ಪ್ರಕೃತಿ ಮರೆತರೆ ವಿನಾಶವೇ ಗತಿ

7

ಪ್ರಕೃತಿ ಮರೆತರೆ ವಿನಾಶವೇ ಗತಿ

Published:
Updated:

ಅರಸೀಕೆರೆ: ‘ಪ್ರಕೃತಿಯ ಶೋಷಣೆಮುಕ್ತ ವಿಕಾಸ ನಮಗೆ ಬೇಕಿದೆ. ವಿಕಾಸದ ಭರದಲ್ಲಿ ಪ್ರಕೃತಿಯನ್ನು ಮರೆತರೆ ವಿನಾಶವೇ ಗತಿ’ ಎಂದು ಜಲತಜ್ಞ ಶಿರಸಿ ಶಿವಾನಂದ ಕಳವೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ನಿರಂಜನ ಪೀಠದ ವತಿಯಿಂದ ಶನಿವಾರ ಆಯೋಜಿಸಿದ್ದ ಲಿಂಗೈಕ್ಯ ಚಂದ್ರಶೇಖರ ಸ್ವಾಮೀಜಿ ಅವರ 11ನೇ ವರ್ಷದ ಪುಣ್ಯಸ್ಮರಣೆ ಹಾಗೂ 18ನೇ ಅರಿವಿನ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.

‘ಪ್ರಕೃತಿ ಮಾತೆ ನೀಡಿದ್ದ ಶುದ್ಧ ನೀರನ್ನು ಕಲುಷಿತಗೊಳಿಸಿ ಬಾಟಲಿ ನೀರಿಗೆ ಬಾಯೊಡ್ಡಿ ವಿನಾಶದತ್ತ ಹೆಜ್ಜೆ ಹಾಕಿದ್ದೇವೆ. ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ನಮಗೆ ಉಳಿಗಾಲವಿಲ್ಲ. ಮಾತಿಗಿಂತ ಕೃತಿ ಲೇಸು. ನೀರಿನ ಸಂರಕ್ಷ ಣೆಗೆ ಏನಾ ದರೂ ಮಾಡಲೇಬೇಕು ಎಂಬ ಸಂಕಲ್ಪದೊಂದಿಗೆ ನಾವುಗಳು ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ಸರ್ಕಾರ ಈ ಕೆಲಸ ಮಾಡುತ್ತದೆ ಎಂಬುದನ್ನು ಮರೆಯೋಣ, ನಮ್ಮ ಉಳುವಿನ ಬಗ್ಗೆ ಚಿಂತನೆ ನಡೆಸಿ ನಿಸರ್ಗ ಸಂಪನ್ಮೂಲಗಳನ್ನು ಒಳಗೊಂಡ ಜನ ಸಮುದಾಯದೊಂದಿಗೆ ಸ್ವಾವಲಂಬಿಯಾದ ಆರೋಗ್ಯ ಪೂರ್ಣ ಹಳ್ಳಿಗಳ ನಿರ್ಮಾಣದತ್ತ ಹೆಜ್ಜೆ ಇಡಬೇಕು.

ಅದರಲ್ಲೂ ಗ್ರಾಮೀಣ ಭಾಗದ ಜನತೆಯಲ್ಲಿ ಅರಿವು ಮೂಡಿಸಿ ಜಲ ಸಂರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜನ ಸಮುದಾಯ ಕೈಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿದರು.

ಕಳೆದ ಎರಡು ದಶಕಗಳ ಹಿಂದೆ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಸಾವಯವ ಕೃಷಿ ಬಳಸಿ ವೈವಿಧ್ಯಮಯ ಸಿರಿಧಾನ್ಯ ಬೆಳೆದು ದೃಢಕಾಯರಾಗಿ, ಶತಾಯುಷಿಗಳಾಗಿ ಬಾಳುತ್ತಿದ್ದರು ಎಂದು ವಿವರಿಸಿದರು.

ಮಳೆಯ ಅಭಾವದಿಂದ ಪ್ರಸ್ತುತ ಕೃಷಿಕ್ಷೇತ್ರ ಕೊಳವೆ ಬಾವಿಗೆ ಬಿದ್ದಿದೆ, ವಿಜ್ಞಾನ ಕೈಹಿಡಿದಿದೆ. ಆದರೆ, ಹಳೆಯ ಪದ್ಧತಿ ಹೋಗಿ ಕೃಷಿಯಲ್ಲಿ ಹಣ ಹುಡುಕುವ ಅನಿವಾರ್ಯತೆಯಿಂದ ರೈತ ಸಮುದಾಯ ಸಂಕಷ್ಟದಲ್ಲಿ ಸಿಲುಕಿದೆ ಎಂದು ಕಳವೆ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೆರಗೋಡಿ ರಂಗಾಪುರ ಮಠದ ಗುರುಪರದೇಶೀಕೇಂದ್ರ ಸ್ವಾಮೀಜಿ, ‘ಅರ್ಥಪೂರ್ಣ ಬದುಕಿಗಾಗಿ ಅರಿವಿನ ಅವಶ್ಯಕತೆ ಇದೆ. ಯಾಂತ್ರೀಕೃತ ಬದುಕಿನ ಒತ್ತಡದಿಂದಾಗಿ ಶಾಂತಿ ನೆಮ್ಮದಿ ಇಲ್ಲ ವಾಗಿ ಪರಿತಪಿಸುವಂತಾಗಿದೆ. ಸಂಪತ್ತಿನಿಂದ ಸುಖಶಾಂತಿ ಸಿಗದು. ಗುರುವಿನಿಂದ ಜ್ಞಾನವನ್ನು ಸಂಪಾದಿಸಿ ಕೊಂಡು ಬಾಳುವುದು ಶ್ರೇಯಸ್ಕರ’ ಎಂದರು.

ತಿಪಟೂರು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವಾನಂದ ಸ್ವಾಮೀಜಿ, ಚಿಕ್ಕಮಗಳೂರು ಜಯಬಸವನಾಂದ ಸ್ವಾಮೀಜಿ, ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್‌.ಜಿ.ರೇವಣ್ಣ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪ್ರಥಮ ಬಾರಿಗೆ ನಿರಂಜನ ಪೀಠದ ವತಿಯಿಂದ ಕಾಯಕಯೋಗಿ ಪ್ರಶಸ್ತಿಯನ್ನು ಪ್ರಗತಿಪರ ರೈತ ಹಾಲೇನಹಳ್ಳಿ ಶಾಂತಯ್ಯ, ದಾಸೋಹ ರತ್ನ ಪ್ರಶಸ್ತಿ ಅರಸೀಕೆರೆ ಕೆ.ಪಿ.ಎಸ್‌ ವಿಶ್ವ ನಾಥ್‌, ವೈದ್ಯ ಸಂಗಣ್ಣ ಪ್ರಶಸ್ತಿ ಚಿಕ್ಕಮಗಳೂರಿನ ಸಿದ್ದಮ್ಮ ಹಾಗೂ ಜ್ಞಾನರತ್ನ ಪ್ರಶಸ್ತಿಯನ್ನು ಹುಳಿಯಾರು ಮರುಳಸಿದ್ದಪ್ಪ ಅವರಿಗೆ ಪ್ದಾನ ಮಾಡಿ ಗೌರವಿಸಲಾಯಿತು.

ಮಾಡಾಳು ಶಿವಬಸವ ಕುಮಾರಾಶ್ರಮದ ಅಭಿನವ ಶಿವಲಿಂಗ ಸ್ವಾಮೀಜಿ ಎಂ.ಎಲ್‌. ಹುಂಡಿ ವಿರಕ್ತ ಮಠದ ಗೌರಿಶಂಕರ ಸ್ವಾಮೀಜಿ, ಉದ್ಯಮಿ ಬಿ.ಎಸ್‌.ಅರುಣ್‌ಕುಮಾರ್‌, ನರರೋಗ ತಜ್ಞೆ ಡಾ.ಪೂರ್ಣಿಮಾ ಶೇಖರ್‌, ಜಿ.ಪಂ ಸದಸ್ಯ ಎಂ.ಎಸ್‌.ವಿ.ಸ್ವಾಮಿ, ಅಣ್ಣಾಯಕನಹಳ್ಳಿ ವಿಜಯ್‌ ಕುಮಾರ್‌, ಸುಜಾತಾ ಮೇಲೇಗೌಡ, ಬಸವರಾಜ್‌, ಯೋಗೀಶ್‌ ಇದ್ದರು.

* * 

ನೀರಿನ ಬೆಲೆ ಅರಿಯದ ಅಕ್ಷರಸ್ಥರಿಂದ ಬರಗಾಲ ಎದುರಾಗಿದೆ. ಹಣ ಕೊಟ್ಟರೂ ಅನ್ನ ಸಿಗುವುದಿಲ್ಲ, ಅನ್ನದ ಬೆಲೆಯೂ ಬಹಳಷ್ಟು ಜನರಿಗೆ ಗೊತ್ತಿಲ್ಲ

ಶಿವಾನಂದ ಕಳವೆ, ಜಲತಜ್ಞ ಶಿರಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry