ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿನವರಿಗೆ ಮುಖ ತೋರಿಸಲು ಆಗುತ್ತಿಲ್ಲ

Last Updated 14 ಜನವರಿ 2018, 8:59 IST
ಅಕ್ಷರ ಗಾತ್ರ

ಬೀದರ್‌: ಪ್ರತಿ ಗ್ರಾಮಕ್ಕೆ ಹೋಗಿ ಮತದಾನಕ್ಕೆ ಅರ್ಹರಾದವರ ಮಾಹಿತಿ ಸಂಗ್ರಹಿಸಿ ಚುನಾವಣಾ ವಿಭಾಗದ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿ ಮೂರು ವರ್ಷ ಕಳೆದರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲ. ಮತ್ತೆ ಗ್ರಾಮಸ್ಥರ ಬಳಿ ಹೋಗಲು ನಾಚಿಕೆಯಾಗುತ್ತಿದೆ. ಊರಿನವರಿಗೆ ಮುಖ ತೋರಿಸಲು ಆಗುತ್ತಿಲ್ಲ. ದಯವಿಟ್ಟು ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಕೊಟ್ಟವರಿಗೆ ಚುನಾವಣಾ ಗುರುತಿನ ಚೀಟಿ ಕೊಡುವ ವ್ಯವಸ್ಥೆ ಮಾಡಿ ಎಂದು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳೇ ಮನವಿ ಮಾಡಿದರು.

ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ನಡೆದ ಔರಾದ್, ಬೀದರ್ ಹಾಗೂ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚುನಾವಣಾ ಸಿಬ್ಬಂದಿ ಚುನಾವಣಾ ವಿಭಾಗದ ಲೋಪಗಳನ್ನು ಪ್ರಸ್ತಾಪ ಮಾಡಿ ಅವುಗಳನ್ನು ಸರಿಪಡಿಸಲು ಕೋರಿದರು.

ಚುನಾವಣಾ ಕಾರ್ಯದ ಬಗೆಗೆ ಶಾಂತಚಿತ್ತದಿಂದ ಆಲಿಸಿದ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆರು ವರ್ಷ ಕಳೆದರೂ ಲೋಪಗಳನ್ನು ಸರಿಪಡಿಸದೇ ಇರುವುದನ್ನು ಉಲ್ಲೇಖಿಸಿ ನಾವು ಯಾವ ಮುಖ ತೆಗೆದುಕೊಂಡು ಮತದಾರರ ಮನೆಗೆ ಹೋಗಬೇಕು ಎಂದು ನಯವಾಗಿ ಪ್ರಶ್ನಿಸಿದರು.

ಬೀದರ್‌ ತಾಲ್ಲೂಕಿನ ಮರ್ಜಾಪುರದಲ್ಲಿ 50 ಜನ ಮೃತಪಟ್ಟಿದ್ದಾರೆ. 20 ಜನ ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಊರಿಗೆ ಹೋಗಿದ್ದಾರೆ. ಇವರ ಹೆಸರು ತೆಗೆಯುವಂತೆ ಲಿಖಿತವಾಗಿ ಬರೆದುಕೊಡಲಾಗಿದೆ. ಚುನಾವಣಾ ಸಿಬ್ಬಂದಿ ಹೆಸರುಗಳನ್ನು ತೆಗೆಯುತ್ತಿಲ್ಲ. ಮೂರು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದರೂ ಬಗದಲ್‌ನ ಜನರ ಹೆಸರು ಸೇರಿಸಿ ಗುರುತಿನ ಚೀಟಿ ಕೊಡುತ್ತಿಲ್ಲ ಎಂದು ಶಿಕ್ಷಕಿಯೊಬ್ಬರು ದೂರಿದರು.

ಅರ್ಜಿ ತಿರಸ್ಕರಿಸಿದರೂ ಮಾಹಿತಿ ಕೊಡುತ್ತಿಲ್ಲ. ಚುನಾವಣಾ ಸಿಬ್ಬಂದಿ ಶಿಕ್ಷಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದಿಲ್ಲ. ಹಿಂದೆ ಒಂದು ದಿನ ವಿಳಂಬವಾದರೂ ಕೆಲ ಅರ್ಜಿ ಫಾರ್ಮ್‌ಗಳನ್ನು ಸ್ವೀಕರಿಸಲಿಲ್ಲ. ನಿಗದಿತ ದಿನಾಂಕದೊಳಗೆ ಅರ್ಜಿ ಪಡೆದು ಮೂರು ವರ್ಷ ಕಳೆದರೂ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಿಲ್ಲ. ಚುನಾವಣೆ ಪೂರ್ವದಲ್ಲಿ ಗುರುತಿನ ಕೊಟ್ಟರೆ ನಮ್ಮ ಮರ್ಯಾದೆಯೂ ಉಳಿಯುತ್ತದೆ’ ಎಂದು ಶಿಕ್ಷಕರೊಬ್ಬರು ಹೇಳಿದರು.

ಬೀದರ್‌ ತಾಲ್ಲೂಕಿನ ಚಿಟ್ಟಾ ಹಾಗೂ ಚಿಟ್ಟಾವಾಡಿಯ ಮತದಾರ ಪಟ್ಟಿಯಲ್ಲಿ ಬೇರೆ ಮತಗಟ್ಟೆಯ ಹೆಸರುಗಳನ್ನು ಸೇರಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನು ಸರಿಪಡಿಸುತ್ತಿಲ್ಲ ಎಂದು ದೂರಿದರು.

ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಡುಪ್ಲಿಕೇಟ್‌ ಗುರುತಿನ ಚೀಟಿ ಕೊಡಲು ₹ 25 ಪಡೆದಿದ್ದಾರೆ. ಎರಡು ವರ್ಷಗಳಿಂದ ಮತದಾರರ ದಿನಾಚರಣೆಯ ದುಡ್ಡು ಕೊಟ್ಟಿಲ್ಲ. ಚುನಾವಣಾ ವಿಭಾಗದಲ್ಲಿ ಎರಡೇ ಕಂಪ್ಯೂಟರ್‌ಗಳಿವೆ. ಚುನಾವಣಾ ಕಾರ್ಯಕ್ಕೆ ನಿಯೋಜನಗೊಂಡ ಸಿಬ್ಬಂದಿ ಸುಲಭವಾಗಿ ವ್ಯವಹರಿಸಲು ಸಾಧ್ಯವಾಗುವಂತೆ ಪ್ರತ್ಯೇಕ ಕೊಠಡಿಗಳನ್ನು ತೆರೆಯಬೇಕು. ಕಂಪ್ಯೂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

‘ಕಾರಣಾಂತರಗಳಿಂದ ಚುನಾವಣಾ ಗುರುತಿನ ಚೀಟಿ ಕಳೆದುಕೊಂಡವರಿಗೆ ಡುಪ್ಲಿಕೇಟ್‌ ಗುರುತಿನ ಚೀಟಿ ಕೊಡಲು ವ್ಯವಸ್ಥೆ ಮಾಡಲಾಗುವುದು. ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ಗುರುತಿನ ಚೀಟಿ ಬಂದಿಲ್ಲ. ಚುನಾವಣಾ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆ ಮಾಡಲು ಹೆಚ್ಚುವರಿ ಕಂಪ್ಯೂಟರ್‌ ಅಳವಡಿಸಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹಾದೇವ ತಿಳಿಸಿದರು.

‘ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಸ್ಪರ ಗೌರವಯುತವಾಗಿ ನಡೆದುಕೊಳ್ಳಬೇಕು. ಕೆಲಸದ ಒತ್ತಡದಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಸ್ನೇಹಪರವಾಗಿ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

ಮತದಾರ ಪಟ್ಟಿ ಶುದ್ಧೀಕರಣ ಮಾಡಿ

ಬೀದರ್: ರಾಜ್ಯ ವಿಧಾನಸಭೆಯ ಚುನಾವಣೆಗೆ ಜಿಲ್ಲೆಯನ್ನು ಅಣಿಗೊಳಿಸಲು ಸಿದ್ಧತೆ ನಡೆದಿದೆ. ಬೆಂಗಳೂರಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮತದಾರ ಪಟ್ಟಿಯಲ್ಲಿ ಅನೇಕ ಲೋಪಗಳಿರುವುದು ಪ್ರಸ್ತಾಪವಾಗಿದೆ. ಹೀಗಾಗಿ ಎಲ್ಲರೂ ಸೇರಿ ಮತದಾರ ಪಟ್ಟಿಯ ಶುದ್ಧೀಕರಣ ಮಾಡಬೇಕು. ಯಾವುದೇ ರೀತಿಯ ಲೋಪಗಳು ಉಳಿಯದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಸೂಚನೆ ನೀಡಿದರು.

‘ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಸೌಲಭ್ಯಗಳಿಲ್ಲದಿದ್ದರೆ ತಾಲ್ಲೂಕು ಪಂಚಾಯಿತಿ ಇಒ, ಗ್ರಾಮೀಣ ಅಭಿವೃದ್ಧಿ ವಿಭಾಗದ ಎಇಇ ಹಾಗೂ ಸೆಕ್ಟರ್‌ ಅಧಿಕಾರಿಗಳ ಸಮಿತಿ ಬುಧವಾರದೊಳಗೆ ಖರ್ಚು ವೆಚ್ಚ ಉಲ್ಲೇಖಿಸಿ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಮತದಾನಕ್ಕೆ ಅರ್ಹರಾದವರು ಶಾಲೆಗೆ ಬಂದು ಅರ್ಜಿ ಭರ್ತಿ ಮಾಡಲಿದ್ದಾರೆ ಎನ್ನುವ ಭ್ರಮೆಯಲ್ಲಿ ಹಿಂದಿನ ಬಾರಿ ಶೇಕಡ 70ರಷ್ಟು ಶಿಕ್ಷಕರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಮೌಲ್ಯಮಾಪನ ನಡೆಸಿದಾಗ ಆಯೋಗಕ್ಕೆ ಬಿಎಲ್‌ಒಗಳ ಕಾರ್ಯ ತೃಪ್ತಿ ತಂದಿಲ್ಲ. ಈ ಬಾರಿ ಸೆಕ್ಟರಲ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ’ ಎಂದು ಹೇಳಿದರು.

‘ಮತದಾನಕ್ಕೆ ಅರ್ಹರಾದವರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಅರ್ಜಿದಾರರಿಂದ ಇತ್ತೀಚಿನ ಚಿತ್ರಗಳನ್ನೇ ಪಡೆಯಬೇಕು. ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. 18 ವರ್ಷ ತುಂಬಿದ ಯಾರೊಬ್ಬರ ಹೆಸರು ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ನಮ್ಮ ಮರ್ಯಾದೆ ಉಳಿಸಿ’

ಬೀದರ್‌: ‘ಕಳೆದ ಎರಡು ಬಾರಿ ನಡೆದ ಸಭೆಗಳಲ್ಲಿ ಹಾಜರಾಗಿದ್ದೇನೆ. ಚುನಾವಣಾ ವಿಭಾಗದ ಲೋಪಗಳನ್ನು ಹೇಳಲು ಧೈರ್ಯ ಆಗಲಿಲ್ಲ. ಜಿಲ್ಲಾಧಿಕಾರಿ ಮುಂದೆ ಹೇಳಲು ಧೈರ್ಯ ಸಾಲದ್ದಕ್ಕೆ ಯೋಗ ಮಾಡಿಕೊಂಡು ಬಂದಿದ್ದೇನೆ. ತಾವು ಅನುಮತಿ ಕೊಟ್ಟರೆ ಮಾತು ಮುಂದುವರಿಸುತ್ತೇನೆ’ ಎಂದು ಶಿಕ್ಷಕರೊಬ್ಬರು ಮನವಿ ಮಾಡುವ ಮೂಲಕ ಸಭೆಯಲ್ಲಿ ನಗೆ ಉಕ್ಕಿಸಿದರು.

ಧೈರ್ಯದಿಂದ ಮಾತನಾಡಿ ಎಂದು ಜಿಲ್ಲಾಧಿಕಾರಿ ಅನುಮತಿ ನೀಡಿದರು. ‘ಇಲ್ಲಿಗೆ ಬರುವ ಮೊದಲು ಮನೆಯಲ್ಲೂ ಹೇಳಿ ಬಂದಿದ್ದೇನೆ. ಈಗ ನಿಮ್ಮೆದುರು ಹೇಳುತ್ತಿದ್ದೇನೆ. ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಮೂರು ವರ್ಷಗಳಿಂದ ಅದೇ ವ್ಯಕ್ತಿಗಳ ಹೆಸರು ತುಂಬಿ ಕೊಡುತ್ತಿದ್ದೇವೆ. ಆದರೆ, ಹೆಸರು ಸೇರಿಲ್ಲ. ಇವರ ಬಳಿ ಅರ್ಜಿ ಕೊಟ್ಟರೆ ಏನೂ ಆಗುವುದಿಲ್ಲ’ ಎಂದು ಗ್ರಾಮಸ್ಥರು ಮೂದಲಿಸುತ್ತಿದ್ದಾರೆ ಎಂದು ಹೇಳಿದರು.

‘ಈಗ ನಮ್ಮ ಮರ್ಯಾದೆ ಪ್ರಶ್ನೆ ಬಂದಿದೆ. ಅರ್ಜಿ ಕೊಟ್ಟ ತಿಂಗಳಲ್ಲಿ ಮತದಾರ ಗುರುತಿನ ಚೀಟಿ ಕೊಟ್ಟು ನಮ್ಮ ಮರ್ಯಾದೆ ಉಳಿಸಿ’ ಎಂದು ನಯವಾಗಿ ಮನವಿ ಮಾಡಿದರು.
ಶಿಕ್ಷಕರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ನಿಮ್ಮ ಮರ್ಯಾದೆ ಹೋಗಲು ಬಿಡೇವು. ಕಾಲಮಿತಿಯಲ್ಲಿ ಗುರುತಿನ ಕೊಟ್ಟು ಮರ್ಯಾದೆ ಉಳಿಸುತ್ತೇವೆ’ ಎಂದು ಹೇಳಿದಾಗ ಅಧಿಕಾರಿಗಳಲ್ಲಿ ನಗೆ ಉಕ್ಕಿತು.

* * 

ಬೀದರ್‌ ಹೊರ ವಲಯದಲ್ಲಿರುವ ರಾಜಗೊಂಡ ಕಾಲೊನಿಯಲ್ಲಿ ವಾಸವಾಗಿರುವ ಆದಿವಾಸಿಗಳಿಗೆ ಆಧಾರ್‌ ಕಾರ್ಡ್‌, ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ವಿಶೇಷ ಅಭಿಯಾನ ನಡೆಸಲಾಗುವುದು.
ಎಚ್‌.ಆರ್.ಮಹಾದೇವ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT