ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ

7

ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ

Published:
Updated:
ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ

ಚಿತ್ರದುರ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಜ. 22ರವರಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಇಲ್ಲಿ ಶನಿವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಫೆ.12ರಂದು ಎಲ್ಲಾ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಫೆ. 28 ರಂದು ಪ್ರಕಟಿಸಲಾಗುತ್ತದೆ. ಪರಿಷ್ಕರಣೆ ನಡೆಯುತ್ತಿರುವುದರಿಂದ ಸಭೆ ಕರೆಯಲಾಗಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಳಿದ್ದಲ್ಲಿ ಅವುಗಳನ್ನು ಸೇರ್ಪಡೆ ಮಾಡಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಪಕ್ಷಗಳ ಎಲ್ಲಾ ಕಾರ್ಯಕರ್ತರಿಗೆ ಮಾಹಿತಿ ನೀಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಮುಖಂಡರಿಗೆ ತಿಳಿಸಿದರು.

2018ರ ಜ. 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವ ಮತದಾರರನ್ನು ಹೊಸದಾಗಿ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ವಿಶೇಷವಾಗಿ 18ರಿಂದ 21 ವರ್ಷ ಅವಧಿಯಲ್ಲಿನ ಯುವ ಮತದಾರರಿಗೆ ಆದ್ಯತೆ ನೀಡಲಾಗುವುದು ಎಂದರು.

ಪ್ರಸ್ತುತ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ತಿದ್ದುಪಡಿ, ಮತಗಟ್ಟೆ ವರ್ಗಾವಣೆ ಮತ್ತು ಕ್ಷೇತ್ರ ಬದಲಾವಣೆ ಇದ್ದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಆಯೋಗ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ರಾಜಕೀಯ ಪಕ್ಷಗಳಿಂದ ಮತದಾರರ ಪಟ್ಟಿ ಕುರಿತಂತೆ ಏನಾದರೂ ದೂರುಗಳಿದ್ದಲ್ಲಿ ಅದನ್ನು ಸ್ವೀಕರಿಸಲಾಗುತ್ತದೆ. ಅದಕ್ಕಾಗಿಯೇ ಜ. 22ರವರೆಗೆ ಪರಿಷ್ಕರಣೆ ಅವಧಿ ವಿಸ್ತರಿಸಲಾಗಿದೆ. ಈ ಸಮಯದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಂದ ಈಗಾಗಲೇ ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಏಜೆಂಟರ್ ಕೂಡ ವಿವರವನ್ನು ನೀಡಬೇಕು ಎಂದರು.

ಚುನಾವಣಾ ಆಯೋಗದಿಂದ ಬಂದಂತಹ ಮಾಹಿತಿ ಮತ್ತು ಮಾರ್ಗಸೂಚಿಗಳನ್ನು ಮತಗಟ್ಟೆಯ ಮಟ್ಟದ ಏಜೆಂಟರಿಗೂ ಸಹ ಮತಗಟ್ಟೆ ಅಧಿಕಾರಿಗಳ ಮೂಲಕ ತಿಳಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಯಾವುದೇ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಿ ಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಮತ ಚಲಾವಣೆ ವೇಳೆ ಹೆಸರು ಬಿಟ್ಟಿದೆ, ತಪ್ಪಾಗಿದೆ ಎಂಬ ಅಭಿಪ್ರಾಯ ಯಾರಿಂದಲೂ ಬರಬಾರದು. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಹಭಾಗಿತ್ವವೂ ಮುಖ್ಯ ಎಂದು ತಿಳಿಸಿದರು.

ಮೊಬೈಲ್‍ನಲ್ಲೂ ಮಾಹಿತಿ: ಮೊಬೈಲ್‌ನಲ್ಲೂ ಮತದಾರರ ಪಟ್ಟಿ ಪರಿಶೀಲಿಸಬಹುದು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳಲು 9731979899 ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಕಳುಹಿಸುವ ಮೂಲಕ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಮಾಹಿತಿ ಪಡೆಯುವುದು ಹೇಗೆ: ಮೆಸೇಜ್‌ಗೆ ಹೋಗಿ ಇಲ್ಲಿ ಮೊದಲು EPIC ಎಂದು ಟೈಪ್ ಮಾಡಿ. ಒಂದು ಸ್ಪೇಸ್ ನೀಡಿ. ನಂತರ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ ಟೈಪ್ ಮಾಡಿದ ನಂತರ ಈ ಮೇಲ್ಕಂಡ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಕಳುಹಿಸಿದರೆ, ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್‌ಗೆ ವಿವರ ಬರುತ್ತದೆ. ಅಲ್ಲದೆ, ವೆಬ್‌ಸೈಟ್‌ನಲ್ಲಿ ಹುಡುಕಲು ಅವಕಾಶ ಇದ್ದು,  www.ceokarnataka.kar.nic.in ನಲ್ಲಿಯೂ ವೀಕ್ಷಿಸಬಹುದು.ಚುನಾವಣಾ ಮಾಹಿತಿ ಹಾಗೂ ದೂರುಗಳನ್ನು ಸ್ವೀಕರಿಸಲು 08194- 222176 ಸಹಾಯವಾಣಿ ಸ್ಥಾಪಿಸಲಾಗಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಆಯೋಗದ 1950 ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಬಹುದು ಎಂದರು.

ಹೆಚ್ಚುವರಿ  ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಚುನಾವಣಾ ತಹಶೀಲ್ದಾರ್ ಪ್ರತಿಭಾ, ತಹಶೀಲ್ದಾರ್ ಮಲ್ಲಿಕಾರ್ಜುನ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಲ್ಲೇಶ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಇದ್ದರು.

ಈ ಬಾರಿ ವಿ.ವಿ.ಟ್ಯಾಪ್: ಚುನಾವಣೆಯಲ್ಲಿ ಮತದಾನ ಮಾಡಲು ಎಲೆಕ್ಟ್ರಾನಿಕ್ಸ್ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಬಾರಿ ಇದರೊಂದಿಗೆ ವಿ.ವಿ.ಪ್ಯಾಟ್‌ ಅನ್ನು ಅಳವಡಿಸಲಾಗುತ್ತಿದೆ. ಇದು ಮತದಾರ ಯಾವುದಕ್ಕೆ ಮತ ಹಾಕಿದ್ದಾನೆ ಎಂಬುದನ್ನು ಮತ್ತೊಮ್ಮೆ ಖಾತರಿಪಡಿಸಿಕೊಳ್ಳಲು ಸಹಕಾರಿಯಾಗಿದೆ. ಮತ ಚಲಾಯಿಸಿದ ವಿವರ ಮುದ್ರಣಗೊಂಡು ನಮ್ಮ ಕಣ್ಣುಮುಂದೆ ಯಂತ್ರದ ಗ್ಲಾಸ್‌ನಲ್ಲಿ ಕಾಣುತ್ತದೆ. ಅದನ್ನು ವೀಕ್ಷಿಸಲು 7 ಸೆಕೆಂಡುಗಳ ಕಾಲಾವಕಾಶ ಇರುತ್ತದೆ. ನಂತರ ಮತ ಪೆಟ್ಟಿಗೆಗೆ ಹೋಗುತ್ತದೆ. ಇದು ಕೇವಲ ಮತದಾನ ಮಾಡಿದವರಿಗೆ ಮಾತ್ರ ನೋಡಲು ಅವಕಾಶ ಇರುತ್ತದೆ. ಆದರೆ, ಇದನ್ನು ತೆಗೆಯಲು, ಬೇರೆಯವರು ವೀಕ್ಷಿಸಲು ಅವಕಾಶ ಇಲ್ಲದಂತೆ ಶೀಲ್ಡ್ ಮಾಡಲಾಗಿರುತ್ತದೆ ಎಂದು ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

* * 

ಚುನಾವಣಾ ಪ್ರಕ್ರಿಯೆಯೂ ಪಾರದರ್ಶಕವಾಗಿ ನಡೆಯಲಿದೆ. ಇದರಲ್ಲಿ ಜಿಲ್ಲಾಡಳಿತ ಸಂಪೂರ್ಣ ಯಶಸ್ವಿಯಾಗುವ ವಿಶ್ವಾಸವಿದೆ.

 ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry