ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿದೆ

Last Updated 14 ಜನವರಿ 2018, 10:21 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷ ರಾಜ್ಯದಲ್ಲಿ ಧೂಳಿಪಟವಾಗಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದರು.

ಜಿಲ್ಲೆಯ ಶ್ರೀನಿವಾಸಪುರ, ಬಂಗಾರಪೇಟೆ, ಕೋಲಾರ ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಪಕ್ಷದ ಪರಿವರ್ತನಾ ಯಾತ್ರೆಯ ಸಮಾವೇಶದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಅಲ್ಲಿ ಕುಟುಂಬ ರಾಜಕಾರಣದ್ದೇ ಮೇಲುಗೈ ಎಂದು ವ್ಯಂಗ್ಯವಾಡಿದರು.

ಗುಜರಾತ್, ಹರಿಯಾಣ, ಆರುಣಾಚಲ ಪ್ರದೇಶ ಸೇರಿದಂತೆ ದೇಶದ 19 ರಾಜ್ಯಗಳಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಜನ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡಬೇಕು. ಆಗ ಮಾತ್ರ ದೇಶ ಮತ್ತು ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಒಂದೇ ಕುಟುಂಬದವರು ಪ್ರಧಾನಿಗಳಾದರು. ಆದರೆ, ಬಿಜೆಪಿಯಲ್ಲಿ ಆ ರೀತಿ ಇಲ್ಲ. ಪಕ್ಷದ ಯಾರು ಬೇಕಾದರೂ ಪ್ರಧಾನಿ, ಮುಖ್ಯಮಂತ್ರಿ ಆಗಬಹುದು. ಜನ ಪರಿವರ್ತನೆಯಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮನಸು ಮಾಡಬೇಕು ಎಂದು ಕರೆ ನೀಡಿದರು.

ಕಮಿಷನ್‌ ಪಡೆದಿದೆ: ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಹೆಸರೇಳಿಕೊಂಡು ಕೋಟ್ಯಂತರ ರೂಪಾಯಿ ಲೂಟಿ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆ ಆರಂಭಿಸಲಾಯಿತು. ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಯಂತ್ರಗಳು ಮತ್ತು ಪೈಪ್‌ಗಳನ್ನು ಖರೀದಿಸಿ ಗುತ್ತಿಗೆದಾರರಿಂದ ಕಮಿಷನ್‌ ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹಾಗೂ ಕೆಲ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಆರೋಗ್ಯ ಸಚಿವ ರಮೇಶ್‌ಕುಮಾರ್ ತವರಿನಲ್ಲೇ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದೆ. ಇನ್ನು ಅವರು ರಾಜ್ಯದ ಜನರ ಆರೋಗ್ಯವನ್ನು ಹೇಗೆ ಕಾಪಾಡುತ್ತಾರೆ. ಮಾವು ಬೆಳೆಗಾರರ ಹಿತದೃಷ್ಟಿಯಿಂದ ಬಿಜೆಪಿ ಆಡಳಿತಾವಧಿಯಲ್ಲಿ ಮಾವು ಮಂಡಳಿ ರಚಿಸಲಾಯಿತು. ಜತೆಗೆ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಅನುದಾನ ಮಂಜೂರು ಮಾಡಲಾಯಿತು. ಆದರೆ, ಘಟಕ ನಿರ್ಮಿಸುವಲ್ಲಿ ಕಾಂಗ್ರೆಸ್‌ ನಿರ್ಲಕ್ಷ್ಯ ತೋರಿದೆ ಎಂದು ದೂರಿದರು.

ಮರು ತನಿಖೆ: ಪಕ್ಷ ಅಧಿಕಾರಕ್ಕೆ ಬಂದರೆ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದ ಮರು ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ. ಜತೆಗೆ ಕಾಂಗ್ರೆಸ್‌ ಪಕ್ಷದಲ್ಲಿನ ಭ್ರಷ್ಟರ ವಿರುದ್ಧ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿ ಜೈಲಿಗೆ ಅಟ್ಟುತ್ತೇವೆ. ಸಿದ್ದರಾಮಯ್ಯ ಮನೆಗೆ ಹೋದ ನಂತರವಷ್ಟೇ ರಾಜ್ಯಕ್ಕೆ ಅಚ್ಛೇ ದಿನ್‌ ಬರುತ್ತದೆ. ಸಿದ್ದರಾಮಯ್ಯ ಎನ್ನುವ ಹೆಸರು ಅವರ ನಡವಳಿಕೆಗೆ ಸರಿ ಹೊಂದುತ್ತಿಲ್ಲ. ಅವರಿಗೆ ‘ಸಿದ್ದ ರಾವಣ‘ ಎನ್ನುವ ಹೆಸರು ಸರಿ ಹೋಗುತ್ತದೆ ಎಂದು ಲೇವಡಿ ಮಾಡಿದರು.

ಹಾಸ್ಯಾಸ್ಪದ: 3,515 ರೈತರ ಆತ್ಮಹತ್ಯೆ, 6,521 ಕೊಲೆ, 4,236 ನಾಪತ್ತೆ ಪ್ರಕರಣ, 1.25 ಲಕ್ಷ ಅಪರಾಧ ಪ್ರಕರಣಗಳು ಮತ್ತು ಆರ್‌ಎಸ್‌ಎಸ್‌ ಮುಖಂಡರ ಮೇಲಿನ ದೌರ್ಜನ್ಯವೇ ಕಾಂಗ್ರೆಸ್‌ ಸರ್ಕಾರದ ಸಾಧನೆ. ಹಿಂದೂ ಧರ್ಮ ಮತ್ತು ಆಚಾರ ವಿಚಾರಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಸಿದ್ದರಾಮಯ್ಯ ಬಿಜೆಪಿಯವರು ಕೋಮುವಾದಿಗಳು, ಉಗ್ರವಾದಿಗಳು ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಪಕ್ಷದಿಂದ ಸಾಕಷ್ಟು ಮಂದಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದ ಪ್ರಮುಖರು ಸರ್ವೆ ನಡೆಸಿ, ವರದಿ ಆಧಾರದ ಮೇಲೆ ಅಭ್ಯರ್ಥಿ ಘೋಷಣೆ ಮಾಡುತ್ತಾರೆ. ಯಾರೆ ಅಭ್ಯರ್ಥಿಯಾದರೂ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. ಪಕ್ಷವು ರಾಜ್ಯದ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ನಾಲಿಗೆಗೆ ಇತಿ ಮಿತಿಯಿಲ್ಲ. ಅವರು ಅಧಿಕಾರದ ಮದದಲ್ಲಿ ಮನಬಂದಂತೆ ಮಾತನಾಡುವುದನ್ನು ಬಿಡದಿದ್ದರೆ ಇರೋ ಅಲ್ಪಸ್ವಲ್ಪ ಗೌರವವನ್ನು ಕಳೆದುಕೊಳ್ಳುತ್ತಾರೆ. ಅವರ ತುಗಲಕ್‌ ದರ್ಬಾರ್‌ಗೆ ಹೈಕೋರ್ಟ್‌ ಛೀಮಾರಿ ಹಾಕಿದೆ ಎಂದರು.

ಫೆ.28ಕ್ಕೆ ಪರಿವರ್ತನಾ ಯಾತ್ರೆ ಕೊನೆಗೊಳ್ಳಲಿದ್ದು, ಆ ದಿನದ ಸಮಾವೇಶದಲ್ಲಿಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಾರೆ. ರಾಜ್ಯದ ಪ್ರತಿ ಜಿಲ್ಲೆಯ ಸಮಸ್ಯೆಗಳನ್ನು ಬಗ್ಗೆ ಪಟ್ಟಿ ಮಾಡಿದ್ದು, ಮೋದಿಯವರ ಗಮನಕ್ಕೆ ತರುತ್ತೇವೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಮೋದಿಯವರ ಕೈ ಕಾಲು ಹಿಡಿದು ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕೊಲೆಗಡುಕರ ಸರ್ಕಾರ: ‘ರಾಜ್ಯದಲ್ಲಿ ಕೊಲೆಗಡುಕರ ಸರ್ಕಾರವಿದೆ. ಎಲ್ಲೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹೆಣ್ಣು ಮಕ್ಕಳು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು.

‘ಕರಾವಳಿ ಭಾಗದ ಜನರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆಗೆ ಒತ್ತು ನೀಡಿದ್ದೇವೆ. ರಾಜ್ಯದಲ್ಲಿ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಲಿದ್ದು, ನಮ್ಮ ಸರ್ಕಾರವೇ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತದೆ. ಕಾಂಗ್ರೆಸ್‌ನವರು ನೀರಾವರಿ ಯೋಜನೆ ಹೆಸರಿನಲ್ಲಿ ಕೋಲಾರ ಜಿಲ್ಲೆಯ ಜನರಿಗೆ ವಿಷಪೂರಿತ ನೀರು ಕುಡಿಸಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ಸಿದ್ದರಾಮಯ್ಯಗೆ ಗಲಿಬಿಲಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದ ₹ 3 ಲಕ್ಷ ಕೋಟಿಯು ಕಾಂಗ್ರೆಸ್‌ ಮುಖಂಡರ ಮನೆ ಸೇರಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಆ ಹಣದ ಲೆಕ್ಕ ಕೇಳಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಲಿಬಿಲಿಯಾಗಿದ್ದಾರೆ. ಜನ ಇಂತಹ ಭ್ರಷ್ಟ ಸರ್ಕಾರವನ್ನು ತೊಲಗಿಸಬೇಕು. ಜತೆಗೆ ಕೇಂದ್ರದಿಂದ ಬಂದ ಅನುದಾನ ಏನಾಯ್ತು ಎಂದು ಕಾಂಗ್ರೆಸ್‌ ಮುಖಂಡರನ್ನು ಪ್ರಶ್ನಿಸಬೇಕು’ ಎಂದು ಶಾಸಕ ಆರ್‌.ಅಶೋಕ ಹೇಳಿದರು.

ಡಿ.ಕೆ.ರವಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇ ತಪ್ಪಾಯಿತು. ಅವರನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಬಿಡುವುದಿಲ್ಲ. ಡಿ.ಕೆ.ರವಿ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಘೋಷಿಸಿದರು.

ನಾಲ್ಕೂವರೆ ವರ್ಷದಿಂದ ನಿದ್ದೆಯಲ್ಲಿದ್ದ ಕಾಂಗ್ರೆಸ್ ಸರ್ಕಾರ ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ. ಪ್ರತಿ ವ್ಯಕ್ತಿಯ ಮೇಲೆ ₹ 38 ಸಾವಿರ ಸಾಲ ಮಾಡಿಟ್ಟಿದೆ. ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಸಿದ್ದರಾಮಯ್ಯರ ದರ್ಬಾರು ನೋಡೊಕಾಗಲ್ಲ. ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಹೀಗಾಗಿ ಸಾಲ ಮಾಡಿ ಹೋಗುತ್ತಿದ್ದಾರೆ. ಕಾಂಗ್ರೆಸ್‌ಗೆ ಕೇಂದ್ರದಲ್ಲಿ ವಿರೋಧ ಪಕ್ಷದ ಸ್ಥಾನಮಾನಕ್ಕೆ ಅಗತ್ಯವಿರುವಷ್ಟು ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌ ಮುಖಂಡರು ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಸದಸ್ಯರನ್ನು ಎತ್ತಿ ಕಟ್ಟಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಸಮಾಜ ವಿರೋಧಿ ಸಂಘಟನೆಗಳ ವಿರುದ್ಧ ನೀಡಿದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಕಾಂಗ್ರೆಸಿಗರು ಉಗ್ರ ಸಂಘಟನೆಯ ಪಟ್ಟ ಕಟ್ಟುತ್ತಾರೆ. ಇದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರದಲ್ಲಿ ಪ್ರಥಮ: ‘ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ’ ಎಂದು ಸಂಸದ ಪಿ.ಸಿ.ಮೋಹನ್ ಕುಟುಕಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜನರಿಗೆ ರಕ್ಷಣೆ ಇಲ್ಲವಾಗಿದೆ. ರೈತರ ಸರಣಿ ಆತ್ಮಹತ್ಯೆ ನಡೆದರೂ ಅವರ ಸಮಸ್ಯೆ ಬಗೆಹರಿಸುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಸಮಾಜ ಕಲ್ಯಾಣ ಸಚಿವ ವಿದ್ಯಾರ್ಥಿನಿಲಯಗಳಿಗೆ ಹಾಸಿಗೆ ದಿಂಬು ವಿತರಣೆಯಲ್ಲಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌, ಶಾಸಕರಾದ ವೈ.ಎ. ನಾರಾಯಣಸ್ವಾಮಿ, ವೈ.ರಾಮಕ್ಕ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ವೀರಯ್ಯ, ಬಿ.ಜೆ.ಪುಟ್ಟಸ್ವಾಮಿ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಮುನಿವೆಂಕಟಪ್ಪ, ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ಎ.ನಾಗರಾಜ್, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹನುಮಂತರಾಯಪ್ಪ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಶಿಸ್ತು ಮಾಯ

ಕೋಲಾರದಲ್ಲಿ ಯಡಿಯೂರಪ್ಪ ಜತೆ ಫೋಟೊ ತೆಗೆಸಿಕೊಳ್ಳುವ ಹಟಕ್ಕೆ ಬಿದ್ದ ಬಿಜೆಪಿಯ ಸ್ಥಳೀಯ ಮುಖಂಡರು ಸಾಲು ಸಾಲಾಗಿ ವೇದಿಕೆಗೆ ನುಗ್ಗಿದರು. ಯಡಿಯೂರಪ್ಪರ ಭಾಷಣ ಮುಗಿಯುವವರೆಗೂ ಮುಖಂಡರು ಅಂಗರಕ್ಷಕರಂತೆ ಅವರ ಹಿಂದೆಯೇ ಸಾಲುಗಟ್ಟಿ ನಿಂತಿದ್ದರು. ಶಿಸ್ತಿನ ಪಕ್ಷ ಎಂದು ಹೆಸರಾಗಿರುವ ಬಿಜೆಪಿಯ ಮುಖಂಡರಲ್ಲಿ ಶಿಸ್ತು ಮಾಯವಾಗಿತ್ತು. ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಚಹಳ್ಳಿ ವೆಂಕಟರೆಡ್ಡಿ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತಪ್ಪ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಸದಸ್ಯ ಎಸ್‌.ಆರ್‌.ಮುರಳೀಗೌಡ ಪರಸ್ಪರ ಸ್ಪರ್ಧೆಗೆ ಇಳಿದವರಂತೆ ಯಡಿಯೂರಪ್ಪರ ಹಿಂದೆ ನಿಂತು ಫೋಸು ನೀಡಿದರು.

ಮಧ್ಯಸ್ಥಿಕೆಗೆ ಒತ್ತಾಯ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಜಿಲ್ಲಾ ಕೇಂದ್ರದ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದಿದ್ದ ಯಡಿಯೂರಪ್ಪರನ್ನು ಸುತ್ತುವರಿದು, ಮಹದಾಯಿ ನೀರಿನ ವಿವಾದದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಗೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು. ಜತೆಗೆ ಕೇಂದ್ರ ಬಜೆಟ್‌ನಲ್ಲಿ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.

ಊಟಕ್ಕೆ ನೂಕು ನುಗ್ಗಲು

ಜಿಲ್ಲಾ ಕೇಂದ್ರದಲ್ಲಿ ಸಮಾವೇಶಕ್ಕೆ ಬಂದಿದ್ದ ಜನರಿಗೆ ಊಟಕ್ಕೆ ಟೊಮೆಟೊ ಪಲಾವ್‌ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 3ಕ್ಕೆ ನಿಗದಿಯಾಗಿದ್ದ ಸಮಾವೇಶ ಸುಮಾರು ಎರಡು ತಾಸು ತಡವಾಗಿ ಆರಂಭವಾಯಿತು. ಊಟ ಮಾಡದೆ ಹಸಿದು ಕುಳಿತಿದ್ದ ಜನ ಸಮಾವೇಶ ಮುಗಿಯುತ್ತಿದ್ದಂತೆ ಊಟಕ್ಕೆ ಮುಗಿಬಿದ್ದರು. ಇದರಿಂದ ನೂಕು ನುಗ್ಗಲು ಉಂಟಾಗಿ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಯಿತು.

ವಹಿವಾಟು ಜೋರು

ಎಲ್ಲೆಡೆ ಸಮಾವೇಶ ಸುಮಾರು ಎರಡು ತಾಸು ತಡವಾಗಿ ಆರಂಭವಾಯಿತು. ಸಮಾವೇಶಕ್ಕೆ ಬಂದಿದ್ದ ಜನ ಬಿಸಿಲ ಝಳದಿಂದ ತತ್ತರಿಸಿದರು. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡದ ಕಾರಣ ಜನ ಬಾಯಾರಿಕೆ ತಡೆಯಲಾಗದೆ ಸೌತೆಕಾಯಿ ಖರೀದಿಸಿ ತಿನ್ನುತ್ತಿದ್ದ ದೃಶ್ಯ ಕಂಡುಬಂತು. ಸ್ಥಳದಲ್ಲಿ ಕಡಲೆಕಾಯಿ ವಹಿವಾಟು ಜೋರಾಗಿತ್ತು.

ಟೋಕನ್‌ ಹಂಚಿಕೆ

ಶ್ರೀನಿವಾಸಪುರದಲ್ಲಿ ಪಕ್ಷದ ಮುಖಂಡರು ಹೊಸ ಬಟ್ಟೆಯ ಆಮಿಷವೊಡ್ಡಿ ಜನರನ್ನು ಸಮಾವೇಶಕ್ಕೆ ಕರೆತಂದಿದ್ದರು. ಮಹಿಳೆಯರಿಗೆ ಸೀರೆ, ಪುರುಷರಿಗೆ ಶರ್ಟ್‌ ಮತ್ತು ಪ್ಯಾಂಟ್‌ ಕೊಡುವುದಾಗಿ ಹೇಳಿ ಮುಖಂಡರು ಸಮಾವೇಶದ ಸ್ಥಳದಲ್ಲಿ ಟೋಕನ್‌ ಹಂಚಿದರು. ಸಮಾವೇಶ ಮುಗಿದ ಬಳಿಕ ವಾಹನಗಳ ಬಳಿ ಹಣ ಹಂಚುತ್ತಿದ್ದ ದೃಶ್ಯ ಕಂಡುಬಂತು.

ಕಾಂಗ್ರೆಸಿಗರು ದಲಿತ ವಿರೋಧಿಗಳು

ಕೋಲಾರ: ‘ಬಾಯಿ ಬಿಟ್ಟರೆ ದಲಿತಪರ ಎನ್ನುವ ಕಾಂಗ್ರೆಸಿಗರು ಅಂಬೇಡ್ಕರ್‌ಗೆ ಭಾರತ ರತ್ನ ಪ್ರಶಸ್ತಿ ಕೊಡದೆ ರಾಜಕೀಯವಾಗಿ ಅವಮಾನಿಸಿದರು. ಅಲ್ಲದೇ, ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಕಾಂಗ್ರೆಸಿಗರು ದಲಿತ ವಿರೋಧಿಗಳು’ ಎಂದು ಬಿ.ಎಸ್.ಯಡಿಯೂರಪ್ಪ ಗುಡುಗಿದರು.

ಬಾಬು ಜಗಜೀವನ್‌ ರಾಮ್‌ ಪ್ರಧಾನಿಯಾಗದಂತೆ ಕಾಂಗ್ರೆಸ್‌ ಅಡ್ಡಗಾಲು ಹಾಕಿತು. ಇತಿಹಾಸ ಕೆದಕಿದರೆ ಕಾಂಗ್ರೆಸ್‌ನ ಗೋಸಂಬಿತನ ಗೊತ್ತಾಗುತ್ತದೆ. ದಲಿತರು ಆ ಪಕ್ಷಕ್ಕೆ ಮತ ಹಾಕುವುದು ಘೋರ ಅಪರಾಧ ಎಂದು ಕಿಡಿಕಾರಿದರು.

ರಾಜ್ಯದ ಜನ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮೋಸ ಹೋಗಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಆ ರೀತಿಯ ತಪ್ಪು ಆಗಬಾರದು. ದಲಿತರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT