ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ಗಾಗಿ ‘ದೋಸ್ತಿ–ದುಷ್ಮನಿ’ ಶುರು

Last Updated 14 ಜನವರಿ 2018, 10:08 IST
ಅಕ್ಷರ ಗಾತ್ರ

ಹಾವೇರಿ: ‘ದುಷ್ಮನ್‌ ಕಿದರ್ ಹೈ?... ಬಗಲ್‌ ಮೇ ಹೈ’ (ದ್ರೋಹಿ ಎಲ್ಲಿದ್ದಾನೆ... ಪಕ್ಕದಲ್ಲೇ ಇದ್ದಾನೆ)... ಎಂಬುದು ಚುನಾವಣಾ ರಾಜಕಾರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹೇಳಿದ ಶಾಯರಿ ತುಣುಕು. ಸಣ್ಣ ಸಮುದಾಯದಿಂದ ಬಂದ ಅವರು, ಸುದೀರ್ಘ ರಾಜಕಾರಣ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಅವರ ಅನುಭವದ ಮಾತುಗಳು ಇಂದಿಗೂ ಪ್ರಸ್ತುತ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕಾರಣದಲ್ಲಿ ‘ದೋಸ್ತಿ–ದುಷ್ಮನಿ’ಗಳು ಬದಲಾಗುತ್ತಲೇ ಇರುತ್ತಾರೆ. ಈ ವರಸೆಗೆ ಜಿಲ್ಲೆಯಲ್ಲೂ ಚಾಲನೆ ದೊರೆತಿದೆ.

ಒಂದೇ ಪಕ್ಷದಲ್ಲಿ ಜೊತೆಗಿದ್ದವರೇ, ಟಿಕೆಟ್‌ಗಾಗಿ ಪರಸ್ಪರ ಹೇಳಿಕೆ ನೀಡಲು ಶುರು ಮಾಡಿದ್ದಾರೆ. ಹಾಲಿ ಶಾಸಕರು ಹಾಗೂ ಪ್ರಭಾವಿ ನಾಯಕರು ಇರದ ಪಕ್ಷಕ್ಕೆ ಹಲವರು ಈಗಾಗಲೇ ವಲಸೆ ಹೋಗಿದ್ದಾರೆ. ಇನ್ನೂ ಕೆಲವರು ಹಾಲಿ ಶಾಸಕರ ಜೊತೆಗಿದ್ದೇ ತಮ್ಮ ಧ್ವನಿ ಎತ್ತಿದ್ದಾರೆ.

ಆರರತ್ತ ಚಿತ್ತ: ಜಿಲ್ಲೆಯಲ್ಲಿ ಆರು ವಿಧಾನ ಸಭಾ ಕ್ಷೇತ್ರಗಳಿದ್ದು, 4 ರಲ್ಲಿ (ಹಾವೇರಿ–ರುದ್ರಪ್ಪ ಲಮಾಣಿ, ರಾಣೆಬೆನ್ನೂರ– ಕೆ.ಬಿ. ಕೋಳಿವಾಡ, ಬ್ಯಾಡಗಿ– ಬಸವರಾಜ ಶಿವಣ್ಣನವರ, ಹಾನಗಲ್– ಮನೋಹರ್ ತಹಸೀಲ್ದಾರ್) ಕಾಂಗ್ರೆಸ್ ಹಾಗೂ 2ರಲ್ಲಿ (ಶಿಗ್ಗಾವಿ–ಸವಣೂರ– ಬಸವರಾಜ ಬೊಮ್ಮಾಯಿ ಮತ್ತು ಹಿರೇಕೆರೂರ– ಯು.ಬಿ. ಬಣಕಾರ) ಬಿಜೆಪಿ ಶಾಸಕರು ಇದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (ಕಾಂಗ್ರೆಸ್) ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಘೋಷಿಸಿರುವ ಪ್ರಕಾರ ಹಾಲಿ ಶಾಸಕರುಗಳಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ.

ಅಪಸ್ವರ: ಆದರೂ, ಬ್ಯಾಡಗಿಯಲ್ಲಿ ಎಸ್‌.ಆರ್. ಪಾಟೀಲ್ ಹಾಗೂ ಹಾನಗಲ್‌ನಲ್ಲಿ ಹಲವು ಮುಖಂಡರು ಕಾಂಗ್ರೆಸ್‌್ ಹಾಲಿ ಶಾಸಕರ ಬದಲಾಗಿ ತಮಗೆ ಟಿಕೆಟ್ ನೀಡಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಇತ್ತ ಬಿಜೆಪಿಯಲ್ಲಿ ಶಿಗ್ಗಾವಿ–ಸವಣೂರ ಕ್ಷೇತ್ರದ ಟಿಕೆಟ್ ಬಯಸಿ ಪಕ್ಷದ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಬೇಡಿಕೆ ಮುಂದಿಟ್ಟಿದ್ದಾರೆ. ಉಳಿದಂತೆ ಪಕ್ಷದ ಆಂತರಿಕ ವಲಯದಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ಸೋತಲ್ಲೇ ಸಂಕಷ್ಟ: ಹಾಲಿ ಶಾಸಕರು ಇಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯೇ ರಾಷ್ಟ್ರೀಯ ಪಕ್ಷಗಳಿಗೆ ಪ್ರಮುಖ ವಿಚಾರವಾಗಿದೆ. ಕಾಂಗ್ರೆಸ್‌ನಿಂದ ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್ ಮತ್ತು ಸವಣೂರ –ಶಿಗ್ಗಾವಿಯಲ್ಲಿ ಅಜ್ಜಂಪೀರ್ ಖಾದ್ರಿ ಎಂದು ಸಿ.ಎಂ. ಘೋಷಿಸಿದ್ದಾರೆ. ಆದರೂ, ಶಿಗ್ಗಾವಿ–ಸವಣೂರಿನಲ್ಲಿ ಕುನ್ನೂರ, ರಾಜೇಶ್ವರಿ ಪಾಟೀಲ ಮತ್ತು ಸಂಜೀವಕುಮಾರ್ ನೀರಲಗಿ ಹೆಸರುಗಳು ಆಂತರಿಕ ಸ್ಪರ್ಧೆಯಲ್ಲಿವೆ.

ಹಿರಿಯ ರಾಜಕಾರಣಿ ಸಿ.ಎಂ. ಉದಾಸಿ ಅವರಿಗೆ ಹಾನಗಲ್‌ನಲ್ಲಿ ಬಿಜೆಪಿಯೊಳಗೆ ಪ್ರಬಲ ಎದುರಾಳಿಗಳಿಲ್ಲ. ಆದರೆ, ಹಾವೇರಿ, ರಾಣೆಬೆನ್ನೂರು ಹಾಗೂ ಬ್ಯಾಡಗಿ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ದಂಡು ದೊಡ್ಡದಿದೆ. ಮತದಾರರಿಗಿಂತ ಹೆಚ್ಚಾಗಿ ಸ್ವಯಂ ಘೋಷಿತ ಆಕಾಂಕ್ಷಿಗಳನ್ನು ನಿಭಾಯಿಸುವುದೇ ನಾಯಕರಿಗೆ ಸವಾಲಾಗಿದೆ.

ಜೆಡಿಎಸ್: ಇತ್ತ ಜೆಡಿಎಸ್, ರಾಣೆಬೆನ್ನೂರು (ಶ್ರೀಪಾದ ಸಾವುಕಾರ), ಹಾವೇರಿ (ಡಾ.ಸಂಜಯ ಡಾಂಗೆ) ಮತ್ತು ಶಿಗ್ಗಾವಿ–ಸವಣೂರ (ಅಶೋಕ ಬೇವಿನಮರ) ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿರುವ ಕೆಲ ಪ್ರಬಲ ಟಿಕೆಟ್ ಆಕಾಂಕ್ಷಿಗಳು ಕೊನೆ ಕ್ಷಣದಲ್ಲಿ ‘ಕೈ’, ’ಕಮಲ’ ಬಿಟ್ಟು ‘ತೆನೆ’ ಹೊತ್ತರೂ ಅಚ್ಚರಿ ಇಲ್ಲ. ಈ ನಿಟ್ಟಿನಲ್ಲಿ ಕೆಲವು ನಾಯಕರ ಹೆಸರುಗಳು ಈಗಾಗಲೇ ತಳಕು ಹಾಕಿಕೊಂಡಿದೆ. ಹಲವರು ಹಿಂಬಾಗಿಲಿನಿಂದ ಕದ ತಟ್ಟುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ.

ಒಟ್ಟಾರೆ, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯಾರು– ಯಾರಿಗೆ ‘ದೋಸ್ತಿ ಅಥವಾ ದುಷ್ಮನಿ’ ಆಗುತ್ತಾರೆ ಎಂಬುದೇ ಜನರ ಮುಂದಿನ ಪ್ರಶ್ನೆ. ಮಕರ ಸಂಕ್ರಾಂತಿಯ ಬಳಿಕ ಚುನಾವಣಾ ಕಣವೂ ಕಾವೇರಲಿದೆ.

* * 

ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ಆರಂಭಗೊಂಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಹಲವು ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ
– ಅಶೋಕ ಬೇವಿನಮರ
ಅಧ್ಯಕ್ಷ, ಜೆಡಿಎಸ್ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT