ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಆತ್ಮವಿಶ್ವಾಸದಿಂದ ಮುನ್ನುಗ್ಗಿ

ಪರೀಕ್ಷಾ ಕಾರ್ಯಾಗಾರ, ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ.ಸೋಮೇಶ್ವರ ಕಿವಿಮಾತು
Last Updated 14 ಜನವರಿ 2018, 9:04 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಆತ್ಮವಿಶ್ವಾಸದಿಂದ ಮುನ್ನಡೆದರೆ ಯಾವುದೇ ಪರೀಕ್ಷೆಗೂ ಭಯ ಪಡುವ ಅವಶ್ಯವಿಲ್ಲ’ ಎಂದು ‘ಥಟ್ ಅಂತ ಹೇಳಿ' ಖ್ಯಾತಿಯ ಡಾ.ನಾ.ಸೋಮೇಶ್ವರ ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವರಾಜ ಪಾಟೀಲ ಫೌಂಡೇಷನ್ ಹಾಗೂ ವಿದ್ಯಾರ್ಥಿ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಲಭ್ಯ ಇರುವ ಸಮಯವನ್ನು ಸದುಪಯೋಗ ಪಡಿಸಿಕೊಂಡಲ್ಲಿ ಖಂಡಿತ ನಿರೀಕ್ಷೆಗೂ ಹೆಚ್ಚು ಅಂಕ ಪಡೆಯಬಹುದು’ ಎಂದು ಸಲಹೆ ನೀಡಿದರು.

‘ಪರೀಕ್ಷೆಗೆ ಅಲ್ಪವೇ ಸಮಯ ಉಳಿದಿದೆ ಎಂದು ಆತಂಕಕ್ಕೆ ಒಳಗಾಗಬೇಡಿ. ಲಭ್ಯ ಕಾಲಾವಕಾಶವನ್ನು ವೇಳಾಪಟ್ಟಿಯ ಸಹಾಯದಿಂದ ಸರಿಯಾಗಿ ವಿಭಜಿಸಿಕೊಳ್ಳಬೇಕು. ಭಯದಿಂದ ಹೊರಬಂದು ಪರೀಕ್ಷೆಗೆ ತಯಾರಿ ನಡೆಸಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಅವರು ಹೇಳಿದರು.

‘ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಇಂತಹ ಶೈಕ್ಷಣಿಕ ಚಟುವಟಿಕೆಗಳು ರಾಜ್ಯಮಟ್ಟದಲ್ಲೂ ನಡೆಸಬೇಕು. ಮಕ್ಕಳಲ್ಲಿ ಮನಸ್ಥೈರ್ಯ ತುಂಬುವ ಕೆಲಸವಾದರೆ ಪ್ರಬಲ ನಾಗರಿಕರನ್ನು ಸಮಾಜಕ್ಕೆ ನೀಡಲು ಸಾಧ್ಯವಿದೆ’ ಎಂದು ಹೇಳಿದರು.

ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚನ್ನಾರೆಡ್ಡಿ ಪಾಟೀಲ ಮಾತನಾಡಿ, ‘ಮಕ್ಕಳಲ್ಲಿರುವ ಚಲನಶೀಲ ಮತ್ತು
ಪ್ರಾಂಜಲ ಮನಸ್ಸು ಸಮಾಜದ ಬಹುದೊಡ್ಡ ಆಸ್ತಿಯಾಗಿದೆ. ಅದನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಕೆಲಸ ಶಾಲಾ- ಕಾಲೇಜು ಹಂತದಲ್ಲಿ ಆಗಬೇಕು’ ಎಂದು ಹೇಳಿದರು.

‘ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಕೌಶಲ ಸಮಾಜದ ಕಲ್ಯಾಣಕ್ಕಾಗಿ ಬಳಕೆಯಾಗಬೇಕು. ಇದರಿಂದ ಪ್ರಗತಿಯ ವೇಗ ಬದಲಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ರಸಪ್ರಶ್ನೆ ಸ್ಪರ್ಧೆಗಳಿಂದ ಕ್ಷಣಾರ್ಧದಲ್ಲಿ ನಿರ್ಧಾರ ಕೈಗೊಳ್ಳುವ ಗುಣ ಬೆಳೆಯುತ್ತದೆ. ಇದರಿಂದ ಮಕ್ಕಳು ಐಎಎಸ್, ಐಪಿಎಸ್‌ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದಾಗಿದೆ’ ಎಂದರು. ‘ಸತ್ಪುರುಷರ ಯಶೋಗಾಥೆಗಳನ್ನು ಓದುವುದರಿಂದ ಅವರ ಚಾರಿತ್ರ್ಯ ನಮ್ಮಲ್ಲೂ ಬೆಳೆಯುತ್ತದೆ. ಉತ್ತಮ ಸಾಹಿತ್ಯ ಕೃತಿ ಮತ್ತು ವಿಜ್ಞಾನಿಗಳ ಸಾಧನೆ ಒಳಗೊಂಡ ಪುಸ್ತಕಗಳನ್ನು ಓದಬೇಕು’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಪ್ರಕಾಶ ನಾಯ್ಕೋಡ, ಜಸ್ಟಿಸ್ ಶಿವರಾಜ್ ಪಾಟೀಲ ಕಾಲೇಜಿನ ಪ್ರಾಂಶುಪಾಲರಾದ ಆರ್.ಬಿ. ವಿನೂತಾ, ಸರ್ವಜ್ಞ ಕಾಲೇಜು ಉಪ ಪ್ರಾಂಶುಪಾಲ ಪ್ರಶಾಂತ ಕುಲಕರ್ಣಿ, ಗುರುರಾಜ್ ಕುಲಕರ್ಣಿ, ಕರುಣೇಶ್ ಹಿರೇಮಠ ಇದ್ದರು. ಸ್ಪರ್ಧೆಯ ವಿಜೇತರಿಗೆ ₹11 ಸಾವಿರ(ಪ್ರಥಮ), ₹5,000(ದ್ವಿತೀಯ) ಹಾಗೂ ₹3,000(ತೃತೀಯ) ನಗದು ಬಹುಮಾನ ವಿತರಿಸಲಾಯಿತು.
***
ಸ್ಪರ್ಧೆಯ ವಿಜೇತರು
ಸ್ವಾಮಿ ನಾರಾಯಣ ಗುರುಕುಲ ಇಂಟರ್‌ನ್ಯಾಷನಲ್ ಶಾಲೆಯ ಅಂಕೂರ್ ಕುಮಾರ್, ಪ್ರಸನ್ನ, ಆದಿತ್ಯಪ್ರತಾಪ್ ಸಿಂಗ್ (ಪ್ರಥಮ), ಅಪ್ಪ ಪಬ್ಲಿಕ್ ಶಾಲೆಯ ಅಬ್ದುಲ್ ರಹೀಮ್, ರೋಹಿತ್ ಹಂಚನಾಳ, ಎ.ಅನನ್ಯ (ದ್ವಿತೀಯ), ಸೇಂಟ್ ಮೇರಿ ಶಾಲೆಯ ನಸೀರುದ್ದಿನ್, ಲಕ್ಷ್ಮಿ ಮಾಲಿಪಾಟೀಲ, ಜೀಶಾನ್ ಮತ್ತು ಎಸ್‍ಆರ್‍ಎನ್ ಮೆಹತಾ ಶಾಲೆಯ ಭಾವನಾ ಕುಲಕರ್ಣಿ, ವರ್ಷಿಣಿ ಮಾನೆ, ಸುಮೀತ್ ಮೈನಾಳ (ತೃತೀಯ) ಸ್ಥಾನ ಗಳಿಸಿದರು.
***
ಪರೀಕ್ಷೆ ಸಮಯದಲ್ಲಿ ಮಕ್ಕಳಲ್ಲಿ ಆತಂಕ ಸಹಜ. ಇದನ್ನು ಪೋಷಕರು ಅರಿಯಬೇಕು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಸಕಾರಾತ್ಮಕ ಗುಣಗಳನ್ನು ಅವರಲ್ಲಿ ಬೆಳೆಸಬೇಕು.
- ನಾ.ಸೋಮೇಶ್ವರ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT