ಕಡಕ್ ರೊಟ್ಟಿ, ಕರಿಂಡಿ ಜಾತ್ರೆ

7

ಕಡಕ್ ರೊಟ್ಟಿ, ಕರಿಂಡಿ ಜಾತ್ರೆ

Published:
Updated:
ಕಡಕ್ ರೊಟ್ಟಿ, ಕರಿಂಡಿ ಜಾತ್ರೆ

ಲಕ್ಷ್ಮೇಶ್ವರ: ಇಲ್ಲಿಗೆ ಸಮೀಪದ ಹೂವಿನಶಿಗ್ಲಿ ವಿರಕ್ತಮಠದ ಜಾತ್ರೆ ಬಲು ವಿಶಿಷ್ಟ. ಜಾತ್ರೆಗೆ ಬಂದ ಭಕ್ತರಿಗೆಲ್ಲ ಜೋಳದ ಕಡಕ್‌ ರೊಟ್ಟಿ ಕರಿಂಡಿ ಉಣಬಡಿಸುವುದು ಈ ಜಾತ್ರೆಯ ವಿಶೇಷ.

ಧಾರ್ಮಿಕ, ಆಧ್ಯಾತ್ಮಿಕ ಸೇವೆಯೊಂದಿಗೆ ಶಿಕ್ಷಣ ರಂಗದಲ್ಲೂ ಸಾಕಷ್ಟು ಸೇವೆ ಮಾಡುತ್ತಿರುವ ಅನೇಕ ಮಠಗಳು ನಾಡಿನಲ್ಲಿದ್ದು ಅಂಥಹ ಮಠಗಳಲ್ಲಿ ಹೂವಿನಶಿಗ್ಲಿ ವಿರಕ್ತಮಠವೂ ಒಂದು. ನಿರಂಜನ ಸ್ವಾಮೀಜಿ ಹೂವಿನಶಿಗ್ಲಿ ವಿರಕ್ತಮಠ ಕಟ್ಟಿ ಬೆಳೆಸಿದ ಮಹಾಮಹಿಮರು. ಇವರು ಮಠಕ್ಕೆ ಬರುವ ಮೊದಲು ಇದೊಂದು ಕಲ್ಲು, ಮುಳ್ಳುಗಳಿಂದ ಕೂಡಿದ ಹಾಳು ಮಂಟಪವಾಗಿತ್ತು. ಪೂಜೆ, ಪುನಸ್ಕಾರಗಳು ನಡೆಯದ ಕೇವಲ ಎರಡು ಅಂಕಣದ ಜೀರ್ಣಾವಸ್ಥೆಯ ದೇವಸ್ಥಾನ ಇದ್ದ ಈ ಮಠ ಅಕ್ಷರಶಃ ಒಂದು ರೀತಿಯಲ್ಲಿ ಕಾಡಿನಂತಿತ್ತು.

ಸಮಾಜ ಸೇವೆ, ಭಕ್ತರ ಉದ್ಧಾರದ ದಿವ್ಯ ವಿಚಾರಗಳನ್ನು ಹೊತ್ತು ಇಲ್ಲಿಗೆ ಬಂದಿದ್ದ ನಿರಂಜನ ಸ್ವಾಮೀಜಿ ತಮ್ಮ ಸಂಕಲ್ಪ ಶಕ್ತಿ, ಸತತ ಪರಿಶ್ರಮ ಹಾಗೂ ಅಪಾರ ತಪಸ್ಸಿನ ಬಲದಿಂದ ಕಾಡಿನಂತಿದ್ದ ಮಠವನ್ನು ಪಾವನಗೊಳಿಸಿದರು. ಇಂದು ಈ ಮಠ ಭಕ್ತರ ಪಾಲಿಗೆ ಶ್ರದ್ದಾ ಕೇಂದ್ರವಾಗುವಂತೆ ಮಾಡುವಲ್ಲಿ ಅವರ ಶ್ರಮ ಅಡಗಿದೆ. ತಮ್ಮ ಸತ್ಯ, ಶುದ್ಧ ಕಾಯಕದಿಂದ ದೇವಸ್ಥಾನವನ್ನು ಮಾತ್ರ ಉದ್ಧಾರಗೊಳಿಸದೆ ವಸತಿಯುತ ಶಾಲೆ ಆರಂಭಿಸುವುದರ ಮೂಲಕ ನಾಡಿನ ನೂರಾರು ಬಡ ಹಾಗೂ ಅನಾಥ ಮಕ್ಕಳಿಗೆ ವಿದ್ಯೆ ದಯಪಾಲಿಸಿದ ದೇವರು ಎನ್ನಿಸಿಕೊಂಡಿದ್ದಾರೆ. ಗುರುಕುಲ ಮಾದರಿಯಲ್ಲಿ ವಸತಿಯುತ ಶಿಕ್ಷಣವನ್ನು ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಎಲ್‌.ಕೆ.ಜಿ.ಯಿಂದ ಮಾಧ್ಯಮಿಕ ಶಿಕ್ಷಣದವರೆಗೂ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಯಶಸ್ಸು ಕಂಡಿದೆ.

ಹಾಳು ದೇವಾಲಯವಾಗಿದ್ದ ಮಠವನ್ನು ಅಭಿವೃದ್ಧಿ ಮಾಡಿ ಪವಿತ್ರ ಕ್ಷೇತ್ರವನ್ನಾಗಿಸಿದ ನಿರಂಜನ ಸ್ವಾಮೀಜಿ ಏಳು ವರ್ಷಗಳ ಹಿಂದೆ ಲಿಂಗೈಕ್ಯರಾದರು. ಅವರ ನಂತರ ಇದೀಗ ಚನ್ನವೀರ ಸ್ವಾಮೀಜಿ ಶ್ರೀಮಠವನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ. ಸಂಸ್ಕೃತ ಪಂಡಿತರೂ ಆಗಿರುವ ಚನ್ನವೀರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಠ ಈಗ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಸ್ವಾಮೀಜಿಗಳ ಆಸೆಯಂತೆ ಸಾಂಪ್ರದಾಯಿಕವಾಗಿ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ.

ಹೂವಿನಶಿಗ್ಲಿ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಕಡಕ್‌ ರೊಟ್ಟಿ ಮತ್ತು ಕರಿಂಡಿ ನೀಡುವುದು ಇಲ್ಲಿನ ಸಂಪ್ರದಾಯ. ಹೀಗಾಗಿ, ಇದು ‘ಕಡಕ್‌ ರೊಟ್ಟಿ ಕರಿಂಡಿ ಜಾತ್ರೆ’ ಎಂದೇ ಹೆಸರು ವಾಸಿಯಾಗಿದೆ.

ಮಠದಲ್ಲಿ ಇದೆ ಜ. 16ರವರೆಗೆ ಮಠದ 39ನೇ ಜಾತ್ರಾ ಮಹೋತ್ಸವ ನಡೆಯಲಿದ್ದು ಇದರ ಜೊತೆಗೆ ಲಿಂ.ನಿರಂಜನ ಮಹಾಸ್ವಾಮಿಗಳ 8ನೇ ಪುಣ್ಯ ಸ್ಮರಣೋತ್ಸವ ಜರುಗುವುದು. ಈ ಕಾರ್ಯಕ್ರಮಗಳಲ್ಲಿ ನಾಡಿನ ವಿವಿಧ ಭಾಗಗಳ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry