ಮತದಾರ ಪಟ್ಟಿಯಲ್ಲಿಲ್ಲ 30 ಸಾವಿರ ಮಹಿಳೆಯರು

7

ಮತದಾರ ಪಟ್ಟಿಯಲ್ಲಿಲ್ಲ 30 ಸಾವಿರ ಮಹಿಳೆಯರು

Published:
Updated:

ಬೀದರ್: ಜಿಲ್ಲೆಯಲ್ಲಿ 30 ಸಾವಿರ ಮಹಿಳೆಯರು ಮತದಾರ ಪಟ್ಟಿಯಿಂದ ಹೊರಗುಳಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆಡಳಿತವು ಪ್ರತಿ ಮಹಿಳೆಯ ಹೆಸರು ಸೇರಿಸಲು ವಿಶೇಷ ಅಭಿಯಾನ ಆರಂಭಿಸಿದೆ.

ಜಿಲ್ಲೆಯ ಬಸವಕಲ್ಯಾಣ ಹಾಗೂ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಕಡಿಮೆ ಇದೆ. ಜನಸಂಖ್ಯೆ ಹಾಗೂ ಮತದಾರರ ಪಟ್ಟಿಯಲ್ಲಿರುವ ಮಹಿಳೆಯರ ಸಂಖ್ಯೆಯಲ್ಲಿ ಬಹಳಷ್ಟು ಅಂತರ ಕಂಡು ಬಂದಿದೆ. ವೈವಾಹಿಕ ಕಾರಣಕ್ಕಾಗಿ ಕೆಲ ಮಹಿಳೆಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಲ್ಲ. ಜಿಲ್ಲೆಯಲ್ಲಿ ನೆಲೆಸಿರುವ ಎಲ್ಲ ಮಹಿಳೆಯರಿಗೂ ಮತದಾನದ ಹಕ್ಕು ಕಲ್ಪಿಸುವ ಉದ್ದೇಶದಿಂದ ವಿಶೇಷ ಅಭಿಯಾನದಡಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.

ಜಿಲ್ಲಾ ಆಡಳಿತವು ಈಗಾಗಲೇ ರಾಜಕೀಯ ಪಕ್ಷಗಳ ಸಭೆ ನಡೆಸಿದೆ. ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ ಆಯೋಜಿಸಿ ತಿಳಿವಳಿಕೆ ನೀಡಿದೆ. ಮತಗಟ್ಟೆ ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡಿ ಪ್ರತಿ ಮನೆಗೆ ಹೋಗಿ ಮಾಹಿತಿ ಪಡೆದು ವಿಶೇಷವಾಗಿ ಮತದಾರ ಪಟ್ಟಿಯಿಂದ ಬಿಟ್ಟು ಹೋಗಿರುವ ಮಹಿಳೆಯರ ಹೆಸರನ್ನು ಸೇರಿಸುತ್ತಿದೆ.

ಮತದಾರರ ದಿನಾಚರಣೆ ಅಂಗವಾಗಿ ಜನವರಿ 25 ರಂದು ಹೊಸ ಮತದಾರರಿಗೆ ವಿಶೇಷವಾಗಿ 2018ರ ಜನವರಿ 1 ರಂದು 18 ವರ್ಷ ಪೂರ್ಣಗೊಂಡವರಿಗೆ ಮತದಾರರ ಗುರುತಿನ ಚೀಟಿ ಕೊಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತವಾಗಿ ಜನವರಿ 18ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಂದ ಮ್ಯಾರಾಥಾನ್‌ ನಡೆಸಲಿದೆ.

ಜ.19ರಂದು ಪಿಡಿಒ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಆಯಾ ಗ್ರಾಮ ಮಟ್ಟದಲ್ಲಿ ಗ್ರಾಮಸಭೆಗಳನ್ನು ನಡೆಸುವರು. ಕಲಾ ತಂಡಗಳು ಪ್ರತಿ ಗ್ರಾಮಗಳಲ್ಲಿ ಬೀದಿ ನಾಟಕಗಳನ್ನು ನಡೆಸಿ ಮತದಾನದ ಬಗೆಗೆ ಜಾಗೃತಿ ಮೂಡಿಸಲಿವೆ.

‘ಬಸವಕಲ್ಯಾಣ ಕ್ಷೇತ್ರದಲ್ಲಿ ಒಂದು ಸಾವಿರ ಪುರುಷರಿಗೆ 893 ಮಹಿಳಾ ಮತದಾರರು ಇದ್ದಾರೆ. ಈ ಅನುಪಾತ ಔರಾದ್‌ ಕ್ಷೇತ್ರದಲ್ಲಿ 917 ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ 943 ಇದೆ. ಜನಸಂಖ್ಯೆ ಅನುಗುಣವಾಗಿ ಮಹಿಳೆಯರ ಅನುಪಾತ ಕನಿಷ್ಠ 956 ಇರಬೇಕು’ ಎನ್ನುತ್ತಾರೆ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ.

‘ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ನೇರವಾಗಿ ಬೂತ್ ಮಟ್ಟದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಹಾಗಾಗಿ, ಆಯೋಗದ ನಿಯಮಗಳ ಅನುಸಾರ ಕರ್ತವ್ಯ ನಿರ್ವಹಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ’ ಎಂದು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry