ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಸಾಧನೆಯ ಗುರಿ ಮುಖ್ಯ

Last Updated 14 ಜನವರಿ 2018, 9:01 IST
ಅಕ್ಷರ ಗಾತ್ರ

ಚಾಮರಾಜನಗರ: ‘ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟವಾದ ಗುರಿಯಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು. ನಗರದ ಬೇಡರಪುರ ಗ್ರಾಮದ ಸಮೀಪವಿರುವ ಡಾ.ಬಿ.ಆರ್. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ರಂಗವಾಹಿನಿ, ಅಂಬೇಡ್ಕರ್‌ ಸ್ನಾತಕೊತ್ತರ ಕೇಂದ್ರದಿಂದ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆದ ಜಿಲ್ಲಾ ಯುವಜನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನರೇ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವಜನರು ಕಠಿಣ ಪರಿಶ್ರಮದೊಂದಿಗೆ ಗುರಿ ತಲುಪಬೇಕು. ಸತತ ಅಭ್ಯಾಸದಲ್ಲಿ ತೊಡಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮುನ್ನ ಸರ್ಕಾರ ಅನುದಾನ ನೀಡಬೇಕು. ಉತ್ತಮ ಕಟ್ಟಡ ಹಾಗೂ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಆದರೆ, ಜಿಲ್ಲೆಯ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಕಟ್ಟಡವಿಲ್ಲದೆ ಇರುವುದು ರಾಜಕಾರಣಿಗಳು ತಲೆತಗ್ಗಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಕಾಲೇಜು ಸ್ಥಾಪನೆಗೆ ಮುಂದಾಗಬೇಕು ಎಂದು ತಿಳಿಸಿದರು.

ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್‌. ಜಯದೇವ ಮಾತನಾಡಿ, ಸ್ವಾಮಿ ವಿವೇಕಾನಂದರು ಸ್ತ್ರೀಯರಿಗೆ ಹೆಚ್ಚಿನ ಗೌರವ ನೀಡುತ್ತಿದ್ದರು. ‘ಸ್ತ್ರೀಯರ ಅಭಿವೃದ್ಧಿಗೆ ಯೋಚಿಸಬೇಡಿ, ಅವರಿಗೆ ಶಿಕ್ಷಣ ನೀಡಿ. ಅವರೇ ಅಭಿವೃದ್ಧಿಯಾಗುತ್ತಾರೆ’ ಎಂದು ಸ್ತ್ರೀಯರ ಶಿಕ್ಷಣಕ್ಕೆ ಆದ್ಯತೆ ನೀಡಿದರು ಎಂದರು.

ದೇಶದ ಜನಸಂಖ್ಯೆಯಲ್ಲಿ ಶೇ 60ರಷ್ಟು ಯುವಜನರಿದ್ದಾರೆ. ಅವರಲ್ಲಿ ಪ್ರಜ್ಞಾವಂತಿಕೆ, ಸ್ವಾಭಿಮಾನ ಹಾಗೂ ಆತ್ಮವಿಶ್ವಾಸ ಬೆಳೆದಾಗ ಮಾತ್ರ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ. ಆದರೆ, ಬಹುಪಾಲು ಯುವಜನತೆ ಜೊಳ್ಳಾಗಿದ್ದಾರೆ ಎಂದು ವಿಷಾದಿಸಿದರು.

ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ ಮಾತನಾಡಿ, ಗುಣಾತ್ಮಕ ಯುವಕರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಯುವಜನರು ಎಚ್ಚೆತ್ತುಕೊಳ್ಳಬೇಕು. ವಿವೇಕಾನಂದರ ಆದರ್ಶ ಪಾಲಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

‘ಮುಖ್ಯರಸ್ತೆಯಿಂದ ಕಾಲೇಜಿಗೆ ರಸ್ತೆ ನಿರ್ಮಾಣ ಮಾಡಿಸಬೇಕು. ರಸ್ತೆಯ ಹೆಬ್ಬಾಗಿಲ ಬಳಿ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೊತ್ತರ ಕೇಂದ್ರ ಎಂಬ ಕಮಾನು ನಿರ್ಮಿಸಬೇಕು. ಕಾಲೇಜಿನ ಹೆಸರನ್ನು ತಾಮ್ರದಲ್ಲಿ ಬರೆಯಿಸಬೇಕು. ಕಾಲೇಜು ಮುಂಭಾಗ ಉದ್ಯಾನ ನಿರ್ಮಿಸಬೇಕು. ಕಾಲೇಜಿನ ಆವರಣದಲ್ಲಿ ಅಂಬೇಡ್ಕರ್‌ ಪುತ್ಥಳಿ ನಿರ್ಮಿಸಬೇಕು’ ಎಂದು ಮನವಿ ಸಲ್ಲಿಸಿದರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಎಸ್‌. ಸಿದ್ದರಾಮಪ್ಪ ಹಾಜರಿದ್ದರು.

ಕನಸುಗಳೇ ಯಶಸ್ಸಿಗೆ ದಾರಿದೀಪ

ಚಾಮರಾಜನಗರ: ‘ಪ್ರತಿಯೊಬ್ಬರ ಜೀವನದ ಯಶಸ್ಸಿಗೆ ಕನಸುಗಳೇ ದಾರಿದೀಪ. ಈ ನಿಟ್ಟಿನಲ್ಲಿ ಯುವಜನತೆ ದೊಡ್ಡ ದೊಡ್ಡ ಕನಸು ಕಾಣುವ ಜತೆಗೆ, ಅವುಗಳನ್ನು ಸತತ ಪರಿಶ್ರಮದಿಂದ ನನಸಾಗಿಸಲು ಪ್ರಯತ್ನಿಸಬೇಕು’ ಎಂದು ಮೈಸೂರಿನ ಸಿದ್ಧಾರ್ಥ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಕೆ.ಎಂ. ಪ್ರಸನ್ನಕುಮಾರ್‌ ಸಲಹೆ ನೀಡಿದರು.

ಜಿಲ್ಲಾ ಯುವಜನ ಸಮಾವೇಶದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಕಾಣಲು ಕನಸು, ಸಮಯ ಪಾಲನೆ, ಶ್ರಮ, ಯೋಜನೆ ಹಾಗೂ ಕಠಿಣ ಪ್ರಯತ್ನಗಳು ಮುಖ್ಯವಾಗಿದೆ ಎಂದು ತಿಳಿಸಿದರು.

ಯಾವುದೇ ಒಬ್ಬ ವ್ಯಕ್ತಿಯ ಏಳಿಗೆ ಅಥವಾ ಅವನತಿಗೆ ಆತನೇ ಕಾರಣನಾಗಿರುತ್ತಾನೆ. ಆದರೆ, ಶೇ 60ರಷ್ಟು ಜನರು ತಮ್ಮ ಸೋಲಿಗೆ ಇತರರನ್ನು ಬೆರಳು ಮಾಡುತ್ತಾರೆ. ಇಂತಹ ಗುಣವನ್ನು ಯುವಜನರು ತ್ಯಜಿಸಬೇಕು. ತಮ್ಮ ಮನಸ್ಸಿನಲ್ಲಿ ಉಂಟಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕಿ ಯಶಸ್ಸಿನತ್ತ ಮುನ್ನುಗ್ಗಬೇಕು ಎಂದರು.

ವ್ಯಕ್ತಿಯು ಪರಿಪೂರ್ಣನಾಗಬೇಕಾದರೆ ಆತ ಮೊದಲು ತನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳವ ಜತೆಗೆ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಂಡು ಸಮರ್ಥವಾಗಿ ನಿಭಾಯಿಸಬೇಕು ಎಂದರು.

* * 

ವಿದ್ಯಾರ್ಥಿಗಳು ಅಂಬೇಡ್ಕರ್‌ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವ ಮೂಲಕ ಅವರ ಆದರ್ಶವನ್ನು ಪಾಲಿಸಬೇಕು.
ಆರ್. ಧ್ರುವನಾರಾಯಣ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT