ಕೃಷಿ ವೆಚ್ಚ ತಗ್ಗಿಸಿದರೆ ಮಾತ್ರ ರೈತರಿಗೆ ಲಾಭ

7
ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆ

ಕೃಷಿ ವೆಚ್ಚ ತಗ್ಗಿಸಿದರೆ ಮಾತ್ರ ರೈತರಿಗೆ ಲಾಭ

Published:
Updated:

ಬೆಳಗಾವಿ: ‘ಕೃಷಿ ಉತ್ಪನ್ನಗಳಿಂದ ಬರುವ ಆದಾಯವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೃಷಿಗೆ ಹೂಡಿಕೆ ಮಾಡುವ ವೆಚ್ಚವನ್ನು ಕಡಿತಗೊಳಿಸಬೇಕಾಗಿದೆ. ಹೀಗಾದರೆ ಮಾತ್ರ ರೈತರಿಗೆ ಲಾಭ ದಕ್ಕಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಭಾರತೀಯ ಕೃಷಿಕ ಸಮಾಜವು ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪರಿಷತ್‌ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಎಲ್ಲರೂ ಲಾಭದ ದೃಷ್ಟಿ ಇಟ್ಟುಕೊಂಡೇ ವ್ಯಾಪಾರ, ಉದ್ಯೋಗ ಮಾಡುತ್ತಾರೆ. ಆದರೆ, ರೈತರು ಮಾತ್ರ ತಾವು ಮಾಡುತ್ತಿರುವ ಕೃಷಿ ನಷ್ಟದಾಯಕ ಎಂದು ಗೊತ್ತಿದ್ದರೂ ಮಾಡುತ್ತಾರೆ. ರೈತರಷ್ಟು ಧೈರ್ಯವಂತರು ಇನ್ನಾರೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರ ಅಭಿವೃದ್ಧಿಗಾಗಿ ಮತ್ತೊಂದು ಹಸಿರು ಕ್ರಾಂತಿ ಮಾಡಿದರೂ ಪ್ರಯೋಜನವಾಗುವುದಿಲ್ಲ. ಕೃಷಿಯಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಇದಕ್ಕಾಗಿ ಹಳ್ಳಿಗಳಿಗೆ ಎಲ್ಲ ಮೂಲ ಸೌಕರ್ಯಗಳನ್ನು ನೀಡಬೇಕಾಗಿದೆ. ರಸ್ತೆ, ನೀರು, ವಿದ್ಯುತ್‌ ನೀಡಬೇಕಾಗಿದೆ ಎಂದು ಹೇಳಿದರು.

‘ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಾನು ಕೃಷಿ ಸಚಿವನಾಗಿದ್ದೆ. ಆಗ ಕೃಷಿ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದ್ದೆ. ಕರ್ನಾಟಕದಲ್ಲಿ ಬಿಜೆಪಿ– ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗಿದ್ದೆ. ಆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಯಡಿಯೂರಪ್ಪ ಅವರಿಗೆ ಸೂಚಿಸಿ, ಕೃಷಿ ಬಡ್ಡಿದರವನ್ನು ಶೇ 4, ಶೇ 3ಕ್ಕೆ ಇಳಿಲು ಸೂಚಿಸಿದ್ದೆ’ ಎಂದರು.

ಕೃಷಿ ಬಲಪಡಿಸಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಫಸಲ್‌ ಬಿಮಾ ಯೋಜನೆ, ನೀರಾವರಿ ವಿಸ್ತರಣೆ, ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ, ಮಣ್ಣು ಆರೋಗ್ಯ ಪರೀಕ್ಷೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಕೃಷಿಯ ಜೊತೆ ಕೃಷಿ ಪೂರಕ ಕಸಬುಗಳನ್ನು ಕೈಗೊಂಡರೆ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಕೇಂದ್ರ ಸರ್ಕಾರವು ಕೃಷಿ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 10 ಲಕ್ಷ ಕೋಟಿ ಅನುದಾನ ಮೀಸಲು ಇಟ್ಟಿರುವ ಆರ್ಥಿಕ ಸಚಿವ ಅರುಣ್‌ ಜೇಟ್ಲಿ ಅವರ ನಿರ್ಧಾರ ಸ್ವಾಗತಾರ್ಹ. ಕೃಷಿ ಆಧಾರಿತ ಕಸಬುಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.

ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಕಿಷನ್‌ಬೀರ್‌ ಚೌಧರಿ ಮಾತನಾಡಿ, ಕೇಂದ್ರ ಸರ್ಕಾರವು ನೀರಾವರಿ ಹೆಚ್ಚಿಸಲು ಒತ್ತು ನೀಡುತ್ತಿದೆ. ಇ– ಮಾರ್ಕೆಟಿಂಗ್‌ ಜಾರಿಗೆ ತಂದಿದೆ. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತಿದೆ ಎಂದರು.

ಸಂಸದ ಪ್ರಹ್ಲಾದ ಜೋಷಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಭಾರತೀಯ ಕೃಷಿಕ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry