ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರುಗದ ಸಂಕ್ರಾಂತಿ ತೇರು: ವಿಶೇಷ ಪೂಜೆಗೆ ಸಿದ್ಧತೆ

Last Updated 14 ಜನವರಿ 2018, 9:02 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ಸಂಭ್ರಮದ ಸಂಕ್ರಾಂತಿ ಚಿಕ್ಕ ರಥೋತ್ಸವ ಈ ಬಾರಿ ಜರುಗುವುದಿಲ್ಲ. ಜ.16ರ ಉತ್ಸವ ದೇವಳ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಆದರೆ, ರಂಗಪ್ಪನಿಗೆ ಧಾರ್ಮಿಕ ಕೈಂಕರ್ಯ, ಬ್ಯಾಟೆಮನೆ ಸೇವೆ, ದಾಸರ ಮತ್ತು ಭಕ್ತರ ಆಚರಣೆಗಳಿಗೆ ಅನುವು ಮಾಡಿಕೊಡಲಾಗಿದೆ.

ಮಕರ ಸಂಕ್ರಮಣದ ನಂತರದ ಅಮಾವಾಸ್ಯೆ ದಿನ ಚಿಕ್ಕತೇರಿಗೆ ಚಾಲನೆ ನೀಡಲಾಗುತ್ತಿತ್ತು. ಅಲಂಕೃತ ಚಿಕ್ಕರಥಕ್ಕೆ ಹೊಸ ಫಸಲಿನ ತೆನೆಗಳನ್ನು ಕಟ್ಟಿ, ಬೀಜ ಹಾಗೂ ನಾಣ್ಯ ಚೆಲ್ಲುತ್ತಾ ಗ್ರಾಮೀಣರು ಹರಕೆ ತೀರಿಸುತ್ತಿದ್ದರು. ಕಬ್ಬು, ಬಾಳೆ ಹಾಗೂ ಹೂಗಳಿಂದ ಸಿಂಗರಿಸಿದ ರಥವನ್ನು ಸಾವಿರಾರು ಜನರು ಕಣ್ತುಂಬಿಕೊಳ್ಳುತ್ತಿದ್ದರು.

‘ದೇವಾಲಯ ನಿರ್ಮಾಣ ಕಾಮಗಾರಿ ತ್ವರಿತವಾಗಿ ಸಾಗಿದೆ. ಹಾಗಾಗಿ, ಪ್ರಸಕ್ತ ಸಾಲಿನಲ್ಲಿ ತೇರಿನ ಸಿದ್ಧತೆ ಮಾಡಿಕೊಳ್ಳಲಾಗಿಲ್ಲ. ಆದರೆ, ಭಕ್ತರ ಆರಾಧನೆ ಮತ್ತು ಪೂಜಾ ಕಾರ್ಯಕ್ರಮ ನಡೆಯುತ್ತವೆ. ನೀರು, ಶೌಚಾಲಯ ಮೊದಲಾದ ಸೌಲಭ್ಯವನ್ನು ಭಕ್ತಾಧಿಗಳಿಗೆ ಕಲ್ಪಿಸಲಾಗಿದೆ’ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ದೇವಾಲಯದ ಕಾರ್ಯ ನಿರ್ವಾಕಾಧಿಕಾರಿ ಎಸ್.ಎಂ. ವೆಂಕಟೇಶ ಪ್ರಸಾದ್ ಮಾತನಾಡಿ ‘ಯಳಂದೂರು ಮತ್ತು ಜಿಲ್ಲಾ ಕೇಂದ್ರದಿಂದ ಬಸ್‌ ವ್ಯವಸ್ಥೆ ಇದೆ. ಆರೋಗ್ಯ ಮತ್ತು ಸ್ವಚ್ಛತೆಗೆ ಮನ್ನಣೆ ನೀಡಲಾಗಿದೆ. ದೇವರ ದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ. ಹರಕೆ ಹೊತ್ತವರು ಅರವಟ್ಟಿಗೆ ನಡೆಸುತ್ತಾರೆ. ಏಕಾದಶಿ ಆಚರಣೆಗೂ ಮನ್ನಣೆ ನೀಡಲಾಗಿದೆ’ ಎಂದರು.

ಮಂಗಳವಾರ ಸರಳವಾಗಿ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಮುಂಜಾನೆ 7ರಿಂದ ಸಂಜೆತನಕ ಹೋಮ, ಹೂವಿನ ಅಲಂಕಾರ ಹಾಗೂ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ ಎಂದು ಅರ್ಚಕರು ಮಾಹಿತಿ ನೀಡಿದರು.

ಸೂರ್ಯರಶ್ಮಿ ಪ್ರವೇಶ: ಮಕರ ಸಂಕ್ರಮಣದಂದು ಜನಪದರು ಹೊಲ ಗದ್ದೆಗಳಲ್ಲಿ ಬೆಳೆದ ಫಸಲನ್ನು ರಾಶಿ ಮಾಡಿ ನೈವೇದ್ಯ ಮಾಡುತ್ತಾರೆ. ಸಗಣಿಯಿಂದ ಮಾಡಿದ ದೇವರನ್ನು ಪೂಜಿಸುತ್ತಾರೆ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣವನ್ನು ಪ್ರವೇಶಿಸುವ ದಿನದಂದು ದೇವಾಲಯಗಳಲ್ಲಿ ನೇಸರನ ಬೆಳಕಿನ ಕಿರಣ ಸ್ಪರ್ಶಿಸುವ ಮೂಲಕ ಸಂಕ್ರಾಂತಿ ಸಡಗರ ಗರಿಗೆದರುತ್ತದೆ.

ಹೆಣ್ಣುಮಕ್ಕಳ ಸಡಗರ: ಹಳ್ಳಿಗಳಲ್ಲಿ ಒಕ್ಕಣೆ, ಹೊಲಗಳಲ್ಲಿ ದುಡಿದು ದಣಿದ ರಾಸುಗಳಿಗೆ ಹರಿಸಿನ, ಕುಂಕುಮ ಹಚ್ಚಿ ಕಿಚ್ಚು ಹಾಯಿಸುತ್ತಾರೆ. ಹೆಣ್ಣು ಮಕ್ಕಳು ಎಳ್ಳು, ಕಬ್ಬು, ತಾಂಬೂಲ, ಸಕ್ಕರೆ ಅಚ್ಚುಗಳನ್ನು ಹಿಡಿದು ಮನೆ ಮನೆಗೆ ಹಂಚುವ ಮೂಲಕ ಹಬ್ಬದ ಕಳೆ ರಂಗೇರಿಸುತ್ತಾರೆ.

ಪೂಜೆಗೆ ಅವಕಾಶ: ವರ್ಷಾಂತ್ಯಕ್ಕೆ ಬೆಟ್ಟದಲ್ಲಿ ಹೊಸತೇರು, ದೇವಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ನಂತರ ಜಾತ್ರಾ ವೈಭವವನ್ನು ಭಕ್ತರು ಕಣ್ತುಂಬಿಕೊಳ್ಳಬಹುದು ಎನ್ನುತ್ತಾರೆ ಶಾಸಕ ಎಸ್. ಜಯಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT