ದೌರ್ಜನ್ಯದ ಬಗ್ಗೆ ಸಂಸದರು ಮೌನವೇಕೆ

7

ದೌರ್ಜನ್ಯದ ಬಗ್ಗೆ ಸಂಸದರು ಮೌನವೇಕೆ

Published:
Updated:

ನರಸಿಂಹರಾಜಪುರ: ಜಿಲ್ಲೆಯ ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಹಾಗೂ ಶೃಂಗೇರಿಯ ದಲಿತ ಮಹಿಳೆಯ ಮೇಲೆ ಬಿಜೆಪಿ ಮುಖಂಡ ಮಾಡಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಧ್ವನಿ ಎತ್ತುತ್ತಿಲ್ಲ ಎಂದು ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಬಡ ಹೆಣ್ಣು ಮಕ್ಕಳ ಮೇಲೆ ಬಿಜೆಪಿ ಮತ್ತು ಸಂಘ ಪರಿವಾರದವರು ದೌರ್ಜನ್ಯ ನಡೆಸಿದ್ದು, ಈ ಬಗ್ಗೆ ಸಂಸದೆ ಮೌನವಹಿಸಿರುವುದು ಏಕೆ? ಧನ್ಯಶ್ರೀ ಹಾಗೂ ಶೃಂಗೇರಿಯ ದಲಿತ ಮಹಿಳೆ ಹೆಣ್ಣಲ್ಲವೇ? ಎಂದು ಪ್ರಶ್ನಿಸಿದರು.

ಕ್ಷುಲ್ಲಕ ವಿಚಾರಗಳ ಬಗ್ಗೆ ಅಪ ಪ್ರಚಾರ ಮಾಡಿ ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸವನ್ನು ಸಂಸದರು ಮಾಡುತ್ತಿದ್ದಾರೆ. ಮಹಿಳಾ ಸಮಾಜಕ್ಕೆ ಅಗೌರವ ತೋರಿಸುತ್ತಿರುವ ಶೋಭಾ ಕರಂದ್ಲಾಜೆ, ಶಾಸಕ ಜೀವರಾಜ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮಲೆನಾಡಿನಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವ ಸಂಘ ಪರಿವಾರದವರ ನಿಲುವನ್ನು ಖಂಡಿಸುತ್ತೇವೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ‘ಶೃಂಗೇರಿಯ ದಲಿತ ಮಹಿಳೆಯ ಮೇಲೆ ಬಿಜೆಪಿ ಮುಖಂಡ ಅತ್ಯಾಚಾರ ನಡೆಸಿದರೂ ಶಾಸಕರು ಮೌನ ವಹಿಸಿರುವುದೇಕೆ? ಬಿಜೆಪಿ ಆಡಳಿತದ ಅವಧಿಯಲ್ಲಿ ಅವರ ಕೆಲವು ಮಂತ್ರಿಗಳು ಮತ್ತು ಶಾಸಕರ ಮೇಲೂ ಅತ್ಯಾಚಾರದ ಪ್ರಕರಣ ದಾಖಲಾಗಿತ್ತು’ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಕಾಂತರಾಜ್ ಮಾತನಾಡಿ, ಹೆಣ್ಣು ಮಕ್ಕಳ ಜೀವಕ್ಕೆ ಬೆಲೆ ನೀಡದೆ ಬೆದರಿಕೆ ಹಾಕಿ ಅವರು ಜೀವಹಾನಿ ಮಾಡಿಕೊಳ್ಳುವಂಹ ಕೆಲಸವನ್ನು ಬಿಜೆಪಿ, ಸಂಘ ಪರಿವಾರದರು ಮಾಡುತ್ತಿದ್ದಾರೆ ಎಂದರು.

ಮುಖಂಡರಾದ ಎಲ್ದೋ, ಸೇವಿಯಾರ್, ಬಿ.ಎಸ್.ಸುಬ್ರಹ್ಮಣ್ಯ, ಸುಜಿತ್ ಮಾತನಾಡಿದರು. ಉಪೇಂದ್ರ, ಅಬೂಬಕ್ಕರ್, ಕಿರಣ್, ಪಾಪಚ್ಚ, ಲಲಿತ, ಅಂಜುಮ್,ಮೇಘ, ಸುನಿಲ್ ಭಾಗವಹಿಸಿದ್ದರು. ತಾಲ್ಲೂಕು ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ನಡೆಸಿ ನೀರಿನ ಟ್ಯಾಂಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry