15ಕ್ಕೆ ಐತಿಹಾಸಿಕ ಬಾಣಂತಮ್ಮನ ಜಾತ್ರೆ

7
ಶನಿವಾರಸಂತೆ ಬಳಿ ನಡೆಯುವ ಜಾತ್ರೆ

15ಕ್ಕೆ ಐತಿಹಾಸಿಕ ಬಾಣಂತಮ್ಮನ ಜಾತ್ರೆ

Published:
Updated:
15ಕ್ಕೆ ಐತಿಹಾಸಿಕ ಬಾಣಂತಮ್ಮನ ಜಾತ್ರೆ

ಶನಿವಾರಸಂತೆ: ಸಮೀಪದ ಬೆಂಬಳೂರುವಿನಲ್ಲಿ ಜ.16ರಂದು ಶ್ರೀಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ.

ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ಮಾರನೇ ದಿನ ನಡೆಯುವ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸ. ಹರಕೆ ಈಡೇರಲಿದೆ ಎಂಬುದು ನಂಬಿಕೆ. ಶನಿವಾರಸಂತೆ, ಕೊಡ್ಲಿಪೇಟೆ, ಯಸಳೂರು ಇತರೆಡೆಯಿಂದ ಅಸಂಖ್ಯ ಭಕ್ತರು ಆಗಮಿಸುತ್ತಾರೆ.

ಇತಿಹಾಸ: ಬಾಣಂತಮ್ಮ ದೇವಿಗೆ 7 ಜನ ಗಂಡುಮಕ್ಕಳು. ಪತಿ ಗೋಪಾಲಕೃಷ್ಣ ದೇವರ ವಿಗ್ರಹ ಕೆರೆಹಳ್ಳಿ ಗ್ರಾಮದಲ್ಲಿ, ಹಿರಿಯ ಮಗ ದೊಡ್ಡಯ್ಯ ವಿಗ್ರಹ ಕೊಂಗಳ್ಳೆ ಗ್ರಾಮದಲ್ಲಿದೆ. ದೊಡ್ಡಯ್ಯನ ಜಾತ್ರೆಯಲ್ಲಿ ಕುಮಾರಲಿಂಗೇಶ್ವರ ಸ್ವಾಮಿಯನ್ನು ಶಾಂತಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದು ಅಲ್ಲಿಯೂ ಜಾತ್ರೆ ನಡೆಯುತ್ತದೆ. 3, 4, 5 ಹಾಗೂ 6ನೇ ಮಕ್ಕಳ ವಿಗ್ರಹ ಹುಲುಕೋಡು, ದೊಡ್ಡ ಕುಂದೂರು, ಹೆತ್ತೂರು, ಕಿತ್ತೂರು ಗ್ರಾಮಗಳಲ್ಲಿ ಪ್ರತಿಷ್ಠಾಪನೆಯಾಗಿದೆ. ಅಲ್ಲಿ ಹುಲುಕೋಡಯ್ಯ, ಒಬ್ಬೆ ಕುಮಾರ ಲಿಂಗೇಶ್ವರ ಮತ್ತು ಕುಮಾಲಿಂಗೇಶ್ವರ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ.

ಕೊನೆಯ ಮಗನೇ ಕುಂಟ ಕುಮಾರಲಿಂಗೇಶ್ವರ. ಈತನೂ ತನ್ನ ತೊರೆದು ಬೇರೆಡೆಗೆ ಹೋಗುತ್ತಾನೆ ಎಂದು ಭಾವಿಸಿದ ಬಾಣಂತಮ್ಮ ದೇವಿ ಕಳ್ಳಿ ದೊಣ್ಣೆಯಿಂದ ಮಗನ ಕಾಲಿಗೆ ಹೊಡೆದು ಕಾಲು ಮುರಿದು ಕೂರಿಸಿದಳು ಎಂಬುದು ಪ್ರತೀತಿ.

ಬೆಂಬಳೂರು ಗ್ರಾಮದಲ್ಲಿ ಉಳಿದರೆ ಏನು ಕೊಡುವೆ ಎಂದು ತಾಯಿಯನ್ನು ಪ್ರಶ್ನಿಸಿದಾಗ, ಪ್ರತಿವರ್ಷ ಮಕರ ಸಂಕ್ರಾಂತಿ ಮರುದಿನ ನಡೆಯುವ ಜಾತ್ರೆಯಲ್ಲಿ ಒಪ್ಪೊತ್ತಿನ ಜಾತ್ರೆ ಬಿಟ್ಟುಕೊಡುವುದಾಗಿ ಬಾಣಂತಮ್ಮ ಮಾತು ಕೊಟ್ಟಳಂತೆ.

ಅದರಂತೆ ಪ್ರತಿ ವರ್ಷ ಮಕರ ಸಂಕ್ರಾಂತಿಯ ಮಾರನೆ ದಿನದ ಜಾತ್ರೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ ದವರೆಗೆ ತಾಯಿ ಬಾಣಂತಮ್ಮ ಹೆಸರಿ ನಲ್ಲಿ, ಮಧ್ಯಾಹ್ನ ಮಗ ಕುಮಾರ ಲಿಂಗೇಶ್ವರನ ಹೆಸರಲ್ಲಿ ಜಾತ್ರೆ ಇರುತ್ತದೆ..

ಬೆಂಬಳೂರು ಗ್ರಾಮದ ಗೌಡನಮನೆ ಕಲ್ಲೇಗೌಡರು ತೋಡಿಸಿದ ದೊಡ್ಡಕೆರೆಯಲ್ಲಿ ನೀರು ಬಾರದಿದ್ದಾಗ ಬಾಣಂತಮ್ಮ ದೇವಿ ಪೂಜಿಸಲಾಗಿ ನೀರಿನಿಂದ ತುಂಬಿತಂತೆ. ಅಂದಿನಿಂದ ಬಾಣಂತಮ್ಮ ಇಲ್ಲಿಯೇ ಪ್ರತಿಷ್ಠಾಪಿಸಿ ಜಾತ್ರೆ ನಡೆಯುತ್ತದೆ.

ಸಂಕ್ರಾಂತಿ ದಿನ ಕರುವಿನ ಹಬ್ಬ ದೊಂದಿಗೆ ಜಾತ್ರೆ ಆರಂಭವಾಗಲಿದೆ. ಜ.15ರಂದು ಮಡೆ ಪೂಜೆಗಾಗಿ ಗ್ರಾಮಸ್ಥರು, ಭಕ್ತಾದಿಗಳಿಂದ ದವಸ, ಧಾನ್ಯ, ಬೆಲ್ಲ, ತರಕಾರಿಗಳನ್ನು ಪಟೇಲರ ಮನೆಯಲ್ಲಿ ಸ್ವೀಕರಿಸಲಾಗುವುದು.

ಸಂಜೆ 5ರಿಂದ 8 ಗಂಟೆಯವರೆಗೆ ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ದೇವರ ಗಂಗಾ ಸ್ನಾನ, ಅಡುಗೆ ಒಲೆ ಪೂಜಾ ಕಾರ್ಯ ನಡೆಯುತ್ತದೆ.

ರಾತ್ರಿ 9ಗಂಟೆಗೆ ಊರಿನ ಪಟೇಲರ ಮನೆಯಲ್ಲಿ ಮಡೆಪೂಜೆ ನಡೆಯಲಿದೆ. ಜ.16ರ ಬೆಳಿಗ್ಗೆ 9ಕ್ಕೆ ಬಾಣಂತಮ್ಮ ದೇವಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಜಾತ್ರೆಗೆ ಕರೆತರಲಾಗುತ್ತದೆ.

ಮಧ್ಯಾಹ್ನ ಬಾಣಂತಮ್ಮ ಜಾತ್ರೆ ಮುಗಿಯಲಿದ್ದು, ಬಳಿಕ ಕುಮಾರ ಲಿಂಗೇಶ್ವರ ದೇವರ ವಿಗ್ರಹವನ್ನು ಮೆರವಣಿಗೆಯಲ್ಲಿ ಜಾತ್ರಾ ಮೈದಾನಕ್ಕೆ ಕೊಂಡೊಯ್ದು ಜಾತ್ರೆ ನಡೆಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry