ಜೀರ್ಣೋದ್ಧಾರಗೊಂಡ ಮಾರಿಯಮ್ಮ ದೇಗುಲ

7
19ರಿಂದ ಬ್ರಹ್ಮ ಕಲಶೋತ್ಸವ, ದೊರೈ ರವಿ ನೇತೃತ್ವದಲ್ಲಿ ಗೋಪುರ ನಿರ್ಮಾಣ

ಜೀರ್ಣೋದ್ಧಾರಗೊಂಡ ಮಾರಿಯಮ್ಮ ದೇಗುಲ

Published:
Updated:
ಜೀರ್ಣೋದ್ಧಾರಗೊಂಡ ಮಾರಿಯಮ್ಮ ದೇಗುಲ

ವಿರಾಜಪೇಟೆ: ಪಟ್ಟಣದ ಮೂರು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶಿವಕೇರಿಯ ಆದಿ ದಂಡಿನ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯವು ಜ.19ರಿಂದ ಜ.22ರವರೆಗೆ ಜರುಗಲಿದೆ.

ತಮಿಳುನಾಡಿನ ಶಿಲ್ಪಿ ಮೈಲಾಡ್ ದೊರೈ ರವಿ ನೇತೃತ್ವದಲ್ಲಿ ಹಿಂದಿದ್ದ ಹಳೆಯ ಗುಡಿಯ ಜಾಗದಲ್ಲಿ ನೂತನ ಗೋಪುರವನ್ನು ನಿರ್ಮಿಸಲಾಗಿದೆ. ಗೊಪುರದಲ್ಲಿ ಮೂಡಿಬಂದಿರುವ ವಿವಿಧ ದೇವತೆಗಳ ಸುಂದರ ವಿಗ್ರಹಗಳು ಗೊಪುರದ ಅಂದವನ್ನು ಹೆಚ್ಚಿಸುತ್ತಿವೆ. ದೇವಾಲಯದ ಗೋಪುರ, ಗರ್ಭಗುಡಿ, ಬಲಿಕಲ್ಲು, ಬಲಿಪೀಠ, ಅರ್ಥಮಂಟಪ ಮುಂತಾದವು ಸುಮಾರು ₹ 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಅಂದಾಜು ₹ 35 ಲಕ್ಷ ವೆಚ್ಚದಲ್ಲಿ ಕಳೆದ ಏಪ್ರಿಲ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಉಳಿದಂತೆ ನೈವೇದ್ಯ ಕೋಣೆ, ನೆಲಹಾಸು ಹಾಗೂ ಆವರಣ ಗೋಡೆಯ ಕಾಮಗಾರಿ ಬಾಕಿಯಿದ್ದು ಇದಕ್ಕೆ ಸುಮಾರು ₹ 5 ಲಕ್ಷದ ಅವಶ್ಯಕತೆಯಿದೆ.

ಹಿನ್ನೆಲೆ: ಹಿಂದೆ ಊರಿನಲ್ಲಿ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತಿದ್ದಾಗ ಸುತ್ತಲಿನ ಜನರು ಈ ಸ್ಥಳದಲ್ಲಿ ಮಾರಿಯಮ್ಮ ದೇವರ ಶಿಲೆ ಪ್ರತಿಷ್ಠಾಪಿಸಿ ದೇವಿ ಮೊರೆ ಹೋದರು. ಈ ಸಂದರ್ಭ ದೇವಿಯ ಕೃಪೆಯಿಂದ ಸಂಕಷ್ಟ ನಿವಾರಣೆಯಾದವು.

ಅಂದಿನಿಂದ ದೇವಿಯ ಮೇಲೆ ನಂಬಿಕೆ ಹೆಚ್ಚಾಯಿತು. ಸುಮಾರು 300 ವರ್ಷಗಳ ಇತಿಹಾಸವಿರುವ ಮಾರಿಯಮ್ಮ ದೇವರ ನೆಲೆಯ ಕುರಿತು ದೇವಾಲಯದಲ್ಲಿ ಇರುವ 126 ವರ್ಷಗಳ ಹಿಂದಿನ ಅಂದರೆ 1889ರ ಲೋಹದ ಫಲಕದಲ್ಲಿರುವ ವಿವರಣೆಯಂತೆ, ಮಡಿಕೇರಿ ರಾಜರುಗಳ ಕಾಲದಲ್ಲಿ ಅಲ್ಲಿನ ಕೋಟೆಯಲ್ಲಿರುವ ಆನೆಗಳನ್ನು ಚಿಕ್ಕಭಂಡಾರದಿಂದ ದೇವಿಯ ಅನುಗ್ರಹದಿಂದ ತರಲಾಯಿತು.

ಈ ಸಂದರ್ಭ ದೇವಿಯ ಮಹಿಮೆಯನ್ನು ಪರೀಕ್ಷಿಸಲು ಪೂಜಾರಿಗಳನ್ನು ಬಂಧನದಲ್ಲಿ ಇಡಲಾಯಿತು. ಈ ಸಂದರ್ಭ ದೇವಿಯ ಕೃಪೆಯಿಂದ ಬಂಧನದಲ್ಲಿರುವ ನಾಲ್ವರಾದ ಕುಂದುರು ಮೊಟ್ಟೆಯ ಚೌಡಮ್ಮನ ಪೂಜಾರಿ ಗೋವಿಂದ, ಕೋಟೆ ಮಾರಿಯ ಪೂಜಾರಿ ಚಿಕ್ಕಣ್ಣ, ಕಣತ್ತೂರು ಮಾರಿಯ ಪೂಜಾರಿ ಈರಣ್ಣ ಹಾಗೂ ವೀರರಾಜೇಂದ್ರ ಪೇಟೆಯ ಮಾರಿಯ ಪೂಜಾರಿ ಕರಿಯಪ್ಪ ಎಂಬುವವರು ಅಲ್ಲಿಂದ ಪಾರಾದವರು ಎಂಬ ಮಾತುಗಳ ಈ ಲೋಹದ ಫಲಕದಲ್ಲಿದೆ.

ಅಲ್ಲದೇ ಚೆಪ್ಪುಡಿರ ದಿವಾನರು ಒಂದು ಸೇರು ಬೆಳ್ಳಿಯನ್ನು ಕೊಟ್ಟು ದೇವಿಯ ಪ್ರತಿಮೆಯನ್ನು ಮಾಡಿಸಿಕೊಟ್ಟರೆ, ಶಂಭಯ್ಯ ಸಾಹುಕಾರ್ ರಾಮಯ್ಯ ಮತ್ತು ಕೆ.ಅಯ್ಯಪ್ಪ ಅವರು ಗುಡಿ ನಿರ್ಮಾಣಕ್ಕೆ ಸಹಾಯ ಮಾಡಿದರು. ಅಲ್ಲದೇ ದೇವಿಗೆ ಕೋಣ ಬಲಿ ಕೊಡಲು ಸರ್ಕಾರದಿಂದ ಅನುಮತಿಯನ್ನು ಕೊಟ್ಟಿರುತ್ತಾರೆ ಎಂಬ ಉಲ್ಲೇಖವೂ ಈ ಫಲಕದಲ್ಲಿದೆ.

ಪಟ್ಟಣದ ಉಳಿದ ಎರಡು ಶಕ್ತಿ ದೇವತೆಗಳಾದ ತೆಲುಗರ ಬೀದಿಯಲ್ಲಿನ ದಕ್ಷಿಣ ಮಾರಿಯಮ್ಮ ಹಾಗೂ ಮೀನುಪೇಟೆಯಲ್ಲಿನ ಕಂಚಿ ಕಾಮಾಕ್ಷಿ ದೇವರ ಉತ್ಸವ ಆದಿ ದಂಡಿನ ಮಾರಿಯಮ್ಮನ ಉತ್ಸವದ ನಂತರ ನಡೆಯುವುದು ವಾಡಿಕೆಯಾಗಿದೆ.

ಬ್ರಹ್ಮಕಲಶೋತ್ಸವ ಅಂಗವಾಗಿ ಜ.19ರಂದು ದೇವತಾ ಪ್ರಾರ್ಥನೆ, ಗಣಪತಿ ಹೋಮ, ಕೂಪಶಾಂತಿ, ವಾಸ್ತುಪೂಜೆ ನಡೆಯಲಿದೆ. 20 ಹಾಗೂ 21ರಂದು ಮಹಾಪೂಜೆ ಸೇರಿದಂತೆ ಇತರ ಪೂಜಾ ಕಾರ್ಯಗಳು, ಪಟ್ಟಣದಲ್ಲಿ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ.

ಆ.22ರಂದು ಗಣಪತಿ ಹೋಮ, ಪ್ರತಿಷ್ಠಾ ಹೋಮ, ಕುಂಬಾಭಿಷೇಕ, ಮಾರಿಯಮ್ಮ ಸಹ ಪರಿವಾರ ದೇವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ತಂಬಿಲ, ಮಹಾಪೂಜೆ ನಡೆಯಲಿದೆ. ನಾಲ್ಕು ದಿನವೂ ಅನ್ನ ಸಂತರ್ಪಣೆ ನಡೆಸಲಾಗುತ್ತದೆ.

***

ಒಟ್ಟು ₹ 30 ಲಕ್ಷ ಖರ್ಚು

ಇನ್ನೂ ₹ 5 ಲಕ್ಷದ ಅವಶ್ಯಕತೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry