‘ತಪಸ್ವಿಗಳಿಂದ ಭಾರತೀಯ ಸಂಸ್ಕೃತಿ ಶ್ರೀಮಂತ’

7
ಜಾತಿ, ಮತ, ಪಂಥ ಮೀರಿ ಬೆಳೆದ ಮುಗಳಖೋಡ ಮಠ: ರಾಜನಾಥ ಸಿಂಗ್‌ ಅಭಿಮತ

‘ತಪಸ್ವಿಗಳಿಂದ ಭಾರತೀಯ ಸಂಸ್ಕೃತಿ ಶ್ರೀಮಂತ’

Published:
Updated:
‘ತಪಸ್ವಿಗಳಿಂದ ಭಾರತೀಯ ಸಂಸ್ಕೃತಿ ಶ್ರೀಮಂತ’

ಮುಗಳಖೋಡ: ಭಾರತೀಯ ಸಂಸ್ಕೃತಿ, ಪರಂಪರೆಗೆ ದಕ್ಷಿಣ ಭಾರತದ ಕೊಡುಗೆ ಅಪಾರವಾಗಿದೆ. ಶಂಕರಾಚಾರ್ಯರು, ರಾಮಾನುಜಾಚಾರ್ಯರು ಸೇರಿದಂತೆ ಅನೇಕ ಆಚಾರ್ಯರು, ತಪಸ್ವಿಗಳು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಹೇಳಿದರು.

ಮುಗಳಖೋಡದ ಬೃಹನ್ಮಠದ ಮುಕ್ತಿಮಂದಿರಲ್ಲಿ ಶಿಲೆಯಲ್ಲಿ ನಿರ್ಮಿಸಿದ ‘ಅನುಭವ ಮಂಟಪ’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. 32 ವರ್ಷಗಳ ಹಿಂದೆ ಸಿದ್ಧರಾಮೇಶ್ವರ ಶ್ರೀಗಳ ಸಂಕಲ್ಪದಂತೆ ಮುಗಳಖೋಡದಲ್ಲಿ ಅನುಭವ ಮಂಟಪ ಪ್ರತಿಷ್ಠಾಪನೆಯಾಗಿದೆ. ಮುಗಳಖೋಡ ಮಠವು ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿ ಆಧ್ಯಾತ್ಮಿಕ ಸಾಧನೆ ಮಾಡಿದೆ. ಯುವಕರಿಗೆ ಸ್ಪೂರ್ತಿಯಾಗಿರುವ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಯನ್ನು ಮಠದಲ್ಲಿ ಐತಿಹಾಸಿಕವಾಗಿ ಆಚರಿಸಿರುವುದು ಅತ್ಯಂತ ಸಮಯೋಚಿತವಾಗಿದೆ ಎಂದರು.

ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ರಾಜನಾಥ ಸಿಂಗ್‌ ‘ಬೆಳಗಾವಿಯ ಬಂಧು ಭಗಿನೀಯರಿಗೆ ನಮಸ್ಕಾರಗಳು, ಭಕ್ತರನ್ನು ನೋಡಿ ಆನಂದ ಆಗಿದೆ’ ಎಂದು ಹೇಳುತ್ತಿದ್ದಂತೆ ಸೇರಿದ ಜನ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ‘ಭಾರತದ ಅಭಿವೃದ್ಧಿಯ ವೇಗವನ್ನು ವಿಶ್ವವೇ ಬೆರಗಾಗಿ ನೋಡುತ್ತಿದೆ. ಭವ್ಯ ಭಾರತದ ಕನಸು ನನಸಾಗಿಸಲು ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.

ದೇಶವು ಅಭಿವೃದ್ಧಿಯಾಗಬೇಕಾದರೆ ಶಾಂತಿ ನೆಲೆಸಬೇಕು. ಕಾಶ್ಮೀರದಲ್ಲಿ ಉಗ್ರವಾದಿಗಳನ್ನು ನಿಯಂತ್ರಿಸಿ ಅಲ್ಲಿ ಶಾಂತಿ ನೆಲೆಸುವಲ್ಲಿ ಸತತ ಮಾಡಿದ ಪ್ರಯತ್ನಗಳು ಯಶಸ್ಸಿಯತ್ತ ಸಾಗಿವೆ ಎಂದರು.

ನಿತ್ಯ ಯೋಗ ಆರೋಗ್ಯದ ಮೂಲ: ಹರಿದ್ವಾರದ ಪತಂಜಲಿ ಯೋಗಪೀಠದ ಬಾಬಾ ರಾಮದೇವ ಮಾತನಾಡಿ ‘ಮನುಷ್ಯ ತನ್ನ ಶರೀರದ ಇಂದ್ರಿಯಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಯೋಗ ಅವಶ್ಯ, ನಿತ್ಯ ಯೋಗ ಮಾಡಿ ರೋಗಮುಕ್ತರಾಗಿ ಸುಂದರ ಬದುಕನ್ನು ನಿರ್ಮಿಸಿಕೊಳ್ಳಬೇಕು ಎಂದರು.

ನಮ್ಮ ಶರೀರದ ಮೇಲೆ ಸಂಪೂರ್ಣ ವಿಶ್ವಾಸ ಇರಬೇಕು. ನಮ್ಮ ಶರೀರ ಬಗ್ಗೆ ಕಾಳಜಿ ಇರದಿದ್ದರೆ ಇಡೀ ಜೀವನವೇ ನಶ್ವರವಾಗುತ್ತದೆ ಎಂದರು.

ನಿತ್ಯ ಮಾಡಬೇಕಾದ ಕೆಲ ಯೋಗ ವಿಧಾನಗಳನ್ನು ಅವರು ಮಾಡಿ ತೋರಿಸಿದರು.

ಸಾನ್ನಿಧ್ಯ ವಹಿಸಿದ್ದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಸ್ವಾಮೀಜಿ‘ ಶ್ರೀಮಠದಿಂದ ಮುಂದಿನ ದಿನಗಳಲ್ಲಿ ಐದು ಗ್ರಾಮಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿ ಸೇರಿದಂತೆ ಸ್ವಚ್ಛ ಗ್ರಾಮವನ್ನಾಗಿಸಿ ದೇಶದಲ್ಲಿಯೇ ಮಾದರಿ ಮಾಡುವ ಸಂಕಲ್ಪ ತಮ್ಮದಾಗಿದೆ. ಪ್ರಧಾನಿ ಮೋದಿಯ ವರ ‘ಸ್ವಚ್ಛ ಭಾರತ ಮತ್ತು ಸ್ಮಾರ್ಟ್‌ ವಿಲೇಜ್‌’ ಕನಸಿಗೆ ಅಳಿಲು ಸೇವೆ ಮಾಡುತ್ತೇವೆ ಎಂದರು.

ಸಂಸದ ಸುರೇಶ ಅಂಗಡಿ ಪ್ರಾಸ್ತಾವಿಕವಾಗಿಮಾತನಾ ಡಿದರು. ನಿಡಸೋಸಿ ಪಂಚಮ ಶಿವಲಿಂಗೇಶ್ವರ ಶ್ರೀಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಸಂಸದರಾದ ಪ್ರಲ್ಹಾದ ಜೋಶಿ, ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖುಬಾ ವೇದಿಕೆಯಲ್ಲಿದ್ದರು.

ಶಾಸಕ ಪಿ. ರಾಜೀವ ಸ್ವಾಗತಿಸಿದರು. ಶಂಕರ ಪ್ರಕಾಶ ಮತ್ತು ಸಂಧ್ಯಾ ಭಟ್‌ ನಿರೂಪಿಸಿದರು.

ಬಾಬಾ ರಾಮದೇವಜೀ ಯೋಗ, ದೇಸಿ ಸಂಸ್ಕೃತಿಗೆ ಪ್ರೇರಣೆ ಹಾಗೂ ಅವರ ಸಮಾಜ ಸೇವೆ ಪರಿಗಣಿಸಿ ಶ್ರೀಮಠದಿಂದ ‘ಬೆಳ್ಳಿ ಕಿರೀಟ ತೊಡಸಿ ಭಿನ್ನವತ್ತಳೆ ನೀಡಿ ‘ಸಿದ್ಧಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry