‘ಜಿಪಿಎಸ್ ಮಾಡಲು ₹1 ಸಾವಿರ ವಸೂಲಿ’

7

‘ಜಿಪಿಎಸ್ ಮಾಡಲು ₹1 ಸಾವಿರ ವಸೂಲಿ’

Published:
Updated:

ಕೂಡ್ಲಿಗಿ: ‘ಶೌಚಾಲಯ ಕಾಮಗಾರಿಯನ್ನು ಜಿಪಿಎಸ್ ಮಾಡಲು ಪಂಚಾಯ್ತಿಯಲ್ಲಿನ ಕಂಪ್ಯೂಟರ್ ಅಪರೇಟರ್ ಒಂದು ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸದಸ್ಯ ಪಾಪನಾಯಕ ಆರೋಪಿಸಿದರು.

ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಇಲ್ಲಿ ಹುಡೇಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೌಚಾಲಯಗಳ ಜಿಪಿಎಸ್ ಮಾಡುವಾಗ ಒಂದು ಸಾವಿರ ರೂಪಾಯಿಯಷ್ಟು ಹಣವನ್ನು ಕಂಪ್ಯೂಟರ್ ಅಪರೇಟರ್ ಫಲಾನುಭವಿಗಳಿಂದ ಪಡೆಯುತ್ತಿದ್ದಾರೆ. ಇದರಿಂದ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಿಲ್ಲ’ ಎಂದು ದೂರಿದರು.

ಜರಿಮಲೆ ಕ್ಷೇತ್ರದ ಸದಸ್ಯೆ ಶ್ರುತಿ ಮಾತನಾಡಿ, ‘ಬೆಳಗೆಟ್ಟೆ ಪಂಚಾಯ್ತಿಯಲ್ಲಿ ವಸೂಲಾದ ತೆರಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದೇ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಕೈ ಸೇರುತ್ತದೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಎಂ. ಬಸವರಾಜ, ‘ವಸೂಲಾದ ತೆರಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ’ ಎಂದು ಸಮರ್ಥಿಸಿಕೊಂಡರು. ಮತ್ತೆ ಆಕ್ಷೇಪಿಸಿದ ಶ್ರುತಿ ಅವರು, ‘ಈ ಸಂಬಂಧ ಸೂಕ್ತ ದಾಖಲೆಗಳಿದ್ದು, ಸಾಬೀತು ಮಾಡುತ್ತೇನೆ’ ಎಂದು ಗುಡುಗಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎನ್. ಸತೀಶ್ ರೆಡ್ಡಿ, ‘ಮುಂದೆಇಂಥ ಆರೋಪಗಳು ಕೇಳಿ ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎರಡೂ ಪಿಡಿಒಗಳಿಗೆ ಎಚ್ಚರಿಸಿದರು.

‘ನೆಪಗಳನ್ನು ಹೇಳಿಕೊಂಡು ತಾಲ್ಲೂಕು ಖಜಾನೆ ಅಧಿಕಾರಿಯು ನಮ್ಮ ಬಿಲ್ಲುಗಳನ್ನು ಬಿಡುಗಡೆ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಕರ್ನಾಟಕ ಪ್ರವಾಸ ಎರಡು ತಿಂಗಳು ವಿಳಂಭವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಧ್ವನಿಗೂಡಿಸಿದ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ನಮ್ಮ ಇಲಾಖೆಯ ಸ್ಥಿತಿ ಇದೇ ಅಗಿದೆ ಎಂದರು. ಮುಂದಿನ ಮಂಗಳವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಖಜಾನೆ ಇಲಾಖೆಯ ಅಧಿಕಾರಿಯನ್ನೂ ಕರೆಸಿ ಮಾಹಿತಿ ಪಡೆಯೋಣ ಎಂದು ಕಾರ್ಯನಿರ್ವಹಣಾಧಿಕಾರಿ ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಮಂಡಿಸಿದ್ದ ಹಣಕಾಸು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು. ವಿದ್ಯುತ್, ಕೃಷಿ, ತೋಟಗಾರಿಕೆ, ಸಾರಿಗೆ ಇಲಾಖೆಗಳ ಮೇಲೆ ಚರ್ಚೆ ನಡೆಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಕೆಇಬಿ ಬಸವರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಗೈರು

ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಗೈರಾಗಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಹಿಂದೆ ವಿವಿಧ ಕಾರಣಗಳಿಂದ ಎರಡು ಬಾರಿ ಸಭೆ ಮುಂದೂಡಲಾಗಿತ್ತು. ಶುಕ್ರವಾರದ ಸಭೆಗೂ ಅನಿವಾರ್ಯ ಕಾರಣದಿಂದ ಬರಲು ಆಗುವುದಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್ ಮೊದಲೇ ಹೇಳಿದ್ದರು. ಆದರೆ, ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಅದರೆ, ಕೆಲ ಗಂಟೆ ಕಾದರೂ ಅವರು ಬರಲಿಲ್ಲ. ಅಂತಿಮವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿಯೇ ಸಭೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry