರಕು ತಂದು ಕೊಡುತ್ತಾರೆ. ಅದರಲ್ಲಿ ಸೀರೆ ನೇಯ್ದು, ಅವರಿಗೆ ಕಳುಹಿಸಬೇಕು. ಅವರು ನಮಗೆ ಒಂದು ಸೀರೆಗೆ ₹150 ರಿಂದ ₹200 ಕೊಡುತ್ತಾರೆ. ಇದರಿಂದ ಬರುವ ಸಂಪಾದನೆಯಿಂದ ನಾವು ಜೀವನ ಮಾಡಲಿಕ್ಕೆ ಕಷ್ಟ’ ಎಂದಿದ್ದಾರೆ.

ವಿದ್ಯುತ್ ಮಗ್ಗ ಸ್ಥಾಪಿಸಲು ಸರ್ಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಶೇ 80 ರಷ್ಟು ಸಹಾಯಧನ ಸಿಗುತ್ತಿದೆ. ಸಾಮಾನ್ಯ ವರ್ಗದವರಿಗೆ ₹1.50 ಲಕ್ಷ ಸಹಾಯಧನ ನೀಡುತ್ತಾರೆ. ಇಲಾಖೆಯಿಂದ ಸಹಾಯಧನ ನೀಡಿದರೂ ಬ್ಯಾಂಕುಗಳಿಂದ ನೇಕಾರರಿಗೆ ಸಾಲಗಳು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಸಾಲಸೌಲಭ್ಯಗಳು ಕೊಡಲು ನಿರಾಕರಿಸುತ್ತಿದ್ದಾರೆ ಎನ್ನುತ್ತಾರೆ.

‘ನಾನು ಸಂಪಾದನೆ ಮಾಡುವ ಹಣ ಕಡಿಮೆ ಎನ್ನುವ ಕಾರಣಕ್ಕಾಗಿ ಸಾಲಸೌಲಭ್ಯ ಕೊಡುತ್ತಿಲ್ಲ. ಇದರಿಂದ ನಾವು ಸ್ವಂತ ಉದ್ದಿಮೆ ನಡೆಸಲು ಇದುವರೆಗೂ ಸಾಧ್ಯವಾಗಿಲ್ಲ. ನಮಗೆ ಬೇರೆ ಕಸುಬು ಗೊತ್ತಿಲ್ಲದ ಕಾರಣ ಇದೇ ಕೆಲಸದಲ್ಲಿ ಮುಂದುವರೆಯುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರದಿಂದ ಮಗ್ಗಗಳ ಯಂತ್ರೋಕರಣ ಖರೀದಿ ಮಾಡಲಿಕ್ಕೆ ಕೊಡುವ ಅನುದಾನಕ್ಕಿಂತ ಇನ್ನೂ ಹೆಚ್ಚು ಹಣ ನಾವು ಕೊಡಬೇಕು. ಜಿಎಸ್‌ಟಿ ಬಂದ ನಂತರ ₹13 ಸಾವಿರ ತೆರಿಗೆ ಹೆಚ್ಚಿಗೆ ಪಾವತಿ ಮಾಡಬೇಕು. ಅಷ್ಟನ್ನೂ ಕೊಟ್ಟು, ₹20 ಸಾವಿರ ಹೆಚ್ಚಿಗೆ ಕೊಟ್ಟು ಯಂತ್ರೋಕರಣ ಖರೀದಿ ಮಾಡಿಕೊಂಡು ಬರಬೇಕು ಎಂದು ವಿವರಿಸುತ್ತಾರೆ.

* * 

ನೇಕಾರರಿಗೆ ಬ್ಯಾಂಕ್‌ ಖಾತೆಗೆ ಒತ್ತಾಯ

ಸಂಪಾದನೆ ಮಾಡುತ್ತಿರುವ ಹಣದಿಂದ ಕುಟುಂಬಗಳ ನಿರ್ವಹಣೆ ಮಾಡುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಸರ್ಕಾರ ನಮಗೆ ಕೊಡುವ ಸಹಾಯಧನದ ಪ್ರಮಾಣ ಶೇ 80ಕ್ಕೆ ಏರಿಕೆ ಮಾಡಬೇಕು ಎಂದು ಚಂದ್ರು ಹೇಳಿದ್ದಾರೆ.

ನೇಕಾರರಿಗೆ ತಲಾ 2 ಮಗ್ಗಳನ್ನು ಮಾಡಿಕೊಳ್ಳಲಿಕ್ಕೆ ನೇರವಾಗಿ ಸಹಾಯಧನ ಬಿಡುಗಡೆ ಮಾಡಲಿ. ಬ್ಯಾಂಕುಗಳಲ್ಲಿ ನೇಕಾರರು ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ, ಕನಿಷ್ಠ ₹50 ಸಾವಿರ ಠೇವಣಿ ಇಡುವಂತೆ ತಿಳಿಸುತ್ತಿದ್ದಾರೆ. ಶೂನ್ಯ ಖಾತೆಗಳನ್ನು ತೆರೆದುಕೊಡಬೇಕು ಎಂದು ಒತ್ತಾಯಿಸಿದ್ದಾರೆ.

* * 

ನಾವು ಸ್ವಾಭಿಮಾನದಿಂದ ಬದುಕುತ್ತಿದ್ದೇವೆಯೆ ಹೊರತು ನೆಮ್ಮದಿಯಿಂದ ಅಲ್ಲ, ಸರ್ಕಾರ ನಮ್ಮಂಥವರ ಕಡೆಗೆ ಗಮನಹರಿಸಬೇಕು.

ಗಂಗಾಧರ್, ವಿದ್ಯುತ್ ಮಗ್ಗ ನೇಕಾರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry