ತೈವಾನ್ ಪಿಂಕ್ ಪೇರಲ ಹಣ್ಣು ರುಚಿಕಟ್ಟು

7
ಸ್ಥಳೀಯ ಮಾರುಕಟ್ಟೆಯಲ್ಲಿ, ಚೆನ್ನೈ–ಮಂಗಳೂರಿನ ಮಾರುಕಟ್ಟೆಯಲ್ಲಿ ಬೇಡಿಕೆ

ತೈವಾನ್ ಪಿಂಕ್ ಪೇರಲ ಹಣ್ಣು ರುಚಿಕಟ್ಟು

Published:
Updated:
ತೈವಾನ್ ಪಿಂಕ್ ಪೇರಲ ಹಣ್ಣು ರುಚಿಕಟ್ಟು

ತಾವರಗೇರಾ: ಲಿಂಗದಹಳ್ಳಿ ಗ್ರಾಮದ ಹೊರವಲಯದಲ್ಲಿ ವರ್ಷದ ಹಿಂದೆ ಭೂಮಿಯನ್ನು ಹದಗೊಳಿಸಿ, ಹನಿ ನೀರಾವರಿ ವ್ಯವಸ್ಥೆ ಮೂಲಕ ನೆಟ್ಟಿದ್ದ ಪೇರಲ ಸಸಿಗಳು ಈಗ ಬೃಹತ್ ಗಾತ್ರದ ಪೇರಲ ಹಣ್ಣಿನ ಫಸಲು ನೀಡಿವೆ. ಪೇರಲ ಹಣ್ಣನ್ನೇ ನಂಬಿ ಯಶಸ್ವಿಯಾಗಿರುವ ರೈತ ರಾಘವೇಂದ್ರ ಸಿಂಧನೂರು.

7ನೇ ತರಗತಿಯವರೆಗೆ ಓದಿರುವ ರಾಘವೇಂದ್ರ ಅವರು ಬದುಕಿಗೆ ಕೃಷಿಯನ್ನೇ ಅವಲಂಬಿಸಿದ್ದಾರೆ. ವರ್ಷದ ಹಿಂದೆ ನಾಟಿ ಮಾಡಿದ ಪೇರಲ ಸಸಿಗಳು ಈಗ ಉತ್ತಮ ಹಣ್ಣುಗಳನ್ನು ನೀಡಿವೆ. ಹಣ್ಣು ಗಳನ್ನು ಕಟಾವು ಮಾಡಿ, ಮಾರತೊಡಗಿದ್ದಾರೆ. ಆದರೆ ಈ ಹಣ್ಣಿಗೆ ಸ್ಥಳೀಯ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆಯಿಲ್ಲ. ನಷ್ಟ ಎದುರಿಸುವ ಭೀತಿ ಎದುರಾಗಿದೆ.

‘ಒಂದು ಎಕರೆಗೆ 1000 ಸಸಿಗಳನ್ನು ನಾಟಿ ಮಾಡಿದ್ದೇನೆ. ಆಂಧ್ರಪ್ರದೇಶದಿಂದ ತಂದಿರುವ ತೈವಾನ್ ಪಿಂಕ್ ಹೆಸರಿನ ತಳಿ ಇದು. ಬೆಳೆ ಚೆನ್ನಾಗಿ ಬರುತ್ತದೆ. ಒಂದು ಗಿಡಕ್ಕೆ 30ಕ್ಕೂ ಹೆಚ್ಚು ಹಣ್ಣು ಫಸಲು ಸಿಗುತ್ತಿದೆ. ಈ ಸದ್ಯ ಮೊದಲ ಕಟಾವು ಮಾಡಲಾಗುತ್ತಿದ್ದು, 1 ಕೆಜಿ ತೂಕಕ್ಕೆ 2 ಹಣ್ಣು ಬರುತ್ತವೆ’ ಎಂದು ರೈತ ರಾಘವೇಂದ್ರ ತಿಳಿಸಿದರು.

‘ಪ್ರತಿ ಕೆಜಿಗೆ ₹ 35ರ ದರದಲ್ಲಿ ಸುಮಾರು ₹ 5 ಲಕ್ಷ ಮೌಲ್ಯದಷ್ಟು ಹಣ್ಣು ಮಾರಾಟವಾಗಿದೆ. ಬೆಳೆದ ಹಣ್ಣಿಗೆ ಈ ಭಾಗದಲ್ಲಿ ಮಾರುಕಟ್ಟೆ ಕೊರತೆ ಇದ್ದು, ಚೆನೈ ಮತ್ತು ಮಂಗಳೂರು ಮಾರುಕಟ್ಟೆಗೆ ಹಣ್ಣು ಸಾಗಿಸುತ್ತೇನೆ. ಸ್ಥಳೀಯ ಮಾರುಕಟ್ಟೆ ವ್ಯವಸ್ಥೆಯಿದ್ದರೆ, ರೈತರಿಗೆ ಇನ್ನೂ ಹೆಚ್ಚು ಆದಾಯ ಸಿಗುವುದು’ ಎಂದು ತಿಳಿಸಿದರು.

‘ಮೊದಲ ಬೆಳೆಯಿಂದ ಸ್ವಲ್ಪ ಫಸಲು ಸಿಗುತ್ತದೆ. ಮುಂದಿನ ವರ್ಷವೂ ಕಾಯಿ ಮತ್ತು ಹಣ್ಣಿನ ಪ್ರಮಾಣ ಹೆಚ್ಚಾಗಲಿದೆ. ಪ್ರತಿ ಗಿಡವನ್ನು ಸಂರಕ್ಷಿಸಲು ಶ್ರಮವಹಿಸುವುದು ಮುಖ್ಯ. ಹೊಲದಲ್ಲಿನ 4 ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿ ಸಸಿಗಳು ಒಣಗುವ ಸ್ಥಿತಿ ತಲುಪಿದವು. ಅದಕ್ಕಾಗಿ ಟ್ಯಾಂಕರ್ ಮೂಲಕ ನೀರು ಹರಿಸಿದೆ’ ಎಂದು ಅವರು ತಿಳಿಸಿದರು.

ಬೆಳೆ ಮತ್ತು ಕಾಯಿ, ಹಣ್ಣು ಫಸಲಿಗಾಗಿ ರಾಘವೇಂದ್ರ ಅವರು ಬೇವಿನ ಎಣ್ಣೆ, ಸೆಗಣಿ, ಬೆಲ್ಲದ ನೀರು ಮತ್ತು ಕೆಲ ಬಾರಿ ರಾಸಾಯನಿಕ ಕ್ರೀಮಿನಾಶಕ ಸಿಂಪಡಿಸಿದ್ದಾರೆ. ಉತ್ತಮ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ ಎಂಬ ಬೇಸರ ಅವರಿಗೆ ಕಾಡುತ್ತಿದೆ.

ಕೃಷಿ ಚಟುವಟಿಕೆಗೆ ಹಣ ಖರ್ಚು ಮಾಡಿದಷ್ಟು ಲಾಭ ಬರುವುದಿಲ್ಲ ಎಂಬ ಬೇಸರವಿದೆ. ಸ್ಥಳೀಯ ಮಾರುಕಟ್ಟೆ ವ್ಯವಸ್ಥೆಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಅವರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry