ಶಿಷ್ಟಾಚಾರ ಬದಿಗೊತ್ತಿ ಇಸ್ರೇಲ್‌ ಪ್ರಧಾನಿಯನ್ನು ಸ್ವಾಗತಿಸಿದ ಮೋದಿ

7

ಶಿಷ್ಟಾಚಾರ ಬದಿಗೊತ್ತಿ ಇಸ್ರೇಲ್‌ ಪ್ರಧಾನಿಯನ್ನು ಸ್ವಾಗತಿಸಿದ ಮೋದಿ

Published:
Updated:
ಶಿಷ್ಟಾಚಾರ ಬದಿಗೊತ್ತಿ ಇಸ್ರೇಲ್‌ ಪ್ರಧಾನಿಯನ್ನು ಸ್ವಾಗತಿಸಿದ ಮೋದಿ

ನವದೆಹಲಿ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಆರು ದಿನಗಳ ಭೇಟಿಗಾಗಿ ದೆಹಲಿಗೆ ಬಂದಿದ್ದು ಅವರನ್ನು ಪ್ರಧಾನಿ ನರೇಂದ್ರ ಮೋದಿ ಶಿಷ್ಟಾಚಾರವನ್ನೆಲ್ಲ ಬದಿಗೊತ್ತಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಇಸ್ರೇಲ್‌ನ  ಟೆಲ್‌ ಅವಿವ್‌ಗೆ ಮೋದಿ ಅವರು ಕಳೆದ ಜುಲೈಯಲ್ಲಿ ಹೋಗಿದ್ದರು. ಆಗ ನೆತನ್ಯಾಹು ವಿಮಾನ ನಿಲ್ದಾಣದಲ್ಲಿಯೇ ಮೋದಿ ಅವರನ್ನು ಬರಮಾಡಿಕೊಂಡಿದ್ದರು.

‘ಹಲವು ಒಪ್ಪಂದಗಳಿಗೆ ನಾವು (ಭಾರತ ಮತ್ತು ಇಸ್ರೇಲ್‌) ಸಹಿ ಹಾಕಲಿದ್ದೇವೆ. ಬಹಳ ಮಹತ್ವದ ಈ ಜಾಗತಿಕ ಶಕ್ತಿಯ (ಭಾರತ) ಜತೆಗಿನ ಸಂಬಂಧವನ್ನು ಬಲಪಡಿಸಲಾಗುವುದು. ಭದ್ರತೆ, ಆರ್ಥಿಕ ವ್ಯವಹಾರ, ವ್ಯಾಪಾರ ಮತ್ತು ಪ್ರವಾಸೋದ್ಯಮದ ಜತೆಗೆ ಇತರ ಹಲವು ಕ್ಷೇತ್ರಗಳಲ್ಲಿ ಇದು ನಮಗೆ ನೆರವಾಗಲಿದೆ. ಇಸ್ರೇಲ್‌ಗೆ ಇದು ಬಹುದೊಡ್ಡ ವರದಾನ’ ಎಂದು ತಮ್ಮ ದೇಶದಿಂದ ಹೊರಡುವ ಮೊದಲು ನೆತನ್ಯಾಹು ಟ್ವೀಟ್‌ ಮಾಡಿದ್ದಾರೆ.

ಇಬ್ಬರೂ ನಾಯಕರು ವಿಮಾನ ನಿಲ್ದಾಣದಿಂದ ತೀನ್‌ಮೂರ್ತಿ ಚೌಕಕ್ಕೆ ಹೋದರು. ಹೈಫಾ ಸಮರದಲ್ಲಿ ಹುತಾತ್ಮರಾದ ಮೈಸೂರು ಲ್ಯಾನ್ಸರ್ಸ್‌, ಜೋಧ್‌ಪುರ ಲ್ಯಾನ್ಸರ್ಸ್‌ ಮತ್ತು ಹೈದರಾಬಾದ್‌ ಲ್ಯಾನ್ಸರ್ಸ್‌ ತುಕಡಿಗಳ ಯೋಧರಿಗೆ ತೀನ್‌ಮೂರ್ತಿ ಚೌಕದಲ್ಲಿ ಅವರು ನಮನ ಸಲ್ಲಿಸಿದರು. ಮೊದಲ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಒಟ್ಟೋಮನ್‌ ಸಾಮ್ರಾಜ್ಯದ ಹಿಡಿತದಲ್ಲಿದ್ದ ಹೈಫಾ ನಗರವನ್ನು ಈ ಮೂರು ತುಕಡಿಗಳು ಬಿಡಿಸಿಕೊಂಡಿದ್ದವು.

ಹೈಫಾದ ಚಾರಿತ್ರಿಕ ಯುದ್ಧದ ನೆನಪಿಗೆ ತೀನ್‌ಮೂರ್ತಿ ಚೌಕದ ಹೆಸರನ್ನು ತೀನ್‌ಮೂರ್ತಿ–ಹೈಫಾ ಚೌಕ ಎಂದು ಇಬ್ಬರು ನಾಯಕರು ಮರುನಾಮಕರಣ ಮಾಡಿದರು.

ಹೊಸ ಎತ್ತರಕ್ಕೆ ಇಸ್ರೇಲ್‌–ಭಾರತ ಸಂಬಂಧ

ಮೋದಿ ಅವರು ಕಳೆದ ಜುಲೈಯಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಭೇಟಿಯೊಂದಿಗೆ ಎರಡೂ ದೇಶಗಳ ನಡುವಣ ಸಂಬಂಧ ಗಟ್ಟಿಗೊಂಡಿತು. ರಕ್ಷಣಾ ಕ್ಷೇತ್ರದಲ್ಲಿನ ಸಹಕಾರದ ಜತೆಗೆ, ಕೃಷಿ ಮತ್ತು ನೀರು ಸಂರಕ್ಷಣೆಯಲ್ಲಿ ಕೊಡು–ಕೊಳುವಿಕೆಗೆ ಈ ಭೇಟಿಯ ಸಂದರ್ಭದಲ್ಲಿ ನಿರ್ಧರಿಸಲಾಗಿತ್ತು.

ಕಡಿಮೆ ಸಂಪನ್ಮೂಲ ಬಳಸಿ ಬೆಳೆ ವೈವಿಧ್ಯ ಮತ್ತು ಉತ್ಪಾದಕತೆ ಹೆಚ್ಚಿಸಲು ಭಾರತದ 11 ರಾಜ್ಯಗಳಲ್ಲಿ 28 ಕೃಷಿ ಉತ್ಕೃಷ್ಟತಾ ಕೇಂದ್ರಗಳನ್ನು ಇಸ್ರೇಲ್‌ ಸ್ಥಾಪಿಸುತ್ತಿದೆ. ಇಂತಹ ಒಂದು ಕೇಂದ್ರ ಗುಜರಾತ್‌ನ ವಡ್ರದ್‌ನಲ್ಲಿ ಆರಂಭವಾಗಿದೆ. ನೇತಾನ್ಯಾಹು ಅಲ್ಲಿಗೆ ಭೇಟಿ ನೀಡಲಿದ್ದು ಜತೆಗೆ ಮೋದಿ ಅವರೂ ಇರಲಿದ್ದಾರೆ. ಭುಜ್‌ನಲ್ಲಿ ನಿರ್ಮಾಣವಾಗಿರುವ ಇಂತಹ ಇನ್ನೊಂದು ಕೇಂದ್ರವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಈ ಇಬ್ಬರು ನಾಯಕರು ಉದ್ಘಾಟಿಸಲಿದ್ದಾರೆ.

ಹೆಚ್ಚಾದ ಭೇಟಿ

2015ರಲ್ಲಿ ಆಗಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಇದು ಭಾರತದ ರಾಷ್ಟ್ರಪತಿ ಆ ದೇಶಕ್ಕೆ ನೀಡಿದ ಮೊದಲ ಭೇಟಿ. ಕಳೆದ ಜುಲೈಯಲ್ಲಿ ಪ್ರಧಾನಿ ಮೋದಿ ಅವರು ಟೆಲ್‌ ಅವಿವ್‌ಗೆ ಹೋಗಿದ್ದರು. ಅಲ್ಲಿಯವರೆಗೆ ಭಾರತದ ಪ್ರಧಾನಿ ಆ ದೇಶಕ್ಕೆ ಭೇಟಿ ನೀಡಿರಲಿಲ್ಲ.

1997ರಲ್ಲಿ ಇಸ್ರೇಲ್‌ನ ಪ್ರಧಾನಿ ಎಜರ್‌ ವೈಜ್‌ಮನ್‌ ಭಾರತಕ್ಕೆ ಬಂದಿದ್ದರು. ಇದು ಇಸ್ರೇಲ್ ಪ್ರಧಾನಿಯ ಮೊದಲ ಭಾರತ ಭೇಟಿ. ಬಳಿಕ, 2003ರಲ್ಲಿ ಆ ದೇಶದ ಪ್ರಧಾನಿಯಾಗಿದ್ದ ಏರಿಯಲ್‌ ಶೆರೋನ್‌ ಭಾರತಕ್ಕೆ ಬಂದಿದ್ದರು. ಇಸ್ರೇಲ್‌ ಅಧ್ಯಕ್ಷ ರುವಿನ್‌ ರಿವ್ಲಿನ್‌ 2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry