ಮನಸೆಳೆವ ಗಜಲಕ್ಷ್ಮಿಯ ಅಖಂಡ ಬಾಗಿಲು

7

ಮನಸೆಳೆವ ಗಜಲಕ್ಷ್ಮಿಯ ಅಖಂಡ ಬಾಗಿಲು

Published:
Updated:
ಮನಸೆಳೆವ ಗಜಲಕ್ಷ್ಮಿಯ ಅಖಂಡ ಬಾಗಿಲು

ಶ್ರವಣಬೆಳಗೊಳ: ವಿಂಧ್ಯಗಿರಿಯ ಬಾಹುಬಲಿಮೂರ್ತಿ ಶಿಲ್ಪಕಲಾ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿರುವಂತೆ ಇಲ್ಲಿಯ ಅಖಂಡ ಬಾಗಿಲಿನ ಗಜಲಕ್ಷ್ಮಿಯ ಉಬ್ಬುಶಿಲ್ಪ ಸಹ ಅಷ್ಟೇ ಆಕರ್ಷಣೆಯಾಗಿದೆ.

ಬಾಹುಬಲಿ ಮೂರ್ತಿ ನೋಡಲು ವಿಂಧ್ಯಗಿರಿ ಬೆಟ್ಟದ ಸೋಪಾನಗಳನ್ನೇರಿ 5 ಕೋಟೆಯ ಬಾಗಿಲು ದಾಟಬೇಕು. ಅದರಲ್ಲಿ ಮೊದಲನೆಯದಾಗಿ 496 ಮೆಟ್ಟಿಲು ಏರಿ ಬೆಳ್ಳಿ ಬಾಗಿಲನ್ನು ಪ್ರವೇಶಿಸಿದ ನಂತರ ವಿಸ್ಮಯಕಾರಿ ಒದೆಗಲ್‌ ಬಸದಿ ನೋಡಬಹುದು.

ಅಲ್ಲಿಂದ ಸ್ವಲ್ಪ ದೂರದಲ್ಲಿ ತ್ಯಾಗ ಕಂಬ ಕಾಣುತ್ತೇವೆ. ನಂತರ 46 ಮೆಟ್ಟಿಲುಗಳೇರಿದರೆ ಒಂದೇ ಬಂಡೆಯಲ್ಲಿ ಕೊರೆದಿರುವ ಅಖಂಡ ಬಾಗಿಲು ಕಾಣುತ್ತದೆ. ಈ ಅಖಂಡ ಬಾಗಿಲಿನ ದ್ವಾರ ಕ್ರಿ.ಶ. 980ರಷ್ಟು ಹಳೆಯದಾಗಿದ್ದು, ಆ ಬಾಗಿಲುವಾಡದ ಮೇಲಿನ ಭಾಗದಲ್ಲಿ ನಯನ ಮನೋಹರವಾಗಿ ಗಜಲಕ್ಷ್ಮಿಯು ಪಟ್ಟಿಕೆಗಳಲ್ಲಿ ಕಮಲಾಸೀನಳಾಗಿದ್ದಾಳೆ.

ಅವಳ ಪಕ್ಕದಲ್ಲಿ ಶೃಂಗಾರಗೊಂಡ 2 ಆನೆಗಳು ತಮ್ಮ ಸೊಂಡಿಲುಗಳಲ್ಲಿ ಹಿಡಿದ ಕುಂಭಗಳಿಂದ ಅಭಿಷೇಕ ಮಾಡುತ್ತಿರುವ ಕೆತ್ತನೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇಲ್ಲಿ ಮಕರಗಳ ಮತ್ತು ಸಿಂಹಗಳ ಉಬ್ಬು ಶಿಲ್ಪಗಳ ಚಿತ್ರಗಳೂ ಉಳಿಕೆಯ ಸ್ಥಳದಲ್ಲಿ ಅರ್ಥವತ್ತಾಗಿ ತುಂಬಿಕೊಂಡಿರುವುದು ಕಾಣಬಹುದು.

‘ಈ ಕಲಾಕೃತಿಯು ಗಂಗರ ಕಾಲದಾಗಿದ್ದು, ಅಪೂರ್ವವಾದ ಉತ್ತಮ ಶಿಲ್ಪವಾಗಿದೆ. ದೇಶದಲ್ಲಿಯೇ ಉತ್ತಮ ಮತ್ತು ಅತಿ ದೊಡ್ಡ ಗಜಲಕ್ಷ್ಮಿಯ ಉಬ್ಬುಶಿಲ್ಪ.ಈ ಬಾಗಿಲು ಬಾಹುಬಲಿಯ ಉತ್ತರ ದಿಕ್ಕಿಗೆ ನೇರವಾಗಿ ಇರುವುದರಿಂದ 10ನೇ ಶತಮಾನದಲ್ಲಿ ರಚನೆಗೊಂಡು ಬಾಹುಬಲಿ ಮೂರ್ತಿಯವರೆಗೆ ಹೋಗುವ ಪ್ರಮುಖವಾದ ಅಥವಾ ಏಕಮೇವ ದ್ವಾರವಾಗಿದ್ದಿರಬಹುದು ಎಂದು ಊಹಿಸಲಾಗಿದೆ. ದ್ವಾರದ 2 ಬದಿಗಳಲ್ಲಿರುವ ಚಿಕ್ಕ ಮಂದಿರಗಳಲ್ಲಿ ಹೊಯ್ಸಳ ವಿಷ್ಣುವರ್ಧನ್‌ನ ದಂಡನಾಯಕ ಭರತಮಯ್ಯ ನಿರ್ಮಿಸಿದ ಭರತ ಮತ್ತು ಬಾಹುಬಲಿಯ ಉಬ್ಬು ಶಿಲ್ಪಗಳಿವೆ’ ಎಂದು ಇತಿಹಾಸ ಪ್ರಾಧ್ಯಾಪಕ ಜೀವಂಧರಕುಮಾರ್‌ ಹೊತಪೇಟೆ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry