ಕಾನೂನು ಬಾಹಿರ ಆಮದು: ಕ್ರಮಕ್ಕೆ ಆಗ್ರಹ

7
ಕಾಳುಮೆಣಸು ಬೆಳೆಗಾರರಿಗೆ ಬೆಲೆ ಕುಸಿತದ ಆತಂಕ ಬೇಡ, ಕೇಂದ್ರ ಸಚಿವರ ಜತೆಗೆ ನಿಯೋಗ ಭೇಟಿ

ಕಾನೂನು ಬಾಹಿರ ಆಮದು: ಕ್ರಮಕ್ಕೆ ಆಗ್ರಹ

Published:
Updated:
ಕಾನೂನು ಬಾಹಿರ ಆಮದು: ಕ್ರಮಕ್ಕೆ ಆಗ್ರಹ

ಮಡಿಕೇರಿ: ‘ಭಾರತಕ್ಕೆ ಕಾಳುಮೆಣಸು ಆಮದಿನಲ್ಲಿ ಕಾನೂನು ಬಾಹಿರ ವಹಿವಾಟು ನಡೆಯುತ್ತಿದ್ದು, ಕೇಂದ್ರ ವಾಣಿಜ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಕಾಳುಮೆಣಸು ಬೆಳೆಗಾರರ ಸಮನ್ವಯ ಸಮಿತಿ ಸದಸ್ಯರು ಪದಾಧಿಕಾರಿಗಳು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ವಾಣಿಜ್ಯ ಸಚಿವರನ್ನು ಭೇಟಿ ಮಾಡಿದ ಬೆಳೆಗಾರರ ನಿಯೋಗ ಕಾನೂನುಬಾಹಿರ ಚಟುವಟಿಕೆ ನಡೆಸುವ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಒತ್ತಾಯಿಸಿತು.

‘ಕಾಳುಮೆಣಸು ಆಮದಿಗೆ ಪ್ರತಿ ಕೆ.ಜಿಗೆ ₹ 500 ಕನಿಷ್ಠ ಆಮದು ಬೆಲೆ ಹೇರಿದ್ದರೂ ವ್ಯಾಪಾರಿಗಳು ಕಳ್ಳದಾರಿ ಕಂಡುಕೊಂಡು ಬೆಳೆಗಾರರಿಗೆ ದ್ರೋಹ ಬಗೆಯುತ್ತಿದ್ದಾರೆ. ವಿಯೆಟ್ನಾಂ ದೇಶದ ಕಳಪೆ ಕಾಳುಮೆಣಸನ್ನು ಕೆ.ಜಿಗೆ ₹ 130ರ ಆಸುಪಾಸಿನಲ್ಲಿ ಖರೀದಿಸಿ ಶ್ರೀಲಂಕಾಕ್ಕೆ ತಂದು ಅಲ್ಲಿಂದ ಭಾರತಕ್ಕೆ ಆಮದು ಮಾಡಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಲಾಗುತ್ತಿದೆ. ಕಡಿಮೆ ದರದಲ್ಲಿ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿರುವುದು ದರ ಕುಸಿತಕ್ಕೆ ಕಾರಣ’ ಎಂದು ಸಮಿತಿ ಪ್ರಧಾನ ಸಂಚಾಲಕ ಕೊಂಕೋಡಿ ಪದ್ಮನಾಭ ಸಚಿವರ ಗಮನಕ್ಕೆ ತಂದಿದ್ದಾರೆ.

‘ವಿಯೆಟ್ನಾಂನಿಂದ ಆಮದಾದ ಕಾಳುಮೆಣಸಿನಲ್ಲಿ ವಿಷಕಾರಿ ಅಂಶಗಳಿವೆ. ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೊಳಪಡಿಸಬೇಕು. ಶ್ರೀಲಂಕಾದಿಂದ ಆಮದಾಗುವ ಕಾಳು ಮೆಣಸು, ಅದು ವಿಯೆಟ್ನಾಂ ಕಾಳುಮೆಣಸು. ಅದರ ಮೂಲವನ್ನು ಪತ್ತೆ ಮಾಡಬೇಕು’ ಎಂದು ಕೋರಿದರು.

‘ಜರ್ಮನಿ, ಸ್ಪೇನ್‌, ಇಟಲಿಯಲ್ಲಿ ಕಾಳು ಮೆಣಸು ಬೆಳೆಯುವುದಿಲ್ಲ. ಆದರೂ, ಅಲ್ಲಿಂದ ಕಾಳುಮೆಣಸು ಆಮದು ಆಗುತ್ತಿದೆ. ಆಮದಿನಲ್ಲಿ ಭಾರೀ ಅವ್ಯವಹಾರ ನಡೆಯುತ್ತಿರುವ ಸಂಶಯವಿದೆ. ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ಕಾಳುಮೆಣಸು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಸಚಿವ ಸುರೇಶ್ ಪ್ರಭು ಅವರು ‘ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುತ್ತೇನೆ’ ಎಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ಕಾಳು ಮೆಣಸಿನ ದರ ಕನಿಷ್ಠ ₹ 450 ತಲುಪಬಹುದು. ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಕೊಂಕೋಡಿ ಪದ್ಮನಾಭ ರೈತರಲ್ಲಿ ಮನವಿ ಮಾಡಿದ್ದಾರೆ.

ನಿಯೋಗದಲ್ಲಿ ಸಮಿತಿ ಸಮನ್ವಯ ಸಂಚಾಲಕ ಕೆ.ಕೆ. ವಿಶ್ವನಾಥ್, ಕ್ಯಾಂಪ್ಕೊ ಪ್ರತಿನಿಧಿಗಳಾದ ಮಂಜುನಾಥ್, ದಯಾನಂದ ಹೆಗ್ಡೆ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಪ್ರತಿನಿಧಿ ಪ್ರದೀಪ್ ಪೂವಯ್ಯ, ರಾಜ್ಯ ಬೆಳೆಗಾರರ ಒಕ್ಕೂಟದ ಪ್ರತಿನಿಧಿ ಜಯರಾಂ, ಮಲೆನಾಡು ಅಡಿಕೆ ಮಾರಾಟಗಾರರ ಸಹಕಾರ ಸಂಘದ ಪ್ರತಿನಿಧಿ ಎಡಗೆರೆ ಸುಬ್ರಹ್ಮಣ್ಯ, ಬೆಳೆಗಾರರ ಸಂಘಟನೆಯ ಅಧ್ಯಕ್ಷ ಪ್ರಮೋದ್, ಶಿರಸಿ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರುಕಟ್ಟೆ ಸೊಸೈಟಿ ಪ್ರತಿನಿಧಿಗಳಾದ ಜಿ.ಎಂ. ಹೆಗಡೆ ಇದ್ದರು.

***

ಶ್ರೀಲಂಕಾದಿಂದ ಆಮದಾಗುವ ಕಾಳುಮೆಣಸಿನಲ್ಲಿ ತೆರಿಗೆ ವಂಚನೆ ಆಗುತ್ತಿದ್ದು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು.

-ಕೊಂಕೋಡಿ ಪದ್ಮನಾಭ ಪ್ರಧಾನ ಸಂಚಾಲಕ, ಕಾಳುಮೆಣಸು ಬೆಳೆಗಾರ ಸಮನ್ವಯ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry