ಗಡಿ ತಾಲ್ಲೂಕಿನ ನುಡಿಜಾತ್ರೆಗೆ ತೆರೆ

5

ಗಡಿ ತಾಲ್ಲೂಕಿನ ನುಡಿಜಾತ್ರೆಗೆ ತೆರೆ

Published:
Updated:
ಗಡಿ ತಾಲ್ಲೂಕಿನ ನುಡಿಜಾತ್ರೆಗೆ ತೆರೆ

ಗುಂಡ್ಲುಪೇಟೆ: ‘ಪಂಪನ ಕಾಲದಿಂದಲೂ ಕನ್ನಡ ತೇರನ್ನು ಎಳೆಯುತ್ತಿದ್ದೇವೆ. ಈ ನಾಡಿನಲ್ಲಿ ಮುಂದೆಯೂ ಯಾವುದೇ ಚ್ಯುತಿ ಬಾರದಂತೆ ತೇರನ್ನು ಎಳೆಯಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ’ ಎಂದು ಶರಣ ತತ್ವ ಚಿಂತಕ ದೇವನೂರು ಶಂಕರ್ ಹೇಳಿದರು. ಪಟ್ಟಣದ ಗುರುಭವನದಲ್ಲಿ ನಡೆದ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ನೆಲದಲ್ಲಿ ಹುಟ್ಟಿದ್ದೇವೆ. ಇಲ್ಲಿನ ಫಲವನ್ನು ಅನುಭವಿಸಿದ್ದೇವೆ. ನಮ್ಮ ಜೀವನವನ್ನು ನಾಡು ನುಡಿಗಾಗಿ ಸಮರ್ಪಿಸಿಕೊಳ್ಳಬೇಕು. ನಮ್ಮ ಬದುಕಿಗೆ ಬೇಕಾದ ಪರಂಪರೆಯ ಪಾಠ ಸಾಹಿತ್ಯ, ಕಲೆಗಳಲ್ಲಿದೆ. ಅವುಗಳನ್ನು ಜೀವದಾಯಕವಾಗಿ ಬಳಸಿಕೊಳ್ಳಬೇಕು ಎಂದರು.

ಕಾಡು–ಮೇಡು, ಪ್ರಾಣಿ ಪಕ್ಷಿಗಳು ಇರುವ ತನಕ ಮಾತ್ರ ಮಾನವನಿಗೆ ಬೆಲೆ. ಅವುಗಳನ್ನು ಕಳೆದುಕೊಂಡರೆ ಮಾನವನ ಅಸ್ತಿತ್ವವೇ ನಾಶವಾಗುತ್ತದೆ. ಹಿಂದೆ ಶರಣ ಸಂತರು ನಿಸರ್ಗದ ಜೊತೆಗೆ ಬದುಕುತ್ತಿದ್ದರು. ನಾವು ಅದರಿಂದ ದೂರವಾಗುತ್ತಿದ್ದೇವೆ ಎಂದು ವಿಷಾದಿಸಿದರು.

ಮಾತೃಭಾಷೆಯನ್ನು ಮಕ್ಕಳಿಗೆ ಕಲಿಸಬೇಕು. ವಿದೇಶಗಳಲ್ಲಿ ವಾಸವಾಗಿರುವ ಕನ್ನಡಿಗರ ಮಕ್ಕಳಿಗೆ ಕನ್ನಡವೇ ಬರುವುದಿಲ್ಲ. ಆ ಮಕ್ಕಳು ಇಲ್ಲಿಗೆ ಬಂದರೆ ತಮ್ಮ ತಾತಾ ಅಜ್ಜಿಯರ ಜೊತೆ ಮಾತನಾಡುವ ಅವಕಾಶವನ್ನು ಕಳೆದುಕೊಳ್ಳುತ್ತವೆ. ಇದರಿಂದ ಮಕ್ಕಳ ಮಾತೃಭಾಷೆಯನ್ನೇ ಕಸಿದುಕೊಂಡಂತಾಗುತ್ತದೆ. ಮಕ್ಕಳಿಗೆ ಕನ್ನಡದ ಬಗ್ಗೆ ಸಾಹಿತ್ಯದ ಬಗ್ಗೆ ತಿಳಿಸಿ, ಕನ್ನಡದಿಂದಲೂ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂಬುದಕ್ಕೆ ನಾನೇ ಉದಾಹರಣೆ ಎಂದರು.

ಭಾಷೆ ಒಂದು ಜನಾಂಗದ ನುಡಿಯಲ್ಲ. ಅದು ಜೀವನ ಪ್ರೀತಿ. ಮನುಷ್ಯ ದೀರ್ಘಕಾಲ ಬದುಕಿದ ಮಾತ್ರಕ್ಕೆ ಬದುಕು ಸಾರ್ಥಕವಾಗುವುದಿಲ್ಲ. ತಮ್ಮ ನಾಡು, ನುಡಿಗೆ ಹೇಗೆ ಉಪಯೋಗವಾಗಿದ್ದಾರೆ ಎಂಬುದರ ಮೇಲೆ ಸಾರ್ಥಕತೆ ನಿರ್ಧಾರವಾಗುತ್ತದೆ. ತಮ್ಮ ಬದುಕನ್ನು ಕಾವ್ಯದ ಜೊತೆಗೆ ಬೆರೆತು ಜೀವಿಸಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ಎಚ್.ಎಂ. ಪೃಥ್ವಿರಾಜ್ ಅಭಿನಂದನಾ ನುಡಿಯನ್ನಾಡಿದರು. ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಜಿ. ಮಂಜುನಾಥ್, ಚಾಮುಲ್

ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ವಿನಯ್, ಗೌರವ ಕಾರ್ಯದರ್ಶಿ ಗುರುಪ್ರಸಾದ್ ಕೊಡಗಪುರ, ಛಾಯಾಗ್ರಾಹಕ ಆರ್.ಕೆ. ಮಧು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry