ಚಳಿಗಾಲದಲ್ಲೇ ಕಲ್ಲಂಗಡಿ ಹಣ್ಣು ದಾಂಗುಡಿ

7

ಚಳಿಗಾಲದಲ್ಲೇ ಕಲ್ಲಂಗಡಿ ಹಣ್ಣು ದಾಂಗುಡಿ

Published:
Updated:
ಚಳಿಗಾಲದಲ್ಲೇ ಕಲ್ಲಂಗಡಿ ಹಣ್ಣು ದಾಂಗುಡಿ

ಚಿಂತಾಮಣಿ: ಚಳಿಗಾಲ ಮುಗಿಯುವ ಮುನ್ನವೇ ನಗರದಲ್ಲಿ ಕಲ್ಲಂಗಡಿ ಮಾರುಕಟ್ಟೆಗೆ ಬಂದಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟ ಕಲ್ಲಂಗಡಿ ಹಣ್ಣಿನ ಅಂಗಡಿಗಳು ಜನರನ್ನು ಆಕರ್ಷಣೆಯ ಕೇಂದ್ರಗಳಾಗಿವೆ.

ಸಾಮಾನ್ಯವಾಗಿ ಶಿವರಾತ್ರಿಯ ನಂತರ ಬಿಸಿಲಿನ ತಾಪ ಹೆಚ್ಚುತ್ತದೆ. ಬಿಸಿಲಿನ ಝಳ, ಸೆಕೆ ಕಾಲದಲ್ಲಿ ಕಲ್ಲಂಗಡಿ ಮತ್ತಿತರ ಹಣ್ಣಿನ ಅಂಗಡಿಗಳು ರಸ್ತೆ ಬದಿಗೆ ತಲೆ ಎತ್ತುವುದು ರೂಢಿ. ಹೋದ ವರ್ಷ ಜನವರಿಯಲ್ಲಿ ಕೊನೆಗೆ ಅಂಗಡಿಗಳು ಆರಂಭವಾಗಿದ್ದರೆ. ಈ ಬಾರಿ ಡಿಸೆಂಬರ್‌ನಲ್ಲಿಯೇ ಅಂಗಡಿಗಳು ತೆರೆದುಕೊಂಡು ಗಮನ ಸೆಳೆಯುತ್ತವೆ.

ಬೆಂಗಳೂರು ರಸ್ತೆಯಲ್ಲಿ 3–4 ಕಡೆ ಬೀದಿ ಬದಿಯಲ್ಲಿ ಹಣ್ಣಿನ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಕೋಲಾರ ಮತ್ತು ಶಿಡ್ಲಘಟ್ಟ ರಸ್ತೆಯಲ್ಲೂ ಕಲ್ಲಂಗಡಿಗಳು ಅಂಗಡಿಗಳು ತಲೆ ಎತ್ತಿವೆ. ಪಾದಚಾರಿಗಳು ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಕಲ್ಲಂಗಡಿ ಸೇವನೆ ಮಾಡುವುದರ ಮೂಲಕ ಬಿಸಿಲಿನ ಬೇಗುದಿಯಿಂದ ಸುಧಾರಿಸಿಕೊಳ್ಳುತ್ತಾರೆ.

ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲದೆ ಕೊಳವೆ ಬಾವಿ ಆಧಾರದಿಂದ ಕೃಷಿ ಚಟುವಟಿಕೆ ನಡೆಯುತ್ತಿವೆ. 5–6 ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ ಕೆರೆ ಕುಂಟೆಗಳಲ್ಲಿ ನೀರನ್ನು ಕಾಣುತ್ತಿರಲಿಲ್ಲ. ಕೊಳವೆ ಬಾವಿಗಳಲ್ಲೂ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿತ್ತು. ಈ ವರ್ಷ ಉತ್ತಮವಾಗಿ ಮಳೆಯಾಗಿದ್ದರೂ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯುವುದು ಅಪರೂಪವಾಗಿದೆ. ರೈತರು ಕಲ್ಲಂಗಡಿ ಬದಲಾಗಿ ಟೊಮೆಟೊ, ಕ್ಯಾರೆಟ್‌ ಮತ್ತಿತರ ತರಕಾರಿ ಬೆಳೆಗಳಿಗೆ ಮಾರುಹೋಗಿದ್ದಾರೆ.

ಈ ವರ್ಷ ನಗರಕ್ಕೆ ಆಂಧ್ರಪ್ರದೇಶದ ನಾಯ್ಡುಪೇಟೆ, ತಮಿಳುನಾಡಿನ ದಿಂಡಿವಾರು, ಸತ್ಯವೀಡು ಹಾಗೂ ರಾಜ್ಯದ ಶಿವಮೊಗ್ಗ ಕಡೆಯಿಂದ ಕಲ್ಲಂಗಡಿ ಹಣ್ಣುಗಳು ಸರಬರಾಜಾಗುತ್ತಿವೆ. ಪ್ರತಿ 4 ದಿನಕ್ಕೆ ಒಂದು ಲೋಡ್‌ (10 ಟನ್‌) ನಗರಕ್ಕೆ ಸರಬರಾಜಾಗುತ್ತಿದೆ ಎಂದು ವ್ಯಾಪಾರಿಗಳು ಮಾಹಿತಿ ನೀಡುತ್ತಾರೆ.

ಚಿಲ್ಲರೆಯಾಗಿ ಕೆ.ಜಿ.ಗೆ ₹ 25ಕ್ಕೆ ಮಾರಾಟವಾಗುತ್ತಿದೆ. ಜತೆಗೆ ಅಂಗಡಿಯಲ್ಲಿ ಕತ್ತರಿಸಿ ಹಣ್ಣಿನ ಹೋಳುಗಳನ್ನು ನೀಡುತ್ತಾರೆ. ಜನರು ಗುಂಪು ಗುಂಪಾಗಿ ಬಂದು ಹಣ್ಣಿನ ಹೋಳುಗಳನ್ನು ತಿನ್ನುವರು. ಪ್ರತಿ ಹೋಳಿಗೆ ₹ 10ಕ್ಕೆ ಮಾರಾಟವಾಗುತ್ತಿದ್ದು, ವ್ಯಾಪಾರವೂ ಜೋರಾಗಿದೆ. ಬಯಲು ಸೀಮೆಯ ಹಾಗೂ ಸದಾ ಬರಗಾಲದ ವ್ಯಾಪ್ತಿಯಲ್ಲಿ ಬರುವ ಚಿಂತಾಮಣಿ ನಗರ ಹಾಗೂ ತಾಲ್ಲೂಕಿನಲ್ಲಿ ಕಲ್ಲಂಗಡಿಗೆ ಹೆಚ್ಚಿನ ಬೇಡಿಕೆ ಇದೆ.

ಬಿಸಿಲಿಗೆ ಪದೇ ಪದೇ ನೀರು ಕುಡಿಯುವುದು ಸಾಮಾನ್ಯ. ಕುಡಿದ ನೀರು ಬೆವರಿನ ಮೂಲಕ ಹೊರ ಹೋಗುತ್ತದೆ. ಬೆವರು ಹೊರ ಹೋದಂತೆ ಶರೀರ ಒಣಗುತ್ತದೆ. ದೇಹ ಬಳಲಿ ಬೆಂಡಾಗಿ ಸುಸ್ತು ಮಾಡಿಬಿಡುತ್ತದೆ. ದಣಿದ ಶರೀರ ಮತ್ತು ಮನಸ್ಸುಗಳಿಗೆ ಊಟ ಬೇಡವಾಗಿ ತಂಪು ಪಾನೀಯಗಳ ಕಡೆಗೆ ಗಮನ ಹರಿಯುತ್ತದೆ. ಎಳನೀರು, ಮಜ್ಜಿಗೆ, ವಿವಿಧ ಹಣ್ಣಿನ ರಸಗಳ ಕಡೆಗೆ ಮನಸ್ಸು ಹರಿಯುತ್ತದೆ. ಹಣ್ಣು ಹಾಗೂ ಹಣ್ಣಿನ ರಸ ಶರೀರಕ್ಕೆ ತಂಪು ಕೊಡುವುದರ ಜತೆಗೆ ಸ್ವಲ್ಪ ಮಟ್ಟಿಗೆ ಶಕ್ತಿ ನೀಡುತ್ತದೆ. ಅದರಿಂದಾಗಿಯೇ ಹೆಚ್ಚಿನ ಜನರು ಹಣ್ಣಿನ ರಸ ಸೇವಿಸುತ್ತಾರೆ. ಇತರೆ ಎಲ್ಲ ಹಣ್ಣಗಳಿಗಿಂತಲೂ ಕಲ್ಲಂಗಡಿ ಹೆಚ್ಚಿನ ತಂಪು ಹಾಗೂ ನೀರಿನ ಅಂಶವನ್ನು ಒದಗಿಸುವುದರಿಂದ ಜನರು ಮುಗಿಬೀಳುತ್ತಾರೆ. ಆದರೆ ರಸ್ತೆ ಬದಿಯಲ್ಲಿ ಕತ್ತರಿಸಿ ಮಾರುವ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರು ಸಲಹೆ ನೀಡುವರು.

ನಗರದ ಬಹುತೇಕ ಕಡೆಗಳಲ್ಲಿ ಕತ್ತರಿಸಿ ಮಾರಾಟ ಮಾಡುವುದು ಸಾಮಾನ್ಯವಾಗಿದೆ. ರೋಗ ಹರಡುವ ನೊಣಗಳು ಹಾಗೂ ಇತರ ಕೀಟಗಳು ಸಿಹಿಗಾಗಿ ಕತ್ತರಿಸಿ ಹಣ್ಣಿಗೆ ಮುತ್ತಿಕೊಳ್ಳುತ್ತವೆ. ಜತೆಗೆ ದೂಳು ಮೆತ್ತಿಕೊಳ್ಳುತ್ತದೆ. ಇಂತಹ ಹಣ್ಣನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕತ್ತರಿಸಿದ ಹಣ್ಣುಗಳನ್ನು ಮುಚ್ಚಿಟ್ಟ ಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡುವುದು ಸೂಕ್ತ ಎಂದೂ ವೈದ್ಯರು ಹೇಳುವರು.

* * 

ಜನರು ಗಂಟಲು ತಣಿಸಿಕೊಳ್ಳಲು ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದು ಸಾಮಾನ್ಯವಾಗಿದೆ. ಬಿಸಿಲು ಏರಿದಂತೆ ಬೇಡಿಕೆಯೂ ಹೆಚ್ಚುತ್ತಿದೆ. ಕೊಳ್ಳುವವರ ಹಾಗೂ ತಿನ್ನುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಆಂಧ್ರಪ್ರದೇಶದಿಂದ ಹಣ್ಣುಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಈಗೀಗ ವ್ಯಾಪಾರ ಆರಂಭವಾಗಿದೆ. ಜನರು ಬಿಸಿಲೇರಿದಂತೆ ಧಾವಿಸಿ ಬರುತ್ತಿದ್ದಾರೆ. ದಿನೇ ದಿನೇ ವ್ಯಾಪಾರ ಅಧಿಕವಾಗುತ್ತಿದೆ

ಸತೀಶ್‌ ಅಂಗಡಿ ಮಾಲೀಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry