ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಕೆಂಡ್‌ನಲ್ಲಿ ಬರುವವರಿಗೆ ಟಿಕೆಟ್‌ ನೀಡಬೇಡಿ

Last Updated 14 ಜನವರಿ 2018, 10:18 IST
ಅಕ್ಷರ ಗಾತ್ರ

ಕೆಜಿಎಫ್‌: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಶಾಸಕಿ ವೈ.ರಾಮಕ್ಕ ಸೇರಿದಂತೆ ಅವರ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನೀಡಬಾರದು' ಎಂದು ಮೂಲ ಬಿಜೆಪಿ ಮುಖಂಡರು ಶನಿವಾರ ರಾಬರ್ಟಸನ್‌ಪೇಟೆಯಲ್ಲಿ ನಡೆಸಿದ ಸಭೆಯಲ್ಲಿ ಒತ್ತಾಯಿಸಿದರು.

ಮುಖಂಡ ನವೀನ್‌ರಾಂ ಮಾತನಾಡಿ, ‘ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ. ಆದರೆ ನಮ್ಮ ಕ್ಷೇತ್ರದಲ್ಲಿ ಮಗ, ಅಮ್ಮ, ಮೊಮ್ಮಗಳು ಹೀಗೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಆದರೆ ಈಗ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಸ್ಥಳೀಯರಿಗೆ ಟಿಕೆಟ್‌ ನೀಡಬೇಕು. ವೀಕೆಂಡ್‌ನಲ್ಲಿ ಬೆಂಗಳೂರಿನಿಂದ ಇಲ್ಲಿಗೆ ಬಂದು ಹೋಗುವವರಿಗೆ ಟಿಕೆಟ್ ನೀಡಬಾರದು’ ಎಂದು ಜನರು ಬಯಸುತ್ತಿದ್ದಾರೆ’ ಎಂದರು.

‘ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದರೂ, ಭ್ರಷ್ಟಾಚಾರ ಮಿತಿ ಮೀರಿದೆ. ಪ.ಜಾತಿ ಮತ್ತು ವರ್ಗದವರಿಗೆ ಸರ್ಕಾರ ನೀಡುವ ಕೊಳವೆಬಾವಿಗಳನ್ನು ಮಂಜೂರು ಮಾಡಿಸಿಕೊಳ್ಳಲು ₹ 60 ಸಾವಿರ ನೀಡಬೇಕು. ಕಂಗಾಂಡ್ಲಹಳ್ಳಿಯಲ್ಲಿ ಆರು ಜನ ತಮ್ಮ ಮನೆಯಲ್ಲಿದ್ದ ಜಾನುವಾರುಗಳನ್ನು ಮಾರಿ ಹಣ ಕೊಟ್ಟಿದ್ದಾರೆ. ಇಂತಹ ಜನಪ್ರತಿನಿಧಿಗಳನ್ನು ಇಟ್ಟುಕೊಂಡು ಪಕ್ಷಕ್ಕೆ ಮತ ಕೇಳುವುದು ಹೇಗೆ’ ಎಂದು ಆರೋಪಿಸಿದರು.

ಬೇತಮಂಗಲದ ಮುಖಂಡ ಅಂಬರೀಷ್‌ ಮಾತನಾಡಿ, ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಯಡಿಯೂರಪ್ಪ ಮುಖ ನೋಡಿ ಜನ ಸಂಪಂಗಿಯವರನ್ನು ಆಗ ಶಾಸಕರಾಗಿ ಗೆಲ್ಲಿಸಿದರು. ಅವರ ನಂತರ ತಾಯಿಗೆ ಟಿಕೆಟ್‌ ಪಡೆದರು. ಈಗ ಮಗಳಿಗೆ ಟಿಕೆಟ್ ಕೇಳುತ್ತಿದ್ದಾರೆ. ಸ್ಥಳೀಯರಿಗೆ ಮಣೆ ಹಾಕಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಒಗ್ಗಟ್ಟಿನಿಂದ ವರಿಷ್ಠರ ಬಳಿ ನಿಯೋಗ ಹೋಗುವುದಾಗಿ’ ಹೇಳಿದರು.

‘1999 ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಕೆಜಿಎಫ್‌ ನಗರದಲ್ಲಿ ಬಿಜೆಪಿಗೆ 19 ಸಾವಿರ ಮತ ಬಂದಿತು. ಲೋಕಸಭಾ ಚುನಾವಣೆಯಲ್ಲಿ ಡಿ.ಎಸ್.ವೀರಯ್ಯನವರಿಗೆ 75 ಸಾವಿರ ಮತ ಬಂದಿತು. ಆಗ ಸಂಪಂಗಿ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ. ಅಷ್ಟು ಭದ್ರವಾಗಿ ಬಿಜೆಪಿ ಕ್ಷೇತ್ರದಲ್ಲಿ ತಳವೂರಿದೆ. ಈಗ ಸಂಪಂಗಿ ಅವರು ತಾವೇ ಪಕ್ಷ ಕಟ್ಟಿದ್ದೇನೆ ಎಂದು ಪ್ರಚಾರ ಮಾಡುತ್ತ ಮೂಲ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದ್ದಾರೆ. ಶಾಸಕರ ಭ್ರಷ್ಟಾಚಾರದಿಂದ ಪಕ್ಷದ ಮಾನ ಹರಾಜಾಗುತ್ತಿದೆ’ ಎಂದು ಮುಖಂಡ ವೆಂಕಟೇಶ್‌ ದೂರಿದರು.

‘ವೈ.ಸಂಪಂಗಿ, ಯಡಿಯೂರಪ್ಪನವರಿಗೆ ಮೋಸ ಮಾಡಿ ಭಿನ್ನಮತ ಸೃಷ್ಟಿಸಿದ್ದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸಹಾಯ ಮಾಡಿದ್ದರು. ಇವರ ಪಕ್ಷ ನಿಷ್ಠೆ ಅನುಮಾನಕ್ಕೆ ಆಸ್ಪದ ನೀಡುತ್ತದೆ’ ಎಂದು ಮುತ್ಯಾಲಮ್ಮ ದೂರಿದರು. ಡಾ.ಅರಿವಳಗನ್‌, ಯಶ್ವಂತ್‌, ನವೀನ್‌ಜೈನ್‌, ವಿಶ್ವನಾಥ್ ರಾವ್‌ ಮಾತನಾಡಿದರು. ಮುಖಂಡರಾದ ರಾಮಚಂದ್ರ, ತೇಜಾ ಇದ್ದರು.

ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ

ಕೆಜಿಎಫ್‌: ‘ಸುಂದರಪಾಳ್ಯದಲ್ಲಿ ಭಾನುವಾರ ನಡೆಯಲಿರುವ ಪರಿವರ್ತನಾ ಯಾತ್ರೆ ಅಂಗವಾಗಿ ಗ್ರಾಮದಲ್ಲಿ ಮೆರವಣಿಗೆ ಆಯೋಜಿಸಲಾಗಿದೆ’ ಎಂದು ಬಿಜೆಪಿ ಮುಖಂಡ ವೈ.ಸಂಪಂಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗಡಿ ಭಾಗದ ಗ್ರಾಮದಲ್ಲಿ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ ನಡೆಸಬೇಕು ಎಂದು ಮುಖಂಡರು ತೀರ್ಮಾನಿಸಿದ್ದರು. ಅದರಂತೆ ಕಾರ್ಯಕ್ರಮದಲ್ಲಿ ಭಾಗವಹಿಸಲು 40 ಸಾವಿರ ಜನರಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ. ಇದು ಪಕ್ಷದ ಕಾರ್ಯಕ್ರಮವಾಗಿದ್ದರಿಂದ ಬಿಜೆಪಿ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಬರಬೇಕು’ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಪ್ರಕಾಶ್‌ ನಾಯ್ಡು, ಅಶ್ವಿನಿ, ಮುಖಂಡರಾದ ಕಮಲನಾಥನ್‌, ಧರಣಿ, ವಿಜಯಕುಮಾರ್‌, ಮುನಿಸ್ವಾಮಿರೆಡ್ಡಿ ಇದ್ದರು.

* * 

ಬಿಜೆಪಿ ಸಿದ್ಧಾಂತ ಸಂಪಂಗಿ ಕುಟುಂಬಕ್ಕೆ ಗೊತ್ತಿಲ್ಲ. ಕ್ಷೇತ್ರದಲ್ಲಿ ಮೊದಲು ಪರಿವರ್ತನಾ ಯಾತ್ರೆ ಶುರುವಾಗಬೇಕು
ಯಶ್ವಂತ್‌, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT