ಎಲ್ಲರನ್ನೂ ಒಗ್ಗೂಡಿಸುವ ಬಾಣಂತಿ ದೇವಿ ಜಾತ್ರೆ

7

ಎಲ್ಲರನ್ನೂ ಒಗ್ಗೂಡಿಸುವ ಬಾಣಂತಿ ದೇವಿ ಜಾತ್ರೆ

Published:
Updated:

ಮುಂಡಗೋಡ: ವರ್ಷಾರಂಭದ ಮೊದಲ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾಗೂ ಹತ್ತಾರು ಹಳ್ಳಿ, ಪಟ್ಟಣದಲ್ಲಿ ಅಪಾರ ಭಕ್ತ ಸಮೂಹ ಹೊಂದಿರುವ ಬಾಣಂತಿ ದೇವಿ ಜಾತ್ರೆಯು ಸಂಕ್ರಾಂತಿ ಹಬ್ಬದಂದು ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ.

ತಾವರೆ ಹೂಗಳಿಂದ ಕಂಗೊಳಿಸುವ ಕೆರೆ ಒಂದೆಡೆಯಾದರೆ, ಮತ್ತೊಂದೆಡೆ ತೋಟ, ಗದ್ದೆಗಳು. ಇದರ ಮಧ್ಯೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ದೇವಸ್ಥಾನವಿದೆ. ಬಲಬದಿಯಲ್ಲಿರುವ ವಿಶಾಲವಾದ ಮಾವಿನ ತೋಟದಲ್ಲಿ ಜಾತ್ರಾ ಮಳಿಗೆ, ಮನರಂಜನಾ ಆಟಗಳು ಭಕ್ತರ ಸಂತಸವನ್ನು ಇಮ್ಮಡಿಗೊಳಿಸುತ್ತವೆ.

ಸಾಲಗಾಂವ, ಚಿಗಳ್ಳಿ, ಅಜ್ಜಳ್ಳಿ, ಕಾವಲಕೊಪ್ಪ, ತುಂಬರಗಿ, ಹಿರೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆಯುತ್ತಾರೆ. ಹತ್ತಾರು ಹಳ್ಳಿಗಳ ಭಕ್ತರನ್ನು ಒಗ್ಗೂಡಿಸುವ ಈ ಜಾತ್ರೆಯು, ಗ್ರಾಮೀಣ ಜನಜೀವನದಲ್ಲಿ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸುತ್ತಿದೆ.

ಕಾರ್ಯಕ್ರಮ:ದೇವಿಯ ಸನ್ನಿಧಿಯಲ್ಲಿ ಸಂಕ್ರಾಂತಿಯಂದು ಪ್ರಥಮ ಪೂಜೆ, ಮಹಾಅಭಿಷೇಕ, ಪ್ರಣಮ ಪಂಚಾಕ್ಷರಿ ಮಂತ್ರ ಘೋಷದೊಂದಿಗೆ ಸಪ್ತಾಹಕ್ಕೆ ಚಾಲನೆ ನೀಡಲಾಗುತ್ತದೆ. 15ರಂದು ಮಹಾಪೂಜೆ, ಉಡಿ ತುಂಬುವುದು, ಹಣ್ಣು ಕಾಯಿ ಸಮರ್ಪಣೆ ಸೇರಿ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಸಂಜೆ 4ಕ್ಕೆ ದೇವಿಯ ಪಲ್ಲಕ್ಕಿ ಉತ್ಸವ ಮತ್ತು ತೆಪ್ಪೋತ್ಸವ ನೆರವೇರುತ್ತದೆ. ಜಾತ್ರೆಯ ಅಂಗವಾಗಿ ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿಯ ಸಿದ್ಧಾರೂಢ ಡೊಳ್ಳಿನ ಮೇಳದವರಿಂದ ಮಜಲು, ಪದ, ಭಜನೆ ಕಾರ್ಯಕ್ರಮ ನಡೆಯಲಿದೆ.

ಬಾಣಂತಿ ದೇವಿ ಕೆರೆ:ಕೆರೆ ನಿರ್ಮಾಣ ಸಂದರ್ಭದಲ್ಲಿ ಎಷ್ಟೇ ಆಳವಾಗಿ ಅಗೆದರೂ ನೀರು ಬರಲಿಲ್ಲವಂತೆ. ನೀರು ಏಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಚರ್ಚೆಯಲ್ಲಿ ತೊಡಗಿದ ಸಂದರ್ಭದಲ್ಲಿಯೇ, ತವರುಮನೆಗೆ ಬಾಣಂತನಕ್ಕೆ ಬಂದಿದ್ದ ಊರ ಮನೆಮಗಳು ಕೆರೆಯ ದಡಕ್ಕೆ ಹೋಗಿ ನೋಡುತ್ತಿರುವ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೆ ಕೆರೆಯಲ್ಲಿ ನೀರು ಉಕ್ಕಿ ಬಾಣಂತಿ ಮಗಳನ್ನು ಬಲಿ ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಕೆರೆಗೆ ಬಾಣಂತಿ ದೇವಿ ಕೆರೆ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ.

‘ಬಾಣಂತಿದೇವಿಗೆ ಹರಕೆ ಹೊತ್ತರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ. ಭಕ್ತರು ಶಿಶುವನ್ನು ತಣ್ಣೀರಲ್ಲಿ ಮೀಯಿಸಿ, ಜೋಡಿಕುಡಿ ಬಾಳೆಯ ತೆಪ್ಪದಲ್ಲಿ ತೇಲಿಸುವ ಹರಕೆ ಹೊರುತ್ತಾರೆ. ಅದರಂತೆ ತೆಪ್ಪೋತ್ಸವದಂದು ಮಕ್ಕಳನ್ನು ತಣ್ಣೀರಲ್ಲಿ ಮೀಯಿಸುವುದನ್ನು ಕಾಣಬಹುದು’ ಎಂದು ಭಕ್ತ ಸಂತೋಷ ತಳವಾರ ಹೇಳಿದರು.

ಕಳೆಗುಂದಿದ ಜಾನುವಾರು ಜಾತ್ರೆ:ದಶಕಗಳ ಹಿಂದೆ ತಿಂಗಳ ಪೂರ್ತಿ ನಡೆಯುತ್ತಿದ್ದ ಬಾಣಂತಿ ದೇವಿ ಜಾತ್ರೆ ಇತ್ತೀಚಿನ ವರ್ಷಗಳಲ್ಲಿ ನಾಲ್ಕೈದು ದಿನಗಳಿಗೆ ಸೀಮಿತಗೊಂಡಿದೆ. ಈ ಹಿಂದೆ ಜಾತ್ರೆ ಆರಂಭವಾದ ನಾಲ್ಕೈದು ದಿನಗಳ ನಂತರ ‘ಜಾನುವಾರು ಜಾತ್ರೆ’ ನಡೆಯುತ್ತಿತ್ತು. ರೈತರು ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಇಲ್ಲಿ ಬರುತ್ತಿದ್ದರು. ಸುಗ್ಗಿ ಮುಗಿಸಿದ ಸಂತಸದಲ್ಲಿರುತ್ತಿದ್ದ ರೈತರು, ಜಾನುವಾರುಗಳನ್ನು ಖರೀದಿ ಮಾಡುವ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿತ್ತು. ಆದರೆ ಈಗ ಜಾನುವಾರುಗಳ ಜಾತ್ರೆ ನೆಪಕ್ಕೆ ಮಾತ್ರ ಸೀಮಿತಗೊಂಡಿದೆ’ ಎಂದು ವಕೀಲ ಗುಡ್ಡಪ್ಪ ಕಾತೂರ ಹೇಳಿದರು.

ಶಾಂತೇಶ ಬೆನಕನಕೊಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry